
ವಕ್ಫ್ ಕಾಯ್ದೆ | ಸುಪ್ರೀಂ ತೀರ್ಪಿನಿಂದ ಕೇಂದ್ರದ ನಿಲುವಿಗೆ ಗೆಲುವು-ಛಲವಾದಿ ನಾರಾಯಣಸ್ವಾಮಿ
ಸುಪ್ರೀಂಕೋರ್ಟ್‌ನ ಸಲಹೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಕ್ಫ್ ಕಾಯ್ದೆಗೆ ತಂದಿರುವ ತಿದ್ದುಪಡಿ ಹಾಗೂ ವಕ್ಫ್ ಆಸ್ತಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಜಯ ಸಿಕ್ಕಂತಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಕಾಯಿದೆ ತಿದ್ದುಪಡಿಗೆ ನ್ಯಾಯಾಲಯ ಯಾವುದೇ ತಡೆ ನೀಡಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ದಾಖಲಾಗಿರುವ ಹಲವು ಅರ್ಜಿಗಳನ್ನು ಸುಪ್ರೀಂಕೋರ್ಟ್ ಇತ್ಯರ್ಥ ಮಾಡಿದೆ. ನ್ಯಾಯಾಲಯವು ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿಲ್ಲ. ಬದಲಿಗೆ ಆ ಸಮುದಾಯದ ಜೊತೆಗೆ ಇತರ ಸಮುದಾಯಗಳನ್ನು ಸೇರಿಸಲು ಸಲಹೆ ನೀಡಿದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಸಲಹೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಮಗ್ರ ಚರ್ಚೆ ನಡೆಸಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಕ್ಫ್ ಕಾಯ್ದೆ ಮೂಲಕ ಅನಗತ್ಯವಾಗಿ ವಕ್ಫ್ ಬೋರ್ಡ್‌ಗಳನ್ನು ಸ್ಥಾಪಿಸುವುದಕ್ಕೆ ಕಡಿವಾಣ ಬಿದ್ದಿದೆ. ಕರ್ನಾಟಕದಲ್ಲೂ ಓಲೈಕೆ ರಾಜಕಾರಣ ಬಿಟ್ಟು, ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಅರ್ಜಿ; ಸರ್ಕಾರಕ್ಕೆ ತರಾಟೆ
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿ ವಜಾ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯಾರು ಅರ್ಜಿ ಹಾಕಿದ್ದರು ಎನ್ನುವುದು ಪ್ರಶ್ನೆಯಲ್ಲ, ಯಾರು ದಸರಾ ಉದ್ಘಾಟನೆ ಮಾಡುತ್ತಿದ್ದಾರೋ ಅವರು ತಾಯಿ ಭುವನೇಶ್ವರಿಯನ್ನು ವಿರೋಧ ಮಾಡಿದವರು. ಅವರಿಂದ ದಸರಾ ಉದ್ಘಾಟನೆ ಸರಿಯಲ್ಲ ಎಂಬುದು ಹಿಂದುಗಳ ವಾದ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಆದರೆ, ಅರ್ಥ ಮಾಡಿಕೊಂಡಿಲ್ಲ. ಈ ವಿಷಯವನ್ನು ಕೋರ್ಟ್ ಸೂಕ್ಷ್ಮವಾಗಿ ಪರಿಗಣಿಸಿರಲಿಲ್ಲ. ಆದರೂ, ಕೋರ್ಟ್ ಆದೇಶವನ್ನು ನಾವು ಗೌರವಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಎಲ್ಲಾ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಎಸ್‌ಟಿಗೆ ಕುರುಬ ಸಮುದಾಯ ಪ್ರಸ್ತಾಪಕ್ಕೆ ವಿರೋಧ
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಕುರಿತು ಮಂಗಳವಾರ ನಡೆಸಲು ಉದ್ದೇಶಿಸಿರುವ ಅಧಿಕಾರಿಗಳ ಸಭೆಗೆ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲು ಮೀಸಲಾತಿ ಕಾಣದ ಸಮುದಾಯಗಳಿಗೆ ಈ ಸರ್ಕಾರ ಮೀಸಲಾತಿ ಕೊಡಲಿ. ಎಸ್‌ಸಿ ವರ್ಗಗಳಿಗೆ ಸಮರ್ಪಕ ಮೀಸಲಾತಿ ಹಂಚದೇ ಅನ್ಯಾಯ ಮಾಡಿದೆ. ಸುಪ್ರೀಂಕೋರ್ಟ್ ಹೇಳಿದಂತೆ ಒಳಮೀಸಲಾತಿ ಕೊಟ್ಟಿಲ್ಲ, 59 ಅಲೆಮಾರಿ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಸ್‌ಸಿ ಜಾತಿಗಳಿಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಇಂತಹ ದುರಾಡಳಿತ ಮಾಡುವ ಸರ್ಕಾರ ಈಗ ಮತ್ತೊಂದು ಅವಾಂತರಕ್ಕೆ ಕೈ ಹಾಕಿದೆ. ಎಸ್‌ಟಿ ಮೀಸಲಾತಿ ಕಸಿಯುವ ಕೆಲಸವೂ ನಡೆಯುತ್ತಿದೆ. ಬಿಜೆಪಿ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ ಶೇ 3 ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಏರಿಸಿತ್ತು. ಈಗ ಎಸ್‌ಟಿ ವರ್ಗಕ್ಕೆ ಕುರುಬ ಸಮುದಾಯ ಸೇರಿಸಲು ಹೊರಟಿದ್ದಾರೆ. ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವುದು ಎಷ್ಟು ಸೂಕ್ತ ಎಂದು ಸರ್ಕಾರ ಮತ್ತೊಮ್ಮೆ ಅವಲೋಕನ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪ್ರಕರಣ
ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆ ವಿಳಂಬ ಕುರಿತು ಮಾತನಾಡಿದ ಅವರು, ಸತ್ಯ ಹೊರಗೆ ಬೇಗ ಬಂದರೆ ಸಿಕ್ಕಿ ಬೀಳುವುದು ಕಾಂಗ್ರೆಸ್‌ನವರು. ಕಾಂಗ್ರೆಸ್ ನವರಿಗೆ ಬುರುಡೆಯಲ್ಲಿ ಏನೂ ಇಲ್ಲ. ಎಡಪಂಥಿಯರು ಎಲ್ಲಾ ಯೋಜನೆ ಹಾಕುತ್ತಾರೆ. ಎಡಪಂಥೀಯರ ತಾಳಕ್ಕೆ ತಕ್ಕಂತೆ ಕಾಂಗ್ರೆಸ್ ಕುಣಿಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಅವರು ಬಿಟ್ಟ ಹುಳಕ್ಕೆ ಇವರು ತಂಡ ಮಾಡಿಕೊಂಡು ನಾಟಕ ಮಾಡುತ್ತಿದ್ದಾರೆ. ಸತ್ಯ ಮುಚ್ಚಿಹಾಕಲು ಎಸ್‌ಐಟಿ ಕೂಡ ನಿಧಾನಗತಿಯಲ್ಲಿ ತನಿಖೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.