
ಬಂದ್ ಆಚರಿಸುತ್ತಿರುವ ಭಜರಂಗದಳ ಕಾರ್ಯಕರ್ತರು.
ಸುಹಾಸ್‌ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್; ಹಿಂದೂ ಮುಖಂಡರು ಪೊಲೀಸ್ ವಶಕ್ಕೆ
ಮಂಗಳೂರು ನಗರದ ಬಜಪೆ ಸಮೀಪದ ಕಿನ್ನಿಪದವು ಬಳಿ ಮೇ 1 ರಂದು ಹಿಂದೂ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್‌ಶೆಟ್ಟಿ ಕಾರು ಅಡ್ಡಗಟ್ಟಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್‌ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆಗೆ ಇಳಿದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬಂದ್‌ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಿಲ್ಲ ಎಂದು ಸೂಚನೆ ನೀಡಿತ್ತು. ಆದರೆ, ನಗರದ ಪ್ರಮುಖ ವೃತ್ತಗಳಲ್ಲಿ ಕೆಲ ಅಂಗಡಿಯವರೇ ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದರು. ಉಗ್ರರ ದಾಳಿ ಹಾಗೂ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರದ ಬಜಪೆ ಸಮೀಪದ ಕಿನ್ನಿಪದವು ಬಳಿ ಮೇ 1 ರಂದು ಹಿಂದೂ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್‌ಶೆಟ್ಟಿಯ ವಾಹನವನ್ನು ಅಡ್ಡಗಟ್ಟಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಫಾಜಿಲ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ಕಳಸ ಹಾಗೂ ಎನ್.ಆರ್. ಪುರದಲ್ಲಿ ಅಂಗಡಿಗಳು ಬಂದ್ ಆಗಿದ್ದು, ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಬಂದ್‌ಗೆ ಬೆಂಬಲವಿಲ್ಲ
ಚಿಕ್ಕಮಗಳೂರಿನ ಕಡೂರು, ಅಜ್ಜಂಪುರ ಹಾಗೂ ತರೀಕೆರೆಯಲ್ಲಿ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದವು. ವಾಹನ ಸಂಚಾರ ಸಾಮಾನ್ಯವಾಗಿತ್ತು. ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವ ಮೂಲಕ ಹಿಂದೂಪರ ಸಂಘಟನೆಗಳ ಬಂದ್ ಬೆಂಬಲಿಸಿರಲಿಲ್ಲ.
ಮಂಗಳೂರು ಬಂದ್ ಮಾಡಿದ್ದ ವಿಎಚ್‌ಪಿ
ಹಿಂದೂ ಕಾರ್ಯಕರ್ತ ಸುಹಾಸ್‌ಶೆಟ್ಟಿ ಕೊಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಶುಕ್ರವಾರ (ಮೇ 2)ರಂದು ಮಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿದ್ದರು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಬಿ-ಫಾರ್ಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಬಸ್ ಸಿಗದೇ ಪರದಾಡಿದ್ದರು. ಖಾಸಗಿ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು.
ಕೋಮು ಹಿಂಸೆ ತಡೆ ಕಾರ್ಯಪಡೆ ಸ್ಥಾಪನೆ
ಸುಹಾಸ್‌ಶೆಟ್ಟಿ ಹತ್ಯೆಯ ನಂತರ ಮಂಗಳೂರಿಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರು, ಕರಾವಳಿಯ ಪ್ರದೇಶದಲ್ಲಿ ಕೋಮು ಸಂಘರ್ಷ ತಡೆಗೆ ಪ್ರತ್ಯೇಕ ಕಾರ್ಯಪಡೆ ಆರಂಭಿಸುವುದಾಗಿ ಹೇಳಿದ್ದರು. ಮಂಗಳೂರು, ಉಡುಪಿಯಲ್ಲಿ ಕೋಮು ಗಲಭೆ ಪದೇ ಪದೇ ನಡೆಯುತ್ತಿದೆ. ಇದನ್ನು ತಡೆಯಲು ಹಾಗೂ ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಲು ಕೋಮು ಹಿಂಸೆ ತಡೆ ಕಾರ್ಯಪಡೆ ಸ್ಥಾಪಿಸಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದರು.