
ಚಲೋ ದಿಲ್ಲಿ | ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಸಿದ್ದರಾಮಯ್ಯ ಪತ್ರಾಸ್ತ್ರ ತಿರುಗೇಟು
ಕೇಂದ್ರದ ಬಿಜೆಪಿ ಸರ್ಕಾರ ಹಣಕಾಸು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಎಸಗುತ್ತಿರುವ ಅನ್ಯಾಯ ವಿರೋಧಿಸಿ ತಾವು ಹಮ್ಮಿಕೊಂಡಿರುವ ಚಲೋ ದಿಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆಗೆ ಪತ್ರ ಬರೆಯುವ ಮೂಲಕ ಸಿದ್ದರಾಮಯ್ಯ ಚಾಣಾಕ್ಷ ತಿರುಗೇಟು ನೀಡಿದ್ದಾರೆ.
ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ತಮ್ಮ ಸರ್ಕಾರ ಹಮ್ಮಿಕೊಂಡಿರುವ ʼಚಲೋ ದಿಲ್ಲಿʼ ಹೋರಾಟದಲ್ಲಿ ಭಾಗಿಯಾಗಿ ಕರ್ನಾಟಕದ ಪರ ದನಿ ಎತ್ತುವಂತೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡದೇ ಇರುವ ಮತ್ತು ನ್ಯಾಯಯುತವಾಗಿ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲು, ಬರ ಪರಿಹಾರ, ವಿಶೇಷ ಅನುದಾನಗಳನ್ನು ನೀಡದೇ ಇರುವುದನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಹಣಕಾಸು ನೆರವು, ತೆರಿಗೆ ಪಾಲು ಕಡಿತವನ್ನು ಸಮರ್ಥಿಸಿಕೊಳ್ಳುತ್ತಿರುವ ಹಣಕಾಸು ಸಚಿವೆಗೇ ನೇರ ಪತ್ರ ಬರೆದು, ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ನೀವು ಕರ್ನಾಟಕದಿಂದ ಆಯ್ಕೆಯಾಗಿದ್ದೀರಿ. ಕರ್ನಾಟಕದ ಜನತೆಯ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುವ ಬದಲು ತದ್ವಿರುದ್ಧವಾಗಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದೀರಿ? ಎಂಬುದನ್ನು ನೆನಪಿಸಿರುವ ಸಿದ್ದರಾಮಯ್ಯ, ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಭಾರೀ
ಅನ್ಯಾಯವನ್ನು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನೀವೂ ಕೂಡ ಅರಿತಿರುತ್ತೀರಿ. ಆದುದರಿಂದ ಫೆ.7ರಂದು ಜಂತರ್ ಮಂಥರ್ ನಲ್ಲಿ ನಡೆಯಲಿರುವ #ನನ್ನತೆರಿಗೆನನ್ನಹಕ್ಕು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕರ್ನಾಟಕದ ಜನತೆಯ ಪರ ದನಿಗೂಡಿಸಿ ಎಂದು ಸಚಿವೆ ನಿರ್ಮಲಾ ಅವರಿಗೆ ಕುಟುಕಿದ್ದಾರೆ.
ಕೇಂದ್ರ ಬಜೆಟ್ ಮಂಡನೆ ದಿನದಿಂದಲೇ ಕರ್ನಾಟಕ ಸರ್ಕಾರ, ಬಜೆಟ್ನಲ್ಲಿ ರಾಜ್ಯಕ್ಕೆ ಬಿಡಿಗಾಸೂ ನೀಡದೇ ಇರುವುದು, ಬರ ಪರಿಹಾರ ಕೋರಿದರೂ ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು, ಜಿಎಸ್ ಟಿ ಪಾಲು ಹಂಚಿಕೆಯಲ್ಲಿನ ತಾರತಮ್ಯ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಬಿಜೆಪಿ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆಯನ್ನು ಪ್ರಶ್ನಿಸುತ್ತಲೇ ಇತ್ತು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕೇಂದ್ರ ಸರ್ಕಾರ ಕಳೆದ 2017-18ರಿಂದ ಈವರೆಗೆ ಕರ್ನಾಟಕಕ್ಕೆ ನೀಡಬೇಕಾದ ಹಣಕಾಸು ನೆರವು, ಅನುದಾನ ಮತ್ತು ಹಂಚಿಕೆಯ ವಿಷಯದಲ್ಲಿ ಅನ್ಯಾಯ ಮಾಡುತ್ತಲೇ ಇದ್ದು, ಅದರಿಂದಾಗಿ ರಾಜ್ಯಕ್ಕೆ ಬರೋಬ್ಬರಿ 1.87 ಲಕ್ಷ ಕೋಟಿ ನಷ್ಟವಾಗಿದೆ. ಕರ್ನಾಟಕ ನೀಡುವ ಪ್ರತಿ ನೂರು ರೂಪಾಯಿ ಜಿಎಸ್ ಟಿಯಲ್ಲಿ ಕೇಂದ್ರ ವಾಪಸ್ ನೀಡುವುದು ಕೇವಲ ಹನ್ನೆರಡು ರೂಪಾಯಿ ಮಾತ್ರ. ಇದು ಕನ್ನಡಿಗರಿಗೆ, ಕರ್ನಾಟಕದ ಜನತೆಗೆ ಬಿಜೆಪಿ ಎಸಗುತ್ತಿರುವ ದ್ರೋಹ. ಈ ಅನ್ಯಾಯವನ್ನು ಪ್ರತಿಭಟಿಸಿ ನಾವು ʼಚಲೋ ದಿಲ್ಲಿʼ ನಡೆಸುತ್ತೇವೆ ಎಂದು ಘೋಷಿಸಿದ್ದರು.
ʼಚಲೋ ದಿಲ್ಲಿʼ ಹೋರಾಟದ ಮೂಲಕ ಕರ್ನಾಟಕಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಅನ್ಯಾಯ ಎಸಗಿದೆ ಎಂಬುದನ್ನು ರಾಷ್ಟ್ರಮಟ್ಟದ ಚರ್ಚೆಯ ವಸ್ತುವಾಗಿ ಮಾಡುವುದು ಮತ್ತು ಕರ್ನಾಟಕದ ಆಚೆಗೂ ಜನಸಾಮಾನ್ಯರಿಗೆ ಈ ವಿಷಯವನ್ನು ಮುಟ್ಟಿಸುವ ಮೂಲಕ ಬಿಜೆಪಿಯ ಆಡಳಿತ ವೈಖರಿಯ ಕುರಿತ ಚರ್ಚೆ ಹುಟ್ಟುಹಾಕುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ದಾಳವಾಗಿತ್ತು.
ಫಲಿಸಿತೆ ಕಾಂಗ್ರೆಸ್ ತಂತ್ರ?
ಕರ್ನಾಟಕದ ಮುಖ್ಯಮಂತ್ರಿ ಚಲೋ ದಿಲ್ಲಿ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಚಲೋ ದಿಲ್ಲಿ ಕೈಗೊಂಡಿದ್ದಾರೆ. ಪಿಣರಾಯಿ ಅವರು ಕೂಡ ಕೇಂದ್ರದಿಂದ ಹಣಕಾಸು ಹಂಚಿಕೆಯಲ್ಲಿ ತಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ತಮ್ಮ ಸಚಿವರು, ಶಾಸಕರು ಮತ್ತು ಸಂಸದರೊಂದಿಗೆ ಜಂತರ್ ಮಂತರ್ ನಲ್ಲಿ ಧರಣಿ ನಡೆಸಲಿದ್ದಾರೆ. ವಿಶೇಷವೆಂದರೆ, ದಕ್ಷಿಣದ ಎರಡು ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳು ನಡೆಸುತ್ತಿರುವ ಈ ಹೋರಾಟಕ್ಕೆ ತಮಿಳುನಾಡು, ತೆಲಂಗಾಣ ಸೇರಿದಂತೆ ದಕ್ಷಿಣದ ರಾಜ್ಯಗಳು ಹಾಗೂ ದೆಹಲಿ ಮತ್ತು ಪಂಜಾಬ್ ರಾಜ್ಯಗಳು ಕೂಡ ಬೆಂಬಲ ಸೂಚಿಸಿವೆ.