
ಬಹಿಷ್ಕಾರಕ್ಕೆ ಒಳಗಾದ ಕೃಷ್ಣಮೂರ್ತಿ ದಂಪತಿ
ಚಾಮರಾಜನಗರ: ಅಂತರ್ಜಾತಿ ವಿವಾಹ ಮಾಡಿದ್ದಕ್ಕೆ ಗಾಮದಿಂದಲೇ ಬಹಿಷ್ಕಾರ
ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರಿದರೆ ಪರಿಣಾಮ ಇನ್ನಷ್ಟು ಭಯಾನಕವಾಗಿರಲಿದೆ ಎಂದು ಗ್ರಾಮದ ಮುಖಂಡರು ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಸಾಮಾಜಿಕ ಬಹಿಷ್ಕಾರ ನಿರ್ಮೂಲನೆ ಮಸೂದೆ ಅಂಗೀಕರಿಸಿದ ಬಳಿಕವೂ ಜಾತಿ ಆಧಾರಿತ ದೌರ್ಜನ್ಯಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಂತರ್ಜಾತಿ ವಿವಾಹದ ಕಾರಣಕ್ಕೆ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬಂಡಿಗೆರೆ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಅವರು ತಮ್ಮ ಮಗಳನ್ನು ಅನ್ಯ ಜಾತಿಯ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರು. ಇದರಿಂದ ಕುಪಿತಗೊಂಡ ಊರಿನ ಗ್ರಾಮಸ್ಥರು ಕೃಷ್ಣಮೂರ್ತಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೇ 5 ಲಕ್ಷ ರೂ.ಗಳನ್ನು ತಪ್ಪು ಕಾಣಿಕೆಯನ್ನು ದಂಡದ ರೂಪದಲ್ಲಿ ನೀಡುವಂತೆ ಸೂಚಿಸಿದ್ದಾರೆ.
ಏನಿದು ಘಟನೆ?
2023ರಲ್ಲಿ ಕೃಷ್ಣಮೂರ್ತಿ ಅವರ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದಕ್ಕೆ ಪೋಷಕರು ಕೂಡ ಒಪ್ಪಿಗೆ ಸೂಚಿಸಿದ್ದರು. ಮದುವೆಯಾದ ಮೂರೇ ತಿಂಗಳಲ್ಲಿ ಕೃಷ್ಣಮೂರ್ತಿ ಅಳಿಯ ಮೃತಪಟ್ಟಿದ್ದ. ಗಂಡನನ್ನು ಕಳೆದುಕೊಂಡು ವಿಧವೆಯಾದ ಮಗಳನ್ನು ಕೃಷ್ಣಮೂರ್ತಿ ದಂಪತಿ ಗ್ರಾಮಕ್ಕೆ ಕರೆತಂದಿದ್ದರು.
ವಿಚಾರ ತಿಳಿದ ಉಪ್ಪಾರ ಸಮುದಾಯದ ಕೆಲ ಮುಖಂಡರು ಕೃಷ್ಣಮೂರ್ತಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
“ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಊರಿಗೆ ಬಿಡುವುದಿಲ್ಲ ಎಂದು ಹೇಳಿ, ಊರಿನಿಂದ ಹೊರಹಾಕಲಾಗಿದೆ. ಬಹಿಷ್ಕಾರದಿಂದ ಮುಕ್ತಿ ಪಡೆಯಬೇಕಾದರೆ 5 ಲಕ್ಷ ರೂ. ತಪ್ಪು ಕಾಣಿಕೆ ನೀಡಬೇಕು ಎಂಬ ಬೇಡಿಕೆ ಸಹ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರಿದರೆ ಪರಿಣಾಮ ಇನ್ನಷ್ಟು ಭಯಾನಕವಾಗಿರಲಿದೆ ಎಂದು ಗ್ರಾಮದ ಮುಖಂಡರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಬಹಿಷ್ಕಾರ ಕಾನೂನಾತ್ಮಕವಾಗಿ ಅಪರಾಧ ಎಂದು ಪರಿಗಣಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಸಾಮಾಜಿಕ ಬಹಿಷ್ಕಾರ ನಿಷೇಧದ ಕಾನೂನನ್ನು ಅಂಗೀಕರಿಸಿದೆ. ಇಷ್ಟಾದರೂ ಅಲ್ಲಲ್ಲಿ ಇಂತಹ ಅನಿಷ್ಠ ಪದ್ಧತಿಗಳು ನಡೆಯುತ್ತಿರುವುದು ಸರ್ಕಾರಕ್ಕೆ ಸವಾಲಾಗಿ ಕಂಡಿವೆ.
ವಿಧಾನ ಮಂಡಲದಲ್ಲಿ ಅಂಗೀಕಾರಗೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆಯು ಜಾರಿಯಾದರೆ ಇಂತಹ ಅನಿಷ್ಠ ಆಚರಣೆಗಳಿಗೆ ಕಡಿವಾಣ ಬೀಳಲಿದೆ.
ಸುಮೊಟೊ ಕೇಸ್' ದಾಖಲು ಸೇರ್ಪಡೆ
ಸಮಾಜದಲ್ಲಿ ಬಹಿಷ್ಕಾರಕ್ಕೆ ಒಳಗಾದವರ ಕುರಿತು ಪೊಲೀಸರು ಸುಮೊಟೊ ಪ್ರಕರಣ ದಾಖಲಿಸುವುದನ್ನು ವಿಧೇಯಕದಲ್ಲಿ ಸೇರಿಸಲಾಗಿದೆ. ಈ ಕಾನೂನು ದುರ್ಬಳಕೆ ಮಾಡಿಕೊಳ್ಳುವವರು ಸೇರಿದಂತೆ ಯಾವ ಅಧಿಕಾರಿ ಕೆಲಸ ಮಾಡುವುದಿಲ್ಲವೋ ಅಂತವರ ವಿರುದ್ಧವೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಈ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.
ಮೂರು ವರ್ಷ ಸಜೆ, 1ಲಕ್ಷ ರೂ. ದಂಡ
'ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ-2025' ಅಡಿ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು ನಿಷಿದ್ದ. ಬಹಿಷ್ಕಾರ ಹಾಕಿದವರಿಗೆ 1 ಲಕ್ಷ ರೂ. ದಂಡ ಮತ್ತು ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಬಹಿಷ್ಕಾರದ ಸಭೆ ನಡೆಸಿದವರು, ಅದಕ್ಕೆ ಕಾರಣರಾದವರು ಮತ್ತು ಬೆಂಬಲಿಸಿದವರೂ ಕೂಡ ಶಿಕ್ಷೆಗೆ ಗುರಿಯಾಗಲಿದ್ದಾರೆ.
ಬಹಿಷ್ಕಾರ ಹಾಕುವ ಉದ್ದೇಶದಿಂದ ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ. ಧಾರ್ಮಿಕ ಪದ್ದತಿ, ಆಚರಣೆಗಳನ್ನು ಪಾಲಿಸದಿದ್ದರೆ, ಜಾತಿಯ ಹೊರಗೆ ಮದುವೆಯಾದರೆ, ಇಷ್ಟದ ಉಡುಪು ಧರಿಸಿದರೆ, ಇಷ್ಟದ ಭಾಷೆ ಮಾತನಾಡಿದರೆ ಬಹಿಷ್ಕರಿಸುವುದು ಸಹ ಮಸೂದೆ ವ್ಯಾಪ್ತಿಗೆ ಒಳಪಡಲಿದೆ.

