
ಸಾಂದರ್ಭಿಕ ಚಿತ್ರ
ಮಳೆ ಅನಾಹುತ: ಮಣ್ಣಿನ ಗೋಡೆ ಕುಸಿದು ಮಗು ಸಾವು, ಹಳ್ಳದಲ್ಲಿ ಕೊಚ್ಚಿಹೋದ ವೃದ್ಧ
ರಾಜ್ಯದ ಗಡಿಭಾಗವಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬೋರಗಿ ಗ್ರಾಮದಲ್ಲಿ, ಹಳ್ಳ ದಾಟಲು ಯತ್ನಿಸಿದ ವೃದ್ಧರೊಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿ, ನಂತರ ಶವವಾಗಿ ಪತ್ತೆಯಾಗಿದ್ದಾರೆ.
ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ದುರಂತಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಮಣ್ಣಿನ ಗೋಡೆ ಕುಸಿದು ಮೃತಪಟ್ಟರೆ, ರಾಜ್ಯದ ಗಡಿ ಭಾಗದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ ವೃದ್ಧರೊಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ರಾಜು ಪತ್ತಾರ್ ಅವರ ನಾಲ್ಕು ವರ್ಷದ ಪುತ್ರ ಸಮರ್ಥ, ಗುರುವಾರ ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ, ಮಳೆಗೆ ನೆನೆದು ಶಿಥಿಲಗೊಂಡಿದ್ದ ಪಕ್ಕದ ಮನೆಯ ಮಣ್ಣಿನ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮವಾಗಿ, ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇನ್ನೊಂದು ದುರಂತದಲ್ಲಿ, ರಾಜ್ಯದ ಗಡಿಭಾಗವಾದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಬೋರಗಿ ಗ್ರಾಮದಲ್ಲಿ, ಹಳ್ಳ ದಾಟಲು ಯತ್ನಿಸಿದ ವೃದ್ಧರೊಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿ, ನಂತರ ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರು, ಗದಗ, ಕಲಬುರಗಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ವರುಣನ ಆರ್ಭಟ ಜೋರಾಗಿದೆ. ಗದಗ ನಗರದಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆ ಸುರಿದರೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ತೊರೆಹಳ್ಳಿ ಕೆರೆ ಕೋಡಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ರಾಜ್ಯದ ಬಹುತೇಕ ಕಡೆ ಕೆರೆ-ಕಟ್ಟೆಗಳು ಮತ್ತು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.