
ಚಿಕ್ಕಮಗಳೂರು: ಹೋಂ ಸ್ಟೇ ಬಾತ್ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು
ಸ್ನಾನಕ್ಕೆಂದು ಬಾತ್ ರೂಮ್‌ಗೆ ಹೋದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಜೊತೆಗಿದ್ದ ಸ್ನೇಹಿತೆ ರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ.
ಹೋಂ ಸ್ಟೇ ಒಂದರ ಬಾತ್ ರೂಮ್‌ನಲ್ಲಿ ಯುವತಿಯೊಬ್ಬರು ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಹೋಂ ಸ್ಟೇನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಯುವತಿಯ ಸಾವಿನ ಕುರಿತು ಹಲವು ಸಂಶಯಗಳು ವ್ಯಕ್ತವಾಗಿವೆ.
ಮೃತ ಯುವತಿಯನ್ನು ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ ರಂಜಿತಾ (27) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎಂಎಸ್ಸಿ ಪದವೀಧರೆ ರಂಜಿತಾ, ತನ್ನ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಬಂದಿದ್ದರು.
ಸ್ನಾನಕ್ಕೆಂದು ಬಾತ್ ರೂಮ್‌ಗೆ ಹೋದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಜೊತೆಗಿದ್ದ ಸ್ನೇಹಿತೆ ರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾವಿಗೆ ಗೀಸರ್‌ನಿಂದ ಅನಿಲ ಸೋರಿಕೆಯೇ ಕಾರಣವೇ ಅಥವಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

