Canada MP Chandra Arya | ಕೆನಡಾ ರಾಜಕಾರಣದಲ್ಲಿ ʼಚಂದ್ರ ಆರ್ಯʼ ಛಾಪು: ಶಿರಾದಿಂದ ಕೆನಡಾವರೆಗಿನ ʼಚಂದ್ರʼಯಾನದ ಮೆಲುಕು
ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಕೆನಡಾದ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ ನಂತರ ಅವರ ಹುಟ್ಟು, ಬೆಳವಣಿಗೆ, ಸಾಧನೆಗಳ ಚರ್ಚೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದ ʼಇನ್ಫೋಸಿಸ್ʼ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಡಳಿತ ನಿಭಾಯಿಸಿದ ಬಳಿಕ ವಿಶ್ವವೇ ಭಾರತದತ್ತ ತಿರುಗಿ ನೋಡಿತ್ತು. ಇದೀಗ ರಾಜ್ಯದ ಮತ್ತೊಬ್ಬ ಸಾಧಕರು ಜಾಗತಿಕ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಸ್ಥಾನಕ್ಕೆ ಏರಿರುವ ಹೊಸ್ತಿಲಲ್ಲಿದ್ದಾರೆ.
ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಕೆನಡಾದ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ ನಂತರ ಅವರ ಹುಟ್ಟು, ಬೆಳವಣಿಗೆ, ಸಾಧನೆಗಳ ಚರ್ಚೆ ಮುನ್ನೆಲೆಗೆ ಬಂದಿದೆ.
ಕೆನಡಾದ ಲಿಬರಲ್ ಪಕ್ಷದ ಸಂಸದರಾಗಿರುವ ಚಂದ್ರ ಆರ್ಯ ಅವರು ಕರ್ನಾಟಕದ ಕಲ್ಪತರು ಜಿಲ್ಲೆ ತುಮಕೂರಿನ ಶಿರಾ ತಾಲೂಕಿನವರಾಗಿದ್ದು, ದ್ವಾರಾಳು ಗ್ರಾಮದಿಂದ ದೂರದ ಕೆನಡಾವರೆಗೆ ಸಾಗಿ ಅಲ್ಲಿನ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಅವರ ಬದುಕಿನ ಪಯಣವೇ ರೋಚಕ.
ಈ ಹಿಂದೆ 2022 ರಲ್ಲಿ ಕೆನಡಾ ಸಂಸತ್ತಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಚಂದ್ರ ಆರ್ಯ ಎಲ್ಲರ ಗಮನ ಸೆಳೆದಿದ್ದರು.
ಬಾಲ್ಯದ ಹಿನ್ನೆಲೆ ಏನು?
ಕೆನಡಾ ಸಂಸದ ಚಂದ್ರ ಆರ್ಯ ತಮ್ಮ ಬಾಲ್ಯವನ್ನು ಹುಟ್ಟೂರು ದ್ವಾರಾಳುನಲ್ಲೇ ಕಳೆದರು. ತಂದೆ ಗೋವಿಂದಯ್ಯ ಅವರು ವಾಣಿಜ್ಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಸರ್ಕಾರಿ ಸೇವೆಯಲ್ಲಿದ್ದರು. ಒಟ್ಟು 18 ಮಂದಿ ತುಂಬು ಕುಟುಂಬದಲ್ಲಿ ಗೋವಿಂದಯ್ಯ ಅವರೇ ಹಿರಿಯರು. ಹಾಗಾಗಿ ಇಡೀ ಕುಟುಂಬದ ನಿರ್ವಹಣೆ ಗೋವಿಂದಯ್ಯ ಅವರ ಹೆಗಲೇರಿತ್ತು. ಸರ್ಕಾರಿ ನೌಕರರಾದ ಕಾರಣ ಪದೇ ಪದೇ ವರ್ಗಾವಣೆ ಸಾಮಾನ್ಯವಾಗಿತ್ತು. ಗೋವಿಂದಯ್ಯ ಅವರೊಂದಿಗೆ ಇಡೀ ಕುಟುಂಬದ ವಲಸೆ ಕೂಡ ನಡೆಯುತ್ತಿತ್ತು.
ಚಂದ್ರ ಆರ್ಯ ಅವರು ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಬಳ್ಳಾರಿಯತ್ತ ಕುಟುಂಬದ ಪಯಣ ಆರಂಭವಾಯಿತು. ಅಂತೆಯೇ ಚಂದ್ರ ಆರ್ಯ ಅವರು ಬಳ್ಳಾರಿಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಪೂರೈಸಿದರು. ಆನಂತರ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲಸಿದರು.
ಅಣ್ಣನ ಶಿಕ್ಷಣ, ಸಾಧನೆ ಕುರಿತು ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿದ ಚಂದ್ರ ಆರ್ಯರ ಸಹೋದರ ಶ್ರೀನಿವಾಸ್, ʼʼ ಅಣ್ಣ ಚಂದ್ರ ಆರ್ಯ ಅವರು ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚ್‌ನಲ್ಲೇ ಬಿಇ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದ ಬಳಿಕ ಅವರು ಕೇಂದ್ರ ಸರ್ಕಾರದ ಡಿಆರ್‌ಡಿಒ ಕಚೇರಿಯಲ್ಲಿ ಕಿರಿಯ ವಿಜ್ಞಾನಿಯಾಗಿ ವೃತ್ತಿ ಬದುಕು ಆರಂಭಿಸಿದರು. ಆದರೆ, ಕೇಂದ್ರ ಸರ್ಕಾರದ ಕೆಲಸ ತೃಪ್ತಿ ನೀಡಲಿಲ್ಲ. ದೆಹಲಿಯಿಂದ ವಾಪಸಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(ಕೆಎಸ್‌ಎಫ್‌ಸಿ)ಯಲ್ಲಿ ಉಪ ವ್ಯವಸ್ಥಾಪಕರ ಹುದ್ದೆಗೆ ಆಯ್ಕೆಯಾದರು. ಸಾಲ ಕೊಡೋದು, ವಸೂಲಿ ಮಾಡುವ ಈ ಕೆಲಸವೂ ರುಚಿಸಲಿಲ್ಲ. ಸ್ನೇಹಿತರೊಟ್ಟಿಗೆ ಮಂಡ್ಯದ ಸೋಮನಹಳ್ಳಿಯಲ್ಲಿ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶ್ ಉದ್ಯಮ ಆರಂಭಿಸಿ, ಯಶಸ್ಸು ಕಂಡರು. ಆಗ ಪ್ರತಿ ದಿನ ಬೆಂಗಳೂರಿನಿಂದ ಮಂಡ್ಯಗೆ ಬೈಕ್‌ನಲ್ಲೇ ಪ್ರಯಾಣಿಸುತ್ತಿದ್ದರುʼʼ ಎಂದು ವಿವರಿಸಿದರು.
"ಇದಾದ ಬಳಿಕ ಸ್ವಂತ ಫೈನಾನ್ಸಿಯಲ್ ಕನ್ಸಲ್ಟೆನ್ಸಿ ಆರಂಭಿಸಿದರು. ಈ ಮಧ್ಯೆ ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಗಿಯಾಗಿದ್ದ ಸಂಗೀತಾ ಅವರನ್ನು ಮದುವೆಯಾದರು. ನಂತರ ಒಮನ್, ಮಸ್ಕತ್ ನಲ್ಲಿ ಫೈನಾನ್ಷಿಯಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸಿದರು. ಅಂತಿಮವಾಗಿ 2006 ರಲ್ಲಿ ಕೆನಡಾ ದೇಶಕ್ಕೆ ವಲಸೆ ಹೋದರು. ಆರಂಭದಲ್ಲಿ ಯಾರೂ ಪರಿಚಯದವರು ಇರಲಿಲ್ಲ. ಸೂಕ್ಷ್ಮಮತಿಯಾಗಿದ್ದ ಅಣ್ಣ, ಅಲ್ಲಿನ ಸಂಘ ಸಂಸ್ಥೆಗಳಲ್ಲಿ ಸದಸ್ಯರಾದರು. ಅತಿ ಕಡಿಮೆ ಅವಧಿಯಲ್ಲಿ ತಮ್ಮ ಪ್ರಾಮಾಣಿಕ ಕೆಲಸದಿಂದ ಸಂಪರ್ಕ ಬೆಳೆಸಿಕೊಂಡರು. 2015 ರಲ್ಲಿ ಸ್ನೇಹಿತರ ಸಲಹೆಯಂತೆ ಲಿಬರಲ್ ಪಾರ್ಟಿ ಸೇರಿದರು. ಅಲ್ಲಿ ಪಕ್ಷ ಸೇರುವ ಮುನ್ನ ಸದಸ್ಯತ್ವ ನೋಂದಣಿ ಮಾಡಿಸಬೇಕಿತ್ತು. ಅದೇ ರೀತಿ ಹೆಚ್ಚು ಸಂಪರ್ಕ ಬೆಳೆಸಿಕೊಂಡಿದ್ದ ಚಂದ್ರ ಆರ್ಯ ಅವರು, ಸದಸ್ಯತ್ವ ನೋಂದಣಿ ಮಾಡಿಸಿದ ಬಳಿಕ ಅವರಿಗೆ ಲಿಬರಲ್ ಪಕ್ಷದಿಂದ ಟಿಕೆಟ್ ಸಿಕ್ಕಿತು. ಮೊದಲ ಯತ್ನದಲ್ಲೇ ಸಂಸದರಾದರು. ಸಂಸದರಾಗಿ ಪ್ರಮಾಣ ಸ್ವೀಕರಿಸಿದ ಮರು ಕ್ಷಣದಿಂದಲೇ ಕರ್ತವ್ಯ ನಿಭಾಯಿಸಿದ ಅವರ ಕರ್ತವ್ಯ ನಿಷ್ಠೆಯ ಫಲವಾಗಿ ಈಗ ಮೂರನೇ ಅವಧಿಗೆ ಸಂಸದರಾಗಿದ್ದಾರೆʼʼ ಎಂದು ಶ್ರೀನಿವಾಸ್ ಹೆಮ್ಮೆಯಿಂದ ವಿವರಿಸಿದರು.
ಇನ್ನು ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದ್ದ ಹರ್ದೀಪ್ ಸಿಂಜ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಸ್ವ-ಪಕ್ಷದ ಪ್ರಧಾನಿ ಜಸ್ಟೀನ್ ಟ್ರುಡೊ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಇತ್ತೀಚೆಗೆ ಟ್ರುಡೊ ರಾಜೀನಾಮೆ ನೀಡಿದ ಬಳಿಕ ಪ್ರಧಾನಿ ಹುದ್ದೆಗೆ ಚಂದ್ರ ಆರ್ಯ ಅವರು ಲಿಬರಲ್ ಪಕ್ಷದಿಂದ ಆಕಾಂಕ್ಷಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕೆನಡಾ ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಿದ್ದ ಚಂದ್ರ ಆರ್ಯ
ಚಂದ್ರ ಆರ್ಯ ಅವರು ಕೆನಡಾ ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಮಾತೃಭಾಷೆ ಪ್ರೇಮ ಮೆರೆದಿದ್ದರು. ಕೆನಡಾ ಸ್ಪೀಕರ್ ಅವರಿಂದ ಒಂದು ನಿಮಿಷದ ಅನುಮತಿ ಪಡೆದು, ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡಿದ್ದರು.
ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ 'ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಎಂದು ಹೇಳುವ ಮೂಲಕ ವಿದೇಶಿ ನೆಲದಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರು.
ವಲಸಿಗರಿಗೆ ಪತ್ನಿಯ ಪಾಠ
ಸಂಸದ ಚಂದ್ರ ಆರ್ಯ ಅವರ ಪತ್ನಿ ಸಂಗೀತಾ ಅವರು ಇಂಗ್ಲಿಷ್ ವಿಷಯದಲ್ಲಿ ಎಂ.ಎ ವ್ಯಾಸಂಗ ಮಾಡಿದ್ದು, ಕೆನಡಾದ ವಲಸಿಗರಿಗೆ ಇಂಗ್ಲಿಷ್ ಶಿಕ್ಷಣ ಬೋಧನೆ ಮಾಡುತ್ತಿದ್ದಾರೆ.
ಸಂಗೀತಾ ಅವರು ಚಂದ್ರ ಆರ್ಯ ಅವರನ್ನು ವರಿಸುವುದಕ್ಕೂ ಮುನ್ನ ಬೆಂಗಳೂರಿನ ಎಂಇಎಸ್ ಕಾಲೇಜು, ಶ್ರೀಸಾಯಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಚಂದ್ರ ಆರ್ಯ ಅವರ ಮಗ ಕೂಡ ಎಂಬಿಎ ಪದವೀಧರನಾಗಿದ್ದು, ಮುಂಬೈನಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಹುಟ್ಟೂರಿಗೆ ಬಂದಿದ್ದರು
ʼʼಚಂದ್ರ ಆರ್ಯ ಅವರು ಮೂರು ತಿಂಗಳ ಹಿಂದೆ ಹುಟ್ಟೂರು ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಬಂದಿದ್ದರು. ತಾಯಿ 2014ರಲ್ಲಿ ನಿಧನರಾದರು. ತಂದೆ, ಸೋದರ ಎಲ್ಲರೂ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಚಂದ್ರ ಪ್ರತಿಬಾರಿ ಭಾರತಕ್ಕೆ ಬಂದಾಗ ಆಡಿ ಬೆಳೆದ ಹುಟ್ಟೂರು ಮರೆಯುವುದಿಲ್ಲ. 20ದಿನ,ಒಂದು ತಿಂಗಳು ಇರುತ್ತಾರೆ. ದ್ವಾರಾಳು ಗ್ರಾಮಕ್ಕೆ ಬಂದು ಎಲ್ಲರ ಜೊತೆ ಸಾಮಾನ್ಯ ವ್ಯಕ್ತಿಯಾಗಿ ಬೆರೆಯುತ್ತಾರೆ. ಹಿರಿಯೂರಿನ ಕೋಡಿಹಳ್ಳಿ, ಶಿರಾದ ಗೆಜ್ಜಗದಹಳ್ಳಿಯಲ್ಲಿರುವ ಮನೆ ದೇವರಿಗೆ ಭೇಟಿ ಪೂಜೆ ಸಲಿಸುತ್ತಾರೆ. ಈಗ ಚಂದ್ರ ಆರ್ಯ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿರುವುದು ತಾಲೂಕು, ರಾಜ್ಯಕ್ಕೆ ಖುಷಿಯಾಗಿದೆʼʼ ಎಂದು ಚಂದ್ರ ಆರ್ಯ ಅವರ ಚಿಕ್ಕಪ್ಪ ರಾಜಕುಮಾರ್ ಕರಿಯಣ್ಣ ಅವರು ʼದ ಫೆಡರಲ್ ಕರ್ನಾಟಕʼದ ಸಂಭ್ರಮ ಹಂಚಿಕೊಂಡರು.
ಕುಟುಂಬದವರೊಂದಿಗೆ ʼಗೆಟ್ ಟುಗೆದರ್ʼ
ʼʼಚಂದ್ರ ಆರ್ಯ ಬೆಂಗಳೂರಿಗೆ ಬಂದಾಗ ಸ್ನೇಹಿತರು, ಸಂಬಂಧಿಕರ ಮನೆಗೆ ಭೇಟಿ ನೀಡಲು ಸಮಯ ಇರಲ್ಲ. ಹಾಗಾಗಿ ಬೆಂಗಳೂರಿಗೆ ಎಲ್ಲರನ್ನೂ ಕರೆಸಿ ʼಗೆಟ್ ಟುಗೆದರ್ʼ ನೀಡುತ್ತಾರೆ. ಅಣ್ಣ ಬಂದಾಗ ಎಲ್ಲ ಸಂಬಂಧಿಕರು ಒಂದೆಡೆ ಸೇರುತ್ತೇವೆ. ಕೆನಡಾದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿನ ಪ್ರಧಾನಿಯೇ ಖುದ್ದು ಪ್ರಚಾರಕ್ಕೆ ಬಂದಿದ್ದರು. ಎರಡು ಹಾಗೂ ಮೂರನೇ ಅವಧಿಯಲ್ಲಿ ತಾವೇ ಪ್ರಚಾರದ ಅಂಗಳಕ್ಕಿಳಿದು ಗೆಲುವು ಸಾಧಿಸಿದ್ದರು. ಮಾಜಿ ಪ್ರಧಾನಿ ಜಸ್ಟೀನ್ ಟ್ರುಡೋ ನಿಯೋಗ ಭಾರತಕ್ಕೆ ಭೇಟಿ ನೀಡಿದಾಗಲೂ ಚಂದ್ರ ಆರ್ಯ ಅವರು ನಿಯೋಗದಲ್ಲಿದ್ದರುʼʼ ಎಂದು ಸಹೋದರ ಶ್ರೀನಿವಾಸ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅವಿಭಕ್ತ ಕುಟುಂಬದಲ್ಲಿ ಬೆಳೆದ ಚಂದ್ರ
ಚಂದ್ರ ಆರ್ಯ ಅವರು ಬಾಲ್ಯದಿಂದಲೇ ಅವಿಭಕ್ತ ಕುಟುಂಬದಲ್ಲಿ ಬೆಳೆದ ಹಿನ್ನೆಲೆಯಲ್ಲಿ ಧರ್ಮ, ಸಂಸ್ಕೃತಿಯ ಬಗ್ಗೆ ಅಪಾರ ಒಲವು ಹೊಂದಿದ್ದರು. 18 ಜನರ ಕೂಡು ಕುಟುಂಬದಲ್ಲಿ ತಂದೆ ಗೋವಿಂದಯ್ಯ ಹಿರಿಯರು. ಜೊತೆಗೆ ವಿದ್ಯಾವಂತರು. ಆರು ಮಂದಿ ಸಹೋದರರು, ಮೂವರು ಸಹೋದರಿಯರು, ತಮ್ಮ ನಾಲ್ವರು ಮಕ್ಕಳನ್ನು ಓದಿಸಿ ಬೆಳೆಸುವ ಜಬಾವ್ದಾರಿ ಹೊತ್ತಿದ್ದರು. ಇಡೀ ಕುಟುಂಬ ಗೋವಿಂದಯ್ಯ ಅವರ ವೇತನದ ಮೇಲೆ ನಿಂತಿತ್ತು.
ಮೂರನೇ ತರಗತಿಗೆ ಮುಂಬಡ್ತಿ ಪಡೆದರು
ʼʼಚಂದ್ರ ಆರ್ಯ ಅವರು ಬಾಲ್ಯದಿಂದಲೇ ಕಲಿಕೆಯಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದರು. ಚಿತ್ರದುರ್ಗದಲ್ಲಿ ಒಂದನೇ ತರಗತಿ ಪರೀಕ್ಷೆ ಬರೆದ ಬಳಿಕ ಶಾಲೆಯ ಶಿಕ್ಷಕಿಯೊಬ್ಬರು ಮನೆಗೆ ಬಂದು, ನಿಮ್ಮ ಮಗನಿಗೆ ಡಬಲ್ ಪ್ರಮೋಷನ್ ನೀಡುತ್ತೇವೆ ಎಂದು ಹೇಳಿ ನೇರವಾಗಿ ಮೂರನೇ ತರಗತಿಗೆ ಪ್ರವೇಶ ನೀಡಿದ್ದರು. ಇದನ್ನು ನಮ್ಮ ತಂದೆ ಈಗಲೂ ನೆನಪಿಸಿಕೊಳ್ಳುತ್ತಾರೆʼʼ ಶ್ರೀನಿವಾಸ ತಮ್ಮ ಅಣ್ಣನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.
ಮನೆ ದೇವರಿಗೆ ಭೇಟಿ ಕೊಡುವುದನ್ನು ಮರೆತಿಲ್ಲ
ಚಂದ್ರ ಆರ್ಯ ಅವರು ಶಿರಾ ತಾಲೂಕಿನ ಹುಟ್ಟೂರು ದ್ವಾರಾಳು ಗ್ರಾಮಕ್ಕೆ ಭೇಟಿ ನೀಡುವ ವೇಳೆ ಗೆಜ್ಜಗದಹಳ್ಳಿ ಮನೆ ದೇವರು ಲಕ್ಷ್ಮಿ ದೇವಸ್ಥಾನ ಹಾಗೂ ಹಿರಿಯೂರು ತಾಲೂಕಿನ ಕೋಡಿಹಳ್ಳಿಯ ರೇಣುಕಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿಯೇ ಹೋಗುತ್ತಿದ್ದರು ಎಂದು ಚಂದ್ರ ಆರ್ಯ ಅವರ ಚಿಕ್ಕಪ್ಪ ರಾಜಕುಮಾರ್ ಕರಿಯಣ್ಣ ನೆನಪಿಸಿಕೊಂಡರು.
ಚಂದ್ರ ಆರ್ಯರ ರಾಜಕೀಯ ಪಯಣ
2015 ರಲ್ಲಿ ಕೆನಡಾದ ಒಕ್ಕೂಟ ಚುನಾವಣೆಯಲ್ಲಿ ಲಿಬರಲ್ ಪಕ್ಷದಿಂದ ಸ್ಪರ್ಧಿಸಿ ಹೌಸ್ ಆಫ್ ಕಾಮನ್ಸ್(ಸಂಸತ್ತು) ಪ್ರವೇಶಿಸಿದರು. ತಮ್ಮ ಅಭಿವೃದ್ಧಿ ಪರ ಕೆಲಸಗಳಿಂದಾಗಿ 2019 ಹಾಗೂ 2021 ರಲ್ಲೂ ಪುನರಾಯ್ಕೆಯಾದರು. ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವಧಿಯಲ್ಲಿ ಸಂಸತ್ತಿನ ಅಂತರಾಷ್ಟ್ರೀಯ ವ್ಯಾಪಾರ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಖಲಿಸ್ತಾನಿಗಳಿಂದ ವಿರೋಧ
2024 ರ ಚುನಾವಣೆ ಪ್ರಚಾರದ ವೇಳೆ ಚಂದ್ರ ಆರ್ಯ ಅವರು ಓಂ ಚಿಹ್ನೆಯ ಬಾವುಟವನ್ನು ಪ್ರಚಾರದಲ್ಲಿ ಬಳಸಿದ್ದರು. ಇದು ಅಲ್ಲಿನ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಒಟ್ಟಾವಾದ ಪಂಜಾಬಿ ಅಸೋಸಿಯೇಷನ್ ಸದಸ್ಯರು ಚಂದ್ರ ಆರ್ಯ ಅವರ ನಿಲುವನ್ನು ಟೀಕಿಸಿದ್ದರು.
ಈಚೆಗೆ ಟೊರೆಂಟೊದಲ್ಲಿ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ ವೇಳೆ ಚಂದ್ರ ಆರ್ಯ ಅವರು ಕೆನಡಾದಲ್ಲಿ ಖಲಿಸ್ತಾನಿ ಪರ ಹೋರಾಟಗಾರರ ಕಿರುಕುಳ, ಹಿಂಸೆಯ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.