ಸಿಎಂ ಬದಲಿಸಿದರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್‌; ಹೈಕಮಾಂಡ್‌ಗೆ ಸಿದ್ದರಾಮಯ್ಯ ಪರಮಾಪ್ತನ ನೇರ ಎಚ್ಚರಿಕೆ
x

ಸಿಎಂ ಬದಲಿಸಿದರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್‌; ಹೈಕಮಾಂಡ್‌ಗೆ ಸಿದ್ದರಾಮಯ್ಯ ಪರಮಾಪ್ತನ ನೇರ ಎಚ್ಚರಿಕೆ

ನಾವೆಲ್ಲರೂ ಪೂರ್ಣಾವಧಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬಲ ಹೆಚ್ಚಿದೆ. ಶಾಸಕರ ಬೆಂಬಲ ಹೆಚ್ಚಾಗಿರುವ ಕಾರಣಕ್ಕೇ ಅವರನ್ನು ಸಿಎಂ ಆಗಿ ಮಾಡಿದ್ದೇವೆ ಎಂದು ಅಶೋಕ್‌ ಪಟ್ಟಣ್‌ ಹೇಳಿದ್ದಾರೆ.


ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ʼನವೆಂಬರ್ ಕ್ರಾಂತಿʼಯ ಮಾತುಗಳು ಬಲಗೊಳ್ಳುತ್ತಿರುವ ಬೆನ್ನಲ್ಲೇ ಸಿಎಂ ಆಪ್ತರ ತಂತ್ರಗಾರಿಕೆಗಳು ತೀವ್ರ ಕುತೂಹಲ ಮೂಡಿಸಿವೆ.

ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದು ತೆರೆಮರೆಯಲ್ಲಿ ಲಾಬಿ ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಬಣಕ್ಕೆ ತಿರುಗೇಟು ನೀಡಲು ಸಿಎಂ ಆಪ್ತರು ಒಂದೊಂದೇ ದಾಳ ಉರುಳಿಸುತ್ತಿದ್ದಾರೆ. ಉತ್ತರಾಧಿಕಾರಿ, ದಲಿತ ಸಿಎಂ ದಾಳದ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಎಂ.ಪಟ್ಟಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗುವುದು ನಿಶ್ಚಿತ, ಸಿದ್ದರಾಮಯ್ಯ ಅವರ ಮನವೊಲಿಸದೇ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಶೋಕ್ ಪಟ್ಟಣ್ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ.

ಪೂರ್ಣಾವಧಿಗೆ ಸಿಎಂ ಆಯ್ಕೆ

ನಾವೆಲ್ಲರೂ ಪೂರ್ಣಾವಧಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬಲ ಹೆಚ್ಚಿದೆ. ಶಾಸಕರ ಬೆಂಬಲ ಹೆಚ್ಚಾಗಿರುವ ಕಾರಣಕ್ಕೇ ಅವರನ್ನು ಸಿಎಂ ಆಗಿ ಮಾಡಿದ್ದೇವೆ. ಅಧಿಕಾರ ಹಂಚಿಕೆ ಬಗ್ಗೆ ನಮಗೇನು ತಿಳಿದಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಹೈಕಮಾಂಡ್ ಮುಂದಾದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಬೇಕು ಎಂಬ ನಾವು ಬಯಸಿದ್ದೇವೆ. ಈ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಪರಿಣಾಮ

ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿ ನಾಯಕತ್ವ ವಹಿಸಿಕೊಂಡರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರಲಿದೆ. ಜನವರಿ ತಿಂಗಳಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯತ್, ಗ್ರೇಟರ್ ಬೆಂಗಳೂರು ಚುನಾವಣೆ ಬರಲಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಯಿಸಿದರೆ ಪಕ್ಷದ ಮೇಲೆ ಪರಿಣಾಮ ಬೀರಲಿದೆ.

ಹೈಕಮಾಂಡ್ ಎಲ್ಲಿಯೂ ನಾಯಕತ್ವ ಬದಲಾವಣೆ ಅಂತ ಹೇಳಿಲ್ಲ. ಸಂಪುಟ ಪುನಾರಚನೆ ಅಂತ ನಮಗೆ ಹೇಳಿದ್ದಾರೆ ಎಂದು ಅಶೋಕ್ ಎರಡೂವರೆ ವರ್ಷ ಬಳಿಕ ಸಂಪುಟ ಪುನಾರಚನೆ ಆಗಲಿದೆ. ಹಿರಿಯ ಐದಾರು ಸಚಿವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಚಿವರನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಅಶೋಕ್ ಎಂ.ಪಟ್ಟಣ್ ಹೇಳಿದ್ದಾರೆ.

ಶೇ 80 ರಷ್ಟು ಸಚಿವರಿಗೆ ಗೇಟ್‌ಪಾಸ್‌

ಶೇ. 80ರಷ್ಟು ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಮಾಹಿತಿ ಇದೆ. ಹೊಸಬರಿಗೆ ಸಂಪುಟ ಪುನಾರಚನೆ ವೇಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಐದಾರು ಹಿರಿಯ ಸಚಿವರನ್ನು ಹೊರತುಪಡಿಸಿದರೆ ಉಳಿದ ಎಲ್ಲರನ್ನೂ ಬದಲಾಯಿಸಲಾಗುತ್ತದೆ ಎಂದು ಅಶೋಕ್‌ ಪಟ್ಟಣ್‌ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಸಿಎಂ ಆಗಲು ಅರ್ಹರಿದ್ದಾರೆ. ಆದರೆ ಈಗ ಅಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಆಗಲಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರ ಒಗ್ಗಟ್ಟಿನಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಮುಂದೆ 2028ಕ್ಕೆ ಡಿ.ಕೆ.ಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ.ಕೇವಲ ಎಸ್ಕಾರ್ಟ್ಗೆ ಅಷ್ಟೆ ಡಿಸಿಎಂ ಆಗುವುದು. ನನ್ನ ಪ್ರಕಾರ ಯಾವುದೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Read More
Next Story