Child dies after roof and wall of house collapses due to rain
x

ಮೃತ ಮಗು ಪ್ರಶಾಂತಿ 

ಗಂಗಾವತಿಯಲ್ಲಿ ಮಳೆ: ಮನೆಯ ಚಾವಣಿ, ಗೋಡೆ ಕುಸಿದು ಮಗು ಸಾವು

ತಾಯಿ ಹನುಮಂತಿ ಮಗಳೊಂದಿಗೆ ಕುಟುಂಬಸ್ಥರನ್ನು ಭೇಟಿಯಾಗಲು ತವರು ಮನೆಗೆ ಬಂದಿದ್ದಾಗ ಈ ದಾರುಣ ಘಟನೆ ನಡೆದಿದ್ದು ಕುಟುಂಬದ ಇತರೆ ಸದಸ್ಯರಿಗೂ ಗಾಯಗಳಾಗಿವೆ.


ಕಳೆದ ಮೂರು ದಿನಗಳಿಂದ ಸುರಿದ ಸಾಧಾರಣ ಮಳೆಗೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮನೆಯ ಶೀಟ್ ಮತ್ತು ಗೋಡೆ ಕುಸಿದು ಮಗು ಮೃತಪಟ್ಟಿರುವ ಘಟನೆ ಬುಧವಾರ (ಜು.16) ತಡರಾತ್ರಿ ನಡೆದಿದೆ.

ಮನೆಯ ಚಾವಣಿ ಹಾಗೂ ಗೋಡೆಯ ಕಲ್ಲುಗಳು ಕುಟುಂಬಸ್ಥರ ಮೇಲೆ ಬಿದ್ದಿದ್ದು, ಒಂದೂವರೆ ವರ್ಷದ ಪ್ರಶಾಂತಿ ಹೆಸರಿನ ಹೆಣ್ಣು ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ. ಘಟನೆಯಲ್ಲಿ ಮಗುವಿನ ತಾಯಿ ಹನುಮಂತಿ, ಕುಟುಂಬ ಸದಸ್ಯರಾದ ಹುಸೇನಪ್ಪ, ಫಕೀರಪ್ಪ, ದುರ್ಗಮ್ಮ, ಭೀಮಮ್ಮಗೆ ಗಾಯಗಳಾಗಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಒಂದು ವಾರದಿಂದ ಗಂಗಾವತಿ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಇತ್ತೀಚೆಗೆ ಹನುಮಂತಿ ಅವರು ತಮ್ಮ ಪುಟ್ಟ ಮಗಳೊಂದಿಗೆ ತವರು ಮನೆಗೆ ಬಂದಿದ್ದಾಗ ಈ ಅವಘಡ ನಡೆದಿದೆ.

ಗಂಗಾವತಿ ತಹಶೀಲ್ದಾ‌ರ್ ಯು.ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

Read More
Next Story