ಚನ್ನಗಿರಿ ಲಾಕಪ್‌ಡೆತ್ ಆರೋಪ | ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನ ಜಖಂ
ಪೊಲೀಸರು ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅದು ʼಲಾಕಪ್ ಡೆತ್ʼ ಎಂದು ಆರೋಪಿಸಿ ಜನರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಪೊಲೀಸರು ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅದು ʼಲಾಕಪ್ ಡೆತ್ʼ ಎಂದು ಆರೋಪಿಸಿ ಜನರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಚನ್ನಗಿರಿ ಪಟ್ಟಣದ ಟಿಪ್ಪು ನಗರದ ವಾಸಿಯಾದ ಬಡಗಿ ಕೆಲಸಗಾರ ಆದಿಲ್(32 ವರ್ಷ) ಮೃತ ವ್ಯಕ್ತಿ. ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆಯಿಂದ ಪೊಲೀಸರು ಆದಿಲ್‌ಗೆ ಶುಕ್ರವಾರ ಮಧ್ಯಾಹ್ನ ಠಾಣೆಗೆ ಕರೆ ತಂದು, ವಿಚಾರಣೆಗೊಳಪಡಿಸಿದ್ದರು. ಸಮೀಪದಲ್ಲಿಯೇ ನ್ಯಾಯಾಲಯ ಇದ್ದುದರಿಂದ ಸಂಜೆ ಒಳಗಾಗಿ ವಶದಲ್ಲಿದ್ದ ಆದಿಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಮುಂದಾಗಿದ್ದರು ಎನ್ನಲಾಗಿದೆ. ಈ ಹಂತದಲ್ಲಿ ಲಾಕಪ್‌ನಲ್ಲಿದ್ದ ಆದಿಲ್ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಆದಿಲ್ ಸಾವನ್ನಪ್ಪಿದ್ದು, ವೈದ್ಯರು ಸಾವು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅತ್ತ ಆದಿಲ್‌ನ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಕುಟುಂಬ ಸದಸ್ಯರು ಆತನ ಸಾವಿನ ಸುದ್ದಿ ತಿಳಿದು ಆಸ್ಪತ್ರೆ ಬಳಿ ದೌಡಾಯಿಸಿದ್ದಾರೆ. ಪೊಲೀಸ್ ವಶದಲ್ಲಿದ್ದ ಬಡಗಿ ಕೆಲಸಗಾರ ಆದಿಲ್ ಸಾವನ್ನಪ್ಪಿದ್ದಾನೆಂಬ ವಿಚಾರ ಒಬ್ಬರಿಂದ ಒಬ್ಬರಿಗೆ, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ, ಸುಮಾರು 500ಕ್ಕೂ ಹೆಚ್ಚು ಜನರು ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.
ಸಹಜ ಸಾವಲ್ಲ; ಲಾಕಪ್ ಡೆತ್ ಆರೋಪ
ಆದಿಲ್‌ನನ್ನು ಮಟ್ಕಾ ಕೇಸ್ ವಿಚಾರಣೆಗೆಂದು ಠಾಣೆಗೆ ಕರೆದೊಯ್ದು, ಅಮಾನುಷವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಇದು ಸಹಜವಾದ ಸಾವಲ್ಲ. ಪೊಲೀಸ್ ವಶದಲ್ಲಿದ್ದಾಗ ಪೊಲೀಸ್ ಠಾಣೆಯಲ್ಲೇ ಆದಿಲ್ ಸಾವನ್ನಪ್ಪಿದ್ದಾನೆ. ಆದರೆ, ಪೊಲೀಸರು ಅದನ್ನೆಲ್ಲಾ ಮರೆಮಾಚಲು ಚನ್ನಗಿರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂಬುದಾಗಿ ಠಾಣೆ ಬಳಿ ಜಮಾಯಿಸಿದ್ದವರು ಆಕ್ರೋಶ ವ್ಯಕ್ತಪಡಿಸಿದರು.
ಠಾಣೆ ಮುಂದೆ ನೂರಾರು ಜನರು ಮೃತ ಆದಿಲ್ ಶವದ ಸಮೇತ ಪ್ರತಿಭಟಿಸುತ್ತಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಮತ್ತಷ್ಟು ಜನರು ಠಾಣೆ ಬಳಿ ಜಮಾಯಿಸಿದ್ದಾರೆ. ಉದ್ರಿಕ್ತ ಗುಂಪು ಠಾಣೆ ಮುಂದೆ ಜಮಾಯಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಠಾಣೆಯಲ್ಲಿ ಇರಲಿಲ್ಲ. ಕೆಲವರಂತೂ ಠಾಣೆ ಬಾಗಿಲನ್ನು ಹಾಕಿ, ಠಾಣೆ ಮುಂದೆ ಪ್ರತಿಭಟಿಸುವ ಜೊತೆಗೆ ಆದಿಲ್ ಸಾವಿಗೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್‌ಪಿ, ಐಜಿಪಿ ಸ್ಥಳಕ್ಕೆ ಧಾವಿಸಬೇಕು ಎಂದು ಪಟ್ಟುಹಿಡಿದರು.
ಪ್ರತಿಭಟನಾಕಾರರು ಶುಕ್ರವಾರ ತಡರಾತ್ರಿವರೆಗೂ ಪೊಲೀಸ್ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಕೆಲವು ದುಷ್ಕರ್ಮಿಗಳು ಠಾಣೆ ಮೇಲೆ ಕಲ್ಲು ತೂರಿದ್ದು, ಐದು ಪೊಲೀಸ್ ಜೀಪ್, ಎರಡು ಖಾಸಗಿ ವಾಹನ ಜಖಂಗೊಂಡಿವೆ. ಅಲ್ಲದೇ ಪೊಲೀಸ್ ಜೀಪ್ ಉರುಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಯತ್ನವನ್ನು ವಿಫಲಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆ ಬಳಿಕ ಇಡೀ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಗಲಭೆಕೋರರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಜೀಪ್ ಜಖಂಗೊಳಿಸಿದವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ
ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಫ್‌ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ. ಆದರೆ, ಇದು ಲಾಕಪ್ ಡೆತ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಇನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ʻʻಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ತಿಳಿದುಕೊಂಡು ಜನ ಪ್ರತಿಭಟನೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ಯುವಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆʼʼ ಎಂದು ಹೇಳಿದರು.
ʻʻಸಹಜವಾಗಿ ಕಲ್ಲು ತೂರಾಟ ಆದಾಗ ಅಲ್ಲಿರುವ ಪೊಲೀಸರಿಗೂ ಗಾಯಗಳಾಗುತ್ತದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಂತಹ ಗುಂಪು ಘರ್ಷಣೆಗಳು, ರೌಡಿಸಂಗಳು ಯಾರನ್ನೂ ಹೇಳಿ ಕೇಳಿ ಮಾಡಲ್ಲ, ಇದ್ದಕ್ಕಿದ್ದಂತೆ ಹೀಗೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ನಾವು ಬಿಡಲ್ಲ. ಪೊಲೀಸ್ ಠಾಣೆಗೆ ಬಂದು ಧಮ್ಮಿ ಹಾಕುವವರನ್ನು ಸುಮ್ಮನೆ ಬಿಡಲು ಆಗುತ್ತಾ? ಪೊಲೀಸರು ಅಂಥವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆʼʼ ಎಂದು ಎಚ್ಚರಿಕೆ ನೀಡಿದರು.