ಚನ್ನಗಿರಿ ಪ್ರಕರಣ | ಮಗನ ಸಾವು ಲಾಕಪ್‌ ಡೆತ್‌ ಅಲ್ಲ ಎಂದ ಆದಿಲ್‌ ತಂದೆ
x

ಚನ್ನಗಿರಿ ಪ್ರಕರಣ | ಮಗನ ಸಾವು ಲಾಕಪ್‌ ಡೆತ್‌ ಅಲ್ಲ ಎಂದ ಆದಿಲ್‌ ತಂದೆ


ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಮೃತ ಅದೀಲ್‌ನ ತಂದೆ ಹೇಳಿಕೆ ನೀಡಿದ್ದು, ಇದು 'ಲಾಕಪ್ ಡೆತ್' ಅಲ್ಲ ಲೋ ಬಿಪಿಯಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಚನ್ನಗಿರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಆದಿಲ್ ತಂದೆ ಖಲೀಮುಲ್ಲಾ ಅವರು, ʻʻನನ್ನ ಮಗನ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ. ಪೊಲೀಸರ ಹಲ್ಲೆಯಿಂದ ಮೃತಪಟ್ಟಿಲ್ಲ, ಲೋ ಬಿಪಿಯಾಗಿ ಮೃತಪಟ್ಟಿದ್ದಾನೆ. ನನ್ನ ಮಗ ಆದಿಲ್​ಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ನಮಗೆ ಯಾವುದೇ ರೀತಿ ಅನುಮಾನ ಇಲ್ಲ. ಠಾಣೆಗೆ ಕಲ್ಲು ಹೊಡೆದವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಸರ್ಕಾರ ನನಗೆ ಪರಿಹಾರ ಕೊಡಬೇಕುʼʼ ಎಂದು ಹೇಳಿದ್ದಾರೆ.

ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ

ನ್ಯಾಯಾಧೀಶ ಪ್ರಶಾಂತ್ ಅವರ ನೇತೃತ್ವದಲ್ಲಿ ಮೃತ ಆದಿಲ್ ಮರಣೋತ್ತರ ಪರೀಕ್ಷೆ ನಡೆದಿದೆ. ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಯಿತು. ರಾಜ್ಯದ ಬಹುಸೂಕ್ಷ್ಮ ಪ್ರಕರಣ ಆಗಿರುವುದರಿಂದ ಕುಟುಂಬ ಸದಸ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು, ಜೊತೆಗೆ ನ್ಯಾಯಮೂರ್ತಿ ಪ್ರಶಾಂತ್ ಅವರು‌ ಶವಾಗಾರಕ್ಕೆ ಭೇಟಿ ನೀಡಿದ್ದರು. ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ, ನ್ಯಾಯಮೂರ್ತಿ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಲಾಯಿತು.

ಘಟನೆ ತಿವ್ರ ಸ್ವರೂಪ ಪಡೆದಿದ್ದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ಎಸ್ಪಿ ಮಿಥುನ್, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ‌. ಠಾಣೆ ಮೇಲೆ ಕಲ್ಲು ತೂರಿರುವ ಹಿನ್ನೆಲೆ ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹಾಗಾಗಿ ಪಟ್ಟಣಕ್ಕೆ ಮೂರು‌ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿ ಮೂರು ಜಿಲ್ಲೆಗಳಿಂದ ಸರ್ಕಲ್ ಇನ್ಸ್​​​ಪೆಕ್ಟರ್, ಡಿವೈಎಸ್ಪಿ, ಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಏನಿದು ಪ್ರಕರಣ?

ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅದು ʼಲಾಕಪ್‌ ಡೆತ್ʼ ಎಂದು ಆರೋಪಿಸಿ ಜನರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಶುಕ್ರವಾರ ನಡೆದಿದೆ.

ಚನ್ನಗಿರಿ ಪಟ್ಟಣದ ಟಿಪ್ಪು ನಗರದ ವಾಸಿಯಾದ ಬಡಗಿ ಕೆಲಸಗಾರ ಆದಿಲ್(32 ವರ್ಷ) ಮೃತ ವ್ಯಕ್ತಿ. ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆಯಿಂದ ಪೊಲೀಸರು ಆದಿಲ್‌ಗೆ ಶುಕ್ರವಾರ ಮಧ್ಯಾಹ್ನ ಠಾಣೆಗೆ ಕರೆ ತಂದು, ವಿಚಾರಣೆಗೊಳಪಡಿಸಿದ್ದರು. ಸಮೀಪದಲ್ಲಿಯೇ ನ್ಯಾಯಾಲಯ ಇದ್ದುದರಿಂದ ಸಂಜೆ ಒಳಗಾಗಿ ವಶದಲ್ಲಿದ್ದ ಆದಿಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಮುಂದಾಗಿದ್ದರು ಎನ್ನಲಾಗಿದೆ. ಈ ಹಂತದಲ್ಲಿ ಲಾಕಪ್‌ನಲ್ಲಿದ್ದ ಆದಿಲ್‌ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಆದಿಲ್‌ ಸಾವನ್ನಪ್ಪಿದ್ದು, ವೈದ್ಯರು ಸಾವು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Read More
Next Story