
ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಶಾಲಾ ಬಸ್ ಅಪಘಾತ: 17 ಮಕ್ಕಳಿಗೆ ಗಾಯ
ಅಪಘಾತದ ಸ್ಥಳಕ್ಕೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ತಕ್ಷಣ ಆಗಮಿಸಿದ್ದು, ಗಾಯಾಳು ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ 17 ಶಾಲಾ ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ-ಸೀತಪ್ಪಲ್ಲಿ ಮಾರ್ಗದಲ್ಲಿ ನಡೆದಿದೆ.
ಮಂಡಿಕಲ್ಲು ಗ್ರಾಮದ ರಾಮಯ್ಯ ಶಾಲೆಯ ಬಸ್ ಬೆಳಗಿನ 7.30ರ ಸುಮಾರಿಗೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ ಒಟ್ಟು 20ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಮ್ಯಾಕಲಹಳ್ಳಿ-ಸೀತಪ್ಪಲ್ಲಿ ಮಾರ್ಗದಲ್ಲಿ ಎದುರಿಗೆ ಬಂದ ವಾಹನವನ್ನು ತಪ್ಪಿಸಲು ಹೋಗಿ ವಾಹನ ನಿಯಂತ್ರಣ ಕಳೆದುಕೊಂಡಿದೆ. ಬಸ್ ರಸ್ತೆಯ ಗುಂಡಿಗೆ ಬಿದ್ದ ನಂತರ, ಪಕ್ಕದ ಕೃಷಿ ಭೂಮಿಯೊಳಗೆ ಪಲ್ಟಿಯಾಗಿದೆ. ಈ ಘಟನೆಯಿಂದ ಬಸ್‌ನ ಮುಂಭಾಗ ಮತ್ತು ಗಾಜುಗಳಿಗೆ ಗಂಭೀರ ಹಾನಿಯಾಗಿದ್ದು, ಮಕ್ಕಳು ಆತಂಕದಿಂದ ಕಿರುಚಾಡಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಅಪಘಾತದ ಸ್ಥಳಕ್ಕೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ತಕ್ಷಣ ಆಗಮಿಸಿದ್ದು, ಗಾಯಾಳು ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. 17 ಮಕ್ಕಳಿಗೆ ಕೈ, ಕಾಲು ಮತ್ತು ತಲೆಗೆ ಸಣ್ಣ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಚಾಲಕನ ವಿರುದ್ಧ ರಾಷ್ಟ್ರೀಯ ಸಂಚಾರ ಕಾಯಿದೆಯ ಸೆಕ್ಷನ್ 279 ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.