
ಪ್ರಾತಿನಿಧಿಕ ಚಿತ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಳ,: ವರುಣಾ ಕ್ಷೇತ್ರದ ಗೆಲುವಿನ ತಕರಾರು ಅರ್ಜಿ ವಜಾ
ವರುಣಾ ಕ್ಷೇತ್ರದ ಮತದಾರರಾಗಿರುವ ಕೆ.ಎಂ. ಶಂಕರ್ ಎಂಬುವವರು ಸಿದ್ದರಾಮಯ್ಯ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಿ 2023ರ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ತೀರ್ಪು ಸಿದ್ದರಾಮಯ್ಯ ಅವರಿಗೆ ಕಾನೂನಾತ್ಮಕ ಗೆಲುವಾಗಿದೆ.
ವರುಣಾ ಕ್ಷೇತ್ರದ ಮತದಾರರಾಗಿರುವ ಕೆ.ಎಂ. ಶಂಕರ್ ಎಂಬುವವರು ಸಿದ್ದರಾಮಯ್ಯ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಿ 2023ರ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳು (ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಮತ್ತು ಅನ್ನಭಾಗ್ಯ) ಮತದಾರರಿಗೆ ಲಂಚದ ರೂಪದ ಆಮಿಷಗಳು ಎಂದು ಆರೋಪಿಸಲಾಗಿತ್ತು. ಈ ಗ್ಯಾರಂಟಿಗಳು ಜನಪ್ರತಿನಿಧಿಗಳ ಕಾಯ್ದೆ (Representation of People Act) ಸೆಕ್ಷನ್ 123(2) ಅಡಿಯಲ್ಲಿ ಭ್ರಷ್ಟಾಚಾರ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ಸುನಿಲ್ ದತ್ತ್ ಯಾದವ್ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಸಿದ್ದರಾಮಯ್ಯ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ 11 ಆರೋಪಗಳನ್ನು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚದ ಬಗ್ಗೆ ಪ್ರಮುಖ ಆರೋಪ ಮಾಡಲಾಗಿದೆ. ಚುನಾವಣಾಧಿಕಾರಿ ಅಥವಾ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಅವರು ಚುನಾವಣಾ ವೆಚ್ಚದ ಮಿತಿ ಮೀರಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ದೂರು ನೀಡಿಲ್ಲ. ನಾನು ಸಿಎಂ ಆದ ಬಳಿಕ ಆರೋಪಗಳನ್ನು ಸೃಷ್ಟಿ ಮಾಡಲಾಗಿದೆ. ಅರ್ಜಿದಾರರು ನ್ಯಾಯಾಲಯವನ್ನು ಮಾತ್ರ ದಾರಿ ತಪ್ಪಿಸುತ್ತಿಲ್ಲ. ಇಡೀ ಜಗತ್ತನ್ನು ದಾರಿ ತಪ್ಪಿಸಿದ್ದಾರೆ ಎಂದು ವಾದಿಸಿದರು.
“ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವಂತಹ ಅರ್ಜಿಗಳಲ್ಲ. ಅವುಗಳನ್ನು ರೂಪಿಸಲು ಗಂಭೀರ ಸಿದ್ದತೆ ಮಾಡಬೇಕು. ಆದರೆ, ಶಾಸಕರಾದ ರಿಜ್ವಾನ್ ಅರ್ಷದ್, ಸಚಿವ ಪ್ರಿಯಾಂಕ್ ಖರ್ಗೆ ಅಸಿಂಧು ಕೋರಿರುವ ಅರ್ಜಿಗಳಿಂದ ಈ ಅರ್ಜಿಯನ್ನು ಸಂಪೂರ್ಣ ನಕಲು ಮಾಡಲಾಗಿದೆ. ಮತ್ತೊಂದು ಅರ್ಜಿಯಲ್ಲಿರುವ ಅಲ್ಪ ವಿರಾಮ, ಪೂರ್ಣವಿರಾಮ ಮತ್ತು ವ್ಯಾಕರಣ ದೋಷಗಳು ಈ ಅರ್ಜಿಯಲ್ಲಿಯೂ ಯಥಾವತ್ತಾಗಿವೆ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎನ್ನಲಾಗದು” ಎಂದು ವಾದಿಸಿದ್ದರು.
ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು “ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿವೆ. ಆ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆಯಾಗಿದೆ. ಕೆಪಿಸಿಸಿಯು ನೋಂದಾಯಿತ ಪಕ್ಷವಲ್ಲ. ಹೀಗಾಗಿ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆಯು ಭ್ರಷ್ಟಾಚಾರಕ್ಕೆ ಸಮ. ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಸಹಿ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಆ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ, ಅವರ ಆಯ್ಕೆ ಅನೂರ್ಜಿತಗೊಳಿಸಬೇಕು. ಭ್ರಷ್ಟಾಚಾರದ ಮೂಲಕ ಚುನಾವಣೆ ಜಯಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ಕೋರಿದ್ದರು ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.