
ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಸಾಹಿತಿ ಗೊರುಚ ಆಯ್ಕೆ; ʼಸಾಹಿತ್ಯೇತರರಿಗೆ ಅಧ್ಯಕ್ಷ ಪಟ್ಟʼ ವಾದಕ್ಕೆ ತೆರೆ
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಯಾರಾಗಬೇಕು? ಸಾಹಿತಿಗಳಷ್ಟೇ ಯಾಕೆ, ಧಾರ್ಮಿಕ, ರಾಜಕೀಯ ಮತ್ತಿತರ ಕ್ಷೇತ್ರಗಳ ಸಾಧಕರನ್ನೂ ಆಯ್ಕೆ ಮಾಡಬಾರದೇಕೆ? ಎಂಬ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.
ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರು ಆಯ್ಕೆಯಾಗಿದ್ದಾರೆ. ಅಂತೂ ಸಾಹಿತ್ಯ ಸಮ್ಕೇಳನಕ್ಕೆ ಸಾಹಿತ್ಯೇತರ ವ್ಯಕ್ತಿಗಳು ಅಧ್ಯಕ್ಷರಾಗಬೇಕು ಎನ್ನುವ ವಿಚಾರದಲ್ಲಿ ಎದ್ದಿದ್ದ ವಿವಾದಕ್ಕೆ ಗೊರುಚ ಅವರ ಆಯ್ಕೆಯ ಮೂಲಕ ತೆರೆ ಎಳೆಯಲಾಗಿದೆ.
ಬುಧವಾರ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಜನಪದ ತಜ್ಞರು, ವಿದ್ವಾಂಸರು ಮತ್ತು ಸಾಹಿತಿಗಳಾದ ಗೊ. ರು ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗೊ. ರು ಚನ್ನಬಸಪ್ಪ ಈ ಹಿಂದೆ 1992 ರಿಂದ 1995 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಪ್ಪಳ (1993), ಮಂಡ್ಯ (1994), ಮತ್ತು ಮುಧೋಳದಲ್ಲಿ (1995)ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದೀಗ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗೊ.ರು. ಚನ್ನಬಸಪ್ಪ ಅವರು ಮೂಲತ: ಚಿಕ್ಕಮಗಳೂರಿಮ ತರೀಕೆರೆ ತಾಲೂಕಿನ ಗೊಂಡೇದಹಳ್ಳಿ ಗ್ರಾಮದವರು. ರುದ್ರಪ್ಪಗೌಡರು-ಅಕ್ಕಮ್ಮ ದಂಪತಿಯ ಪುತ್ರಿ. 18ನೇ ವಯಸ್ಸಿನಲ್ಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿದರು. ಸರ್ಕಾರಿ ಸೇವೆಯ ಜತೆಗೆ ವಿವಿಧ ಸಂಘಸಂಸ್ಥೆಗಳಿಗಾಗಿ ದುಡಿದರು. ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊ.ರು.ಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತ್ ಸೌಟ್ಸ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ಯಾಟರ್ಸ್ ಕಮೀಷನರ್ ಆಗಿ ದುಡಿದಿರುವ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. 'ಜಾನಪದ ಜಗತ್ತು', 'ಪಂಚಾಯತ್ ರಾಜ್ಯ', 'ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ' ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ವಾದ ವಿವಾದ
ಶತಮಾನದ ಆಯುಷ್ಯವನ್ನು ಕಳೆದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ-ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಯಾರಾಗಬೇಕು? ಸಾಹಿತಿಗಳಷ್ಟೇ ಈ ಪೀಠ ಅಲಂಕರಿಸಬೇಕೇ? ಧಾರ್ಮಿಕ, ರಾಜಕೀಯ ಮತ್ತಿತರ ಕ್ಷೇತ್ರಗಳ ಸಾಧಕರನ್ನೂ ಈ ಸರ್ವಾಧ್ಯಕ್ಷ ಸ್ಥಾನಲ್ಲಿ ಕುಳ್ಳಿರಿಸಬಾರದು? ಎಂಬ ವಿವಾದ ಸೃಷ್ಟಿಯಾಗಿತ್ತು.
ಇದುವರೆಗೂ ಸಾಹಿತ್ಯ ಸಾಧಕರನ್ನು ಮಾತ್ರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕ್ರೀಡೆ, ಸಂಗೀತ, ಮಾಧ್ಯಮ, ನೃತ್ಯ, ಯಕ್ಷಗಾನ, ಸಿನಿಮಾ ಸಾಹಿತ್ಯ ಕ್ಷೇತ್ರದ ಸಾಧಕರನ್ನೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಸಾಣೇಹಳ್ಳಿ ಸ್ವಾಮೀಜಿ, ಭಾಲ್ಕಿ ಹಿರೇಮಠದ ಮುಖ್ಯಸ್ಥ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ನಿಡುಮಾಮಿಡಿ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸೇರಿದಂತೆ ಯಾರಾದರೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಅವರ ಬೆಂಬಲಿಗರು ಒತ್ತಾಯಿಸಿದ್ದರು. ಆದಿಚುಂಚನಗಿರಿಶ್ರೀ, ಸುತ್ತೂರು ಶ್ರೀಗಳು, ಸಿದ್ದಗಂಗಾಶ್ರೀಗಳು, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳೂ ಸೇರಿಂತೆ ವಿವಿಧ ಮಠಾಧೀಶರ ಪರವಾಗಿ ಮನವಿಗಳು ಬಂದಿದ್ದವು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದರು.
ಇನ್ನು ನ್ಯಾಯಾಂಗ ಕ್ಷೇತ್ರದಿಂದ ವಿಶ್ರಾಂತ ನ್ಯಾ.ನಾಗಮೋಹನ್‌ದಾಸ್, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾ.ಶಿವರಾಜಪಾಟೀಲ್, ಗೋಪಾಲಗೌಡ ಅವರನ್ನು ಕೂಡ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯಿತ್ತು. ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಚಿತ್ರ ಸಾಹಿತಿಗಳಾದ ಹಂಸಲೇಖರನ್ನು ಸರ್ವಾಧ್ಯಕ್ಷರ ಪಟ್ಟಕ್ಕೆ ಆಯ್ಕೆ ಮಾಡಬೇಕೆಂದು ಹಲವರು ಒತ್ತಾಯಿಸಿದ್ದರು. ಜೊತೆಗೆ, ಸಿಎನ್ ಆರ್. ರಾವ್, ಬಾಹ್ಯಾಕಾಶ ವಿಜ್ಞಾನಿ ಕಿರಣ್ ಕುಮಾರ್, ಸುಧಾಮೂರ್ತಿ, ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡ, ಕ್ರಿಕೇಟ್ ಆಟಗಾರ ಜಿ.ಆರ್. ವಿಶ್ವನಾಥ್, ಪ್ರಕಾಶ್ ಪಡುಕೋಣೆ, ಅವರನ್ನೇಕೆ ಪರಿಗಣಿಸಬಾರದು ಎಂಬ ಪ್ರಶ್ನೆಯೂ ಕೇಳಿ ಬಂದಿತ್ತು.
ಅಷ್ಟೇ ಅಲ್ಲ. “ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎಸ್. ಎಂ. ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಸಮ್ಮೇಳನದ ಸರ್ವಾಧ್ಯಕ್ಷರ ಹುದ್ದೆಗೆ ಪರಿಗಣಿಸಿ ಎಂದು ಒತ್ತಾಯವಿದೆ” ಎಂದು ಜೋಶಿ ಹೇಳಿದ್ದರು.
ಸಾಹಿತಿಗಳೇ ಆಗಬೇಕು
ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದದ ಹಂತದಿಂದ ಪ್ರತಿಭಟನೆಯ ಮಟ್ಟವನ್ನೂ ತಲುಪಿತ್ತು. ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಾಹಿತ್ಯ ಲೋಕದ ದಿಗ್ಗಜರೇ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕು, ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಅಮರಣಾಂತ ಉಪವಾಸ ಕೈಗೊಳ್ಳಬೇಕಾಗುತ್ತದೆ. ಎಂದು ಮಂಡ್ಯ ಸಾಹಿತ್ಯಾಸಕ್ತರ ಬಳಗದವರು ಎಚ್ಚರಿಕೆ ನೀಡಿದ್ದರು.
“ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬ ನಿಬಂಧನೆಯೇನೂ ಇಲ್ಲ. ಈವರೆಗ ನಡೆದಿರುವ ಸಮ್ಮೇಳನಗಳಲ್ಲಿ ಮಹಿಳಾ ಸಾಹಿತಿಗಳಿಗೂ ಪ್ರಾಧಾನ್ಯ ನೀಡಿಲ್ಲ” ಎಂದು ಜೋಶಿ ಸಮರ್ಥಿಸಿಕೊಳ್ಳುತ್ತಾರೆ. “ಪರಿಷತ್ತಿನ ಬೈ-ಲಾದಲ್ಲಿ ಸಮ್ಮೇಳನದ ಅಧ್ಯಕ್ಷತೆಗೆ ಸಂಬಂಧಿಸಿದಂತೆ ʼಸಾಹಿತಿʼಗಳನ್ನಷ್ಟೇ ಆಯ್ಕೆ ಮಾಡಬೇಕೆಂಬ ನಿರ್ದಿಷ್ಟ ಮಾನದಂಡವಿಲ್ಲ” ಎಂದು ಮಹೇಶ್ ಜೋಶಿ ವಾದಿಸಿದ್ದರು.