ಮೇಲ್ಮನೆಗೆ ಪ್ರತಿಪಕ್ಷ ನಾಯಕನಾಗಿ ಛಲವಾದಿ ನಾರಾಯಣ ಸ್ವಾಮಿ; ವಿಧಾನ ಪರಿಷತ್‌ನಲ್ಲಿ ದಲಿತ ಮುಖಂಡನಿಗೆ  ಬಿಜೆಪಿ ಮಣೆ
x

ಮೇಲ್ಮನೆಗೆ ಪ್ರತಿಪಕ್ಷ ನಾಯಕನಾಗಿ ಛಲವಾದಿ ನಾರಾಯಣ ಸ್ವಾಮಿ; ವಿಧಾನ ಪರಿಷತ್‌ನಲ್ಲಿ ದಲಿತ ಮುಖಂಡನಿಗೆ ಬಿಜೆಪಿ ಮಣೆ

ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯನಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆ ಸ್ಥಾನವು ತೆರವಾಗಿತ್ತು. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ ಮತ್ತು ರವಿ ಕುಮಾರ್ ಅವರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಆ ಸ್ಥಾನ ಅವರಿಬ್ಬರಿಗೂ ದಕ್ಕದೆ ನಾರಾಯಣಸ್ವಾಮಿ ಅವರ ಪಾಲಾಗಿದೆ.


ಮಹತ್ವದ ಬೆಳವಣಿಗೆಯೊಂದರಲ್ಲಿ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕನನ್ನಾಗಿ ಪರಿಷತ್‌ ಸದಸ್ಯ ಹಾಗೂ ದಲಿತ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ.

ಸೋಮವಾರ ಸಂಜೆ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಜೆಪಿ ಈ ಅಚ್ಚರಿಯ ಆಯ್ಕೆ ಮಾಡಿದೆ. ಇದಕ್ಕೆ ಮುನ್ನ ಒಕ್ಕಲಿಗ ನಾಯಕ, ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಇತ್ತೀಚೆಗೆ ಪರಿಷತ್‌ ಸದಸ್ಯರನ್ನಾಗಿ ನೇಮಿಸಿದ್ದ ಬಿಜೆಪಿ , ಬಹುತೇಕ ರವಿ ಅವರನ್ನೇ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಲಿದೆ ಎಂದು ನಂಬಲಾಗಿತ್ತು. ಕೆಳಮನೆ (ವಿಧಾನಸಭೆ)ಯಲ್ಲಿ ಒಕ್ಕಲಿಗ ಸಮೂದಾಯದ ಆರ್‌. ಆಶೋಕ್‌ ಅವರು ನಾಯಕರಾಗಿದ್ದು, ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಅಂಶ ಹೈಕಮಾಂಡ್‌ ಗಮನಕ್ಕೆ ಹೋಗಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಸಿ.ಟಿ. ರವಿ ಅವರನ್ನು ವಿಪಕ್ಷ ನಾಯಕನಾಗಿ, ಹಾಗೂ ಕೆಳಮನೆಯಲ್ಲಿ ಲಿಂಗಾಯತ ಸಮೂದಾಯದ ಮುಖಂಡನನ್ನು ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಕುರಿತು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ, ದಲಿತ ಮುಖಡ ಛಲವಾದಿ ನಾರಾಯಣ ಸ್ವಾಮಿ ಅವರ ಆಯ್ಕೆ ಬಿಜೆಪಿ ನಾಯಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

ಬಿ.ಎಸ್.‌ ಯಡಿಯೂರಪ್ಪ ಬಣದ ನಾಯಕನನ್ನೇ ಮತ್ತೆ ಮುನ್ನೆಲೆಗೆ ತರಲಾಗಿದ್ದು, ಬಿಎಸ್‌ವೈ ವಿರೋಧಿ ಪಾಳಯದ ನಾಯಕರಾದ ಸಿ.ಟಿ. ರವಿ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಮತ್ತಿತರರಿಗೆ ನಿರಾಶೆ ಮೂಡಿಸಿದೆ.

ವಿಜಯೇಂದ್ರ ಸಂದೇಶ

ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಹಿನ್ನಲೆಯ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಟರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.

"ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಮಹರ್ಷಿ ವಾಲ್ಮೀಕಿ ನಿಗಮದ ₹ 187 ಕೋಟಿ ಗುಳುಂ, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಸಾವಿರಾರು ಕೋಟಿ ರೂಪಾಯಿಗಳು ಇತರ ಯೋಜನೆಗಳಿಗಾಗಿ ನಿಯಮ ಉಲ್ಲಂಘಿಸಿ ಬಳಕೆ, ಭ್ರಷ್ಟಾಚಾರಗಳ ಸರಣೀ ಸರಮಾಲೆ, ಸ್ವಜನ ಪಕ್ಷಪಾತ ಹಾಗೂ ಮುಡಾ ಹಗರಣಗಳ ವ್ಯೂಹದಲ್ಲಿ ಸಿಲುಕಿ ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನಾಕ್ರೋಶ ಎದುರಿಸುತ್ತರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಲು ನಾರಾಯಣ ಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಸಮಯೋಚಿತ ನಿರ್ಧಾರವಾಗಿದೆ. ಮಾನ್ಯ ಛಲವಾದಿ ನಾರಾಯಣ ಸ್ವಾಮಿಯವರನ್ನು ಆತ್ಮೀಯವಾಗಿ ಅಭಿನಂಧಿಸಿ ಅವರನ್ನು ಆಯ್ಕೆಮಾಡಿದ ಪಕ್ಷದ ವರಿಷ್ಠ ಮಂಡಳಿಗೆ ಕೃತಜ್ಞತೆ ಸಲ್ಲಿಸುವೆ," ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯನಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆ ಸ್ಥಾನವು ತೆರವಾಗಿತ್ತು. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ ಮತ್ತು ರವಿ ಕುಮಾರ್ ಅವರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಆ ಸ್ಥಾನ ಅವರಿಬ್ಬರಿಗೂ ದಕ್ಕದೆ ನಾರಾಯಣಸ್ವಾಮಿ ಅವರ ಪಾಲಾಗಿದೆ.

Read More
Next Story