
ಚಾಮುಂಡಿ ಬೆಟ್ಟ ಹಿಂದುಗಳ ಸ್ವತ್ತಲ್ಲ: ಡಿಕೆಶಿ ಹೇಳಿಕೆಗೆ ಬಿಜೆಪಿ ಗರಂ: ಮತ್ತೊಂದು ಇಕ್ಕಟ್ಟು ಸೃಷ್ಟಿಸಿದ 'ಕೈ' ಕ್ಯಾಪ್ಟನ್!
ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕೆಲವು ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಇತ್ತೀಚೆಗೆ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದೀಗ ನಾಡಹಬ್ಬ ದಸರಾದ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ನೀಡಿರುವ ಹೇಳಿಕೆಯ ಮೂಲಕ ಮತ್ತೊಂದು ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಬಿಜೆಪಿ ನಾಯಕರು ಅವರ ಮೇಲೆ ಮುಗಿಬೀಳಲು ಆರಂಭಿಸಿದ್ದರೆ ಹಾಗೂ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಟೀಕೆ ಮಾಡಿದ್ದಾರೆ.
ವಿವಾದದ ಮೂಲ: ಡಿಕೆಶಿ ಹೇಳಿಕೆ ಏನು?
ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕೆಲವು ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, "ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಸರ್ವಧರ್ಮೀಯರ ಶ್ರದ್ಧಾ ಕೇಂದ್ರ. ನಾವು ಹೇಗೆ ಮಸೀದಿ, ಚರ್ಚ್‌ಗಳಿಗೆ ಹೋಗುತ್ತೇವೆಯೋ, ಹಾಗೆಯೇ ಬೇರೆ ಧರ್ಮದವರೂ ಇಲ್ಲಿಗೆ ಬರುತ್ತಾರೆ. ಅವರನ್ನು ತಡೆಯಲು ನಾವ್ಯಾರು? ಇದೊಂದು ಶುದ್ಧ ರಾಜಕೀಯ" ಎಂದು ಖಾರವಾಗಿ ಉತ್ತರಿಸಿದ್ದರು. "ಅಯೋಧ್ಯೆಯಲ್ಲಿಯೂ ಕೇವಲ ಹಿಂದೂಗಳು ಮಾತ್ರ ಬರಬೇಕು ಎಂಬ ನಿಯಮವಿಲ್ಲ. ಭಾರತ ಒಂದು ಜಾತ್ಯತೀತ ರಾಷ್ಟ್ರ, ಸಂವಿಧಾನವು ಎಲ್ಲ ಧರ್ಮಗಳಿಗೆ ರಕ್ಷಣೆ ನೀಡಿದೆ," ಎಂದು ಅವರು ಪ್ರಶ್ನಿಸಿದ್ದರು.
ಬಿಜೆಪಿ ಮತ್ತು ಯದುವೀರ್ ಅವರಿಂದ ತೀವ್ರ ವಾಗ್ದಾಳಿ
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ ಹಾಗೂ ಸಂಪ್ರದಾಯದ ದಸರೆಯನ್ನು ಬಳಸಿಕೊಳ್ಳಬೇಡಿ. ಬಂಡೆಯೆಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ, ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ, ಎಚ್ಚರ" ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.
ಅದಕ್ಕಿಂತ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, "ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ, ವಿಗ್ರಹಾರಾಧನೆಯನ್ನು ಪಾಲಿಸದವರು ದಸರಾ ಉದ್ಘಾಟನೆಗೆ ಬಂದು ಏನು ಮಾಡುತ್ತಾರೆ?" ಎಂದು ಪ್ರಶ್ನಿಸಿ, ಬಾನು ಮುಷ್ತಾಕ್ ಅವರು ಕಾರ್ಯಕ್ರಮದಿಂದ ದೂರ ಉಳಿಯುವಂತೆ ಮನವಿ ಮಾಡಿದ್ದರು.
ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡ ಡಿಕೆಶಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವರು ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆ ತೀವ್ರ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲ. ಚಾಮುಂಡಿ ಬೆಟ್ಟವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಅದು ಮೈಸೂರು ಸಾಮ್ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗ. ಶತಮಾನಗಳಿಂದ ಒಡೆಯರ್ ಮನೆತನವು ತಾಯಿಯ ಆರಾಧನೆಯನ್ನು ನಡೆಸಿಕೊಂಡು ಬಂದಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತವೆ" ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ. ಹಲವು ನೆಟ್ಟಿಗರು, ಡಿಕೆಶಿ ಅವರ ಹೇಳಿಕೆಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, #DKShivakumar, #ChamundiHills, ಮತ್ತು #SaveHinduTemples ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಶತಮಾನಗಳಿಂದ ಹಿಂದೂಗಳು ಪೂಜಿಸಿಕೊಂಡು ಬಂದಿರುವ, ಮೈಸೂರು ಅರಸರ ಆರಾಧ್ಯ ದೈವವಾಗಿರುವ ಚಾಮುಂಡೇಶ್ವರಿಯ ಪವಿತ್ರ ಕ್ಷೇತ್ರವನ್ನು 'ಸರ್ವಧರ್ಮೀಯರ ಕೇಂದ್ರ' ಎಂದು ಹೇಳುವ ಮೂಲಕ ಡಿಕೆಶಿ ಅವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ," ಎಂದು ಅನೇಕರು ಟೀಕಿಸಿದ್ದಾರೆ.
ಇದೇ ವೇಳೆ, ಕೆಲವು ಬಳಕೆದಾರರು, "ಮಸೀದಿ ಮತ್ತು ಚರ್ಚ್‌ಗಳನ್ನು 'ಸರ್ವಧರ್ಮೀಯರ ಕೇಂದ್ರ' ಎಂದು ಹೇಳುವ ಧೈರ್ಯ ಡಿಕೆಶಿ ಅವರಿಗಿದೆಯೇ?" ಎಂದು ಪ್ರಶ್ನಿಸಿದ್ದಾರೆ. "ಇದು ಕೇವಲ ದಸರಾ ಉದ್ಘಾಟನೆಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯಲ್ಲ, ಬದಲಿಗೆ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲಿನ ವ್ಯವಸ್ಥಿತ ದಾಳಿಯ ಭಾಗವಾಗಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸಿ," ಎಂದು ಹಲವರು ಆಗ್ರಹಿಸಿದ್ದಾರೆ. ಈ ಹೇಳಿಕೆಯು ಕೇವಲ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನರಲ್ಲಿಯೂ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ಡಿಕೆಶಿ ಅವರ ವಿರುದ್ಧದ ಆಕ್ರೋಶವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.