
ಜವರಾಯನ ಅಟ್ಟಹಾಸ; ಚರ್ಚ್‌ನಿಂದ ವಾಪಸ್ಸಾಗ್ತಿದ್ದ ನಾಲ್ವರು ಸ್ನೇಹಿತರು ದಾರುಣ ಸಾವು
ಚಿಕ್ಕಬಳ್ಳಾಪುರದ ಅಜ್ಜಾಪುರ ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಚರ್ಚ್‌ನಿಂದ ಪ್ರಾರ್ಥನೆ ಮುಗಿಸಿ ಮರಳುತ್ತಿದ್ದಾಗ ನಡೆದ ಈ ಘೋರ ದುರಂತದ ಸಂಪೂರ್ಣ ವಿವರ ಇಲ್ಲಿದೆ.
ಕ್ರಿಸ್ಮಸ್ ಹಬ್ಬದ ದಿನವೇ ಚಿತ್ರದುರ್ಗದಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲೂ ಭೀಕರ ದುರ್ಘಟನೆ ವರದಿಯಾಗಿದೆ. ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪುರದ ಅಜ್ಜಾಪುರದ ಗ್ರಾಮದಲ್ಲಿ ಈ ಭೀಕರ ದುರ್ಘಟನೆ ಗುರುವಾರ ನಡೆದಿದ್ದು, ಮೃತರನ್ನು ನಂದೀಶ್, ನರಸಿಂಹ, ಅರುಣ್ ಮತ್ತು ಮನೋಜ್ ಎಂದು ಗುರುತಿಸಲಾಗಿದೆ.
ಚರ್ಚ್‌ನಿಂದ ವಾಪಸ್ಸಾಗುತ್ತಿದ್ದಾಗ ದುರ್ಘಟನೆ
ಇನ್ನು ಮೃತರು ಸ್ನೇಹಿತರಾಗಿದ್ದು, ಕ್ರಿಸ್‌ಮಸ್ ಹಿನ್ನೆಲೆ ನಗರದ ಚರ್ಚ್‌ಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಈ ನಾಲ್ವರು ಒಂದೇ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದರು. ಹೀಗೆ ಬರುತ್ತಿರುವಾಗ ಶಿಡ್ಲಘಟ್ಟದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಟಿಪ್ಪರ್ ಬೈಕ್ ಗುದ್ದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರು ಹಾರಿ ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಟಿಪ್ಪರ್ ಚಾಲಕನ ಅಜಾಗರೂಕತೆ
ಈ ಭೀಕರ ದುರ್ಘಟನೆಗೆ ಟಿಪ್ಪರ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ವೇಗದಲ್ಲಿ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಬಂದು ಅಪ್ಪಳಿಸಿದೆ. ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ ಮೃತ ಸ್ನೇಹಿತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

