![BJP Infighting | ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ತಡೆ; ಸಂಸದ ಸುಧಾಕರ್ ವಿರುದ್ಧ ಸಮರ ಸಾರಿದ ಸಂದೀಪ್ ರೆಡ್ಡಿ BJP Infighting | ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ತಡೆ; ಸಂಸದ ಸುಧಾಕರ್ ವಿರುದ್ಧ ಸಮರ ಸಾರಿದ ಸಂದೀಪ್ ರೆಡ್ಡಿ](https://karnataka.thefederal.com/h-upload/2025/02/11/512110-untitleddesign1-3.webp)
BJP Infighting | ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ತಡೆ; ಸಂಸದ ಸುಧಾಕರ್ ವಿರುದ್ಧ ಸಮರ ಸಾರಿದ ಸಂದೀಪ್ ರೆಡ್ಡಿ
ಕೋವಿಡ್ ಅವಧಿಯಲ್ಲಿ ಜನ ಬೆಡ್ ಸಿಗದೇ ಸಾಯುತ್ತಿದ್ದರೂ ಡಾ.ಕೆ.ಸುಧಾಕರ್ ಮಾತ್ರ ಹಣ ದೋಚುವುದರಲ್ಲೇ ಮಗ್ನರಾಗಿದ್ದರು ಎಂದು ಚಿಕ್ಕಬಳ್ಳಾಪುರದ ನಿಯೋಜಿತ ಬಿಜೆಪಿ ಅಧ್ಯಕ್ಷ ಸಂದೀಪ್ ರೆಡ್ಡಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ತಡೆ ಹಿಡಿಯುವಂತೆ ವರಿಷ್ಠರು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ಬೆನ್ನಲ್ಲೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದೆ. ತಮ್ಮ ನೇಮಕಕ್ಕೆ ತಡೆ ಕೊಡಿಸಿದ ಆರೋಪದ ಮೇಲೆ ಸಂಸದ ಡಾ.ಕೆ. ಸುಧಾಕರ್ ವಿರುದ್ಧ ನಿಯೋಜಿತ ಅಧ್ಯಕ್ಷ ಸಂದೀಪ್ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂದೀಪ್ ರೆಡ್ಡಿ ಅವರು, ಕೋವಿಡ್ ಅವಧಿಯಲ್ಲಿ ಜನ ಬೆಡ್ ಸಿಗದೇ ಸಾಯುತ್ತಿದ್ದರೂ ಡಾ.ಕೆ.ಸುಧಾಕರ್ ಮಾತ್ರ ಹಣ ದೋಚುವುದರಲ್ಲೇ ಮಗ್ನರಾಗಿದ್ದರು. ಕೋವಿಡ್ ನೆಪದಲ್ಲಿ ಬಾಚಿದ ಹಣವನ್ನು ಚೆನೈ ಮೂಲದ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ತೊಡಗಿದ್ದರು. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ. ಸಂಸದ ಸುಧಾಕರ್ ಅವರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಪಕ್ಷದಲ್ಲಿ ಯಾರೇ ಬೆಳೆದರೂ ಅದನು ಸುಧಾಕರ್ ಸಹಿಸುವುದಿಲ್ಲ. ಅವರಿಂದ ನನಗೆ ಸಾಕಷ್ಟು ಅನ್ಯಾಯವಾಗಿದೆ. ಇದನ್ನು ಸಹಿಸಿಕೊಂಡು ಕೂರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರಗೆ ಸವಾಲೆಸೆದಿದ್ದ ಸುಧಾಕರ್
ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಅಭಿಪ್ರಾಯ ಆಲಿಸದೇ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕೆಲಸ ಮಾಡಿದವರನ್ನು ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಸಂಸದ ಡಾ.ಕೆ. ಸುಧಾಕರ್ ಆರೋಪಿಸಿದ್ದರು.
ಅಲ್ಲದೇ ವಿಜಯೇಂದ್ರ ಅವರ ಏಕಪಕ್ಷೀಯ ವರ್ತನೆ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು. ವಿಜಯೇಂದ್ರ ವಿರುದ್ಧ ಡಾ.ಕೆ.ಸುಧಾಕರ್ ಅವರು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಪಕ್ಷದ ನಾಯಕರ ಆಂತರಿಕ ಕಚ್ಚಾಟ ಬಹಿರಂಗವಾಗಿತ್ತು.
ಡಾ.ಕೆ. ಸುಧಾಕರ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಜಿಲ್ಲಾಧ್ಯಕ್ಷರ ನೇಮಕ ವಿಷಯದಲ್ಲಿ ನನ್ನ ಪಾತ್ರವಿಲ್ಲ. ಸುಧಾಕರ್ ಅವರು ನನ್ನ ಬಗ್ಗೆ ತಪ್ಪು ತಿಳಿಯಬಾರದು. ನನ್ನ ವಿರುದ್ಧ ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡಿದ್ದರು.
ವಿಜಯೇಂದ್ರ ನೇಮಕಕ್ಕೆ ಹೈಕಮಾಂಡ್ ತಡೆ
ಸೋಮವಾರ ರಾತ್ರಿ ದಿಢೀರ್ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂದೀಪ್ ರೆಡ್ಡಿ ನೇಮಕಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಅವರು ತಡೆ ನೀಡಿದ್ದರು. ಇದರಿಂದ ಸುಧಾಕರ್ ಮೇಲುಗೈ ಸಾಧಿಸಿದ್ದರು ಎಂದೇ ವಿಶ್ಲೇಷಿಸಲಾಗಿತ್ತು. ಅಲ್ಲದೇ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಸಂಸದ ಡಾ.ಕೆ ಸುಧಾಕರ್ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಳವಾಗಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.