ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪೇನ್
x

ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪೇನ್


ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಬಳಿಕ ಸುಮಲತಾ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇತ್ತೀಚೆಗೆ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮೈತ್ರಿ ಅಭ್ಯರ್ಥಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪರ ಪ್ರಚಾರ ಮಾಡುವ ನಿರೀಕ್ಷೆ ಇತ್ತು. ಆದರೆ ಅವರು ಸೈಲೆಂಟ್‌ ಆಗಿದ್ದಾರೆ. ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ.

ಸುಮಲತಾ ಅವರನ್ನು ಅಮ್ಮ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಮಲತಾ ಅವರು ಏನು ಹೇಳಿದರೂ ಕೇಳುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ. ಸುಮಲತಾ ಅವರು ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡಬೇಕು. ಅವರು ಸದ್ಯ ಎಚ್‌ಡಿಕೆ ಪರ ಪ್ರಚಾರ ಮಾಡುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸುಮಲತ ಅವರ ಆಪ್ತರಾದ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಮಾಡಲು ಒಪ್ಪಿರುವುದು ಗೊಂದಲಕ್ಕೆ ಕಾರಣವಾಗಿದೆ.

ದರ್ಶನ್‌ ಹೇಳಿದ್ದೇನು?

ʻʻನಾನು ಪಕ್ಷದ ಪರ ಬರುವುದಿಲ್ಲ, ನಾನು ವ್ಯಕ್ತಿ ಪರ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ. ಮಾಧ್ಯಮದವರು ಏನೇನೋ ಹಾಕಿದ್ರೆ ತುಂಬಾ ಕಷ್ಟ ಆಗುತ್ತದೆ. ಹೀಗಾಗಿ ನಾನು ಸ್ಪಷ್ಟನೆ ಕೊಡುತ್ತೇನೆ. ಸುಮಲತಾಗೆ ಮಂಡ್ಯ ಸೀಟ್ ಸಿಕ್ಕಿಲ್ಲ ಎಂದರೆ ನಮ್ಮ ಪರ ನೀವು ಪ್ರಚಾರ ಮಾಡಬೇಕು ಎಂದು ಉದಯ್ ಗೌಡ್ರು ಕೇಳಿದ್ದರು. ಮೊದಲು ಕರೆದರು ಎನ್ನುವ ಕಾರಣಕ್ಕೆ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್‌ನಿಂದ ಸ್ಟಾರ್ ಚಂದ್ರು ನಿಂತಿದ್ದಾರೆ. ನಿಮ್ಮ ಅತ್ಯಮೂಲ್ಯ ಮತವನ್ನು ಅವರಿಗೆ ನೀಡಿ. ನರೇಂದ್ರ ಹಾಗೂ ಉದಯ್ ಅವರ ಕೈಗಳನ್ನು ಬಲಪಡಿಸಿʼʼ ಎಂದು ಜನರಲ್ಲಿ ಮತಯಾಚಿಸಿದ್ದಾರೆ.

Read More
Next Story