CET Exam | ಏಪ್ರಿಲ್‌ 16, 17ರಂದು ಸಿಇಟಿ ಪರೀಕ್ಷೆ; ಜ. 23ರಿಂದಲೇ ಅರ್ಜಿ ಸಲ್ಲಿಕೆ ಆರಂಭ
x
ಸಿಇಟಿ ಪರೀಕ್ಷೆ

CET Exam | ಏಪ್ರಿಲ್‌ 16, 17ರಂದು ಸಿಇಟಿ ಪರೀಕ್ಷೆ; ಜ. 23ರಿಂದಲೇ ಅರ್ಜಿ ಸಲ್ಲಿಕೆ ಆರಂಭ

ಸಿಇಟಿ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಯನ್ನು ಪ್ರತಿ ಹಂತದಲ್ಲಿ ಪ್ರಮಾಣಿಕರಿಸಿಯೇ ಮುಂದಿನ ಪ್ರಕ್ರಿಯೆ ನಡೆಸಲು ಅವಕಾಶ ನೀಡಲಿದೆ.


2025ನೇ ಸಾಲಿನ ಎಂಜಿನಿಯರಿಂಗ್, ಪಶುವೈದ್ಯಕೀಯ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್‌ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದೆ.

ಸಿಇಟಿ ಪರೀಕ್ಷೆಗೆ ಜ.23 ರಿಂದ ಫೆ.21 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ), ಪಿಜಿಸಿಇಟಿ ಮತ್ತು ಎಂ.ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. ಪ್ರಸಕ್ತ ವರ್ಷ ನಡೆಯುವ ಎಲ್ಲ ವೃತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ದಿನಾಂಕವನ್ನು ಒಟ್ಟಿಗೆ ಘೋಷಿಸಿದ್ದು ಇದೇ ಮೊದಲು.

ಯಾವ ದಿನ ಯಾವ ಪರೀಕ್ಷೆ?

ಏಪ್ರಿಲ್ 16ರಂದು ಬೆಳಿಗ್ಗೆ 10.30ರಿಂದ ಭೌತವಿಜ್ಞಾನ ಮತ್ತು ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ ಪರೀಕ್ಷೆ ನಡೆಯಲಿದೆ. ಏಪ್ರಿಲ್ 17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಗುರುವಾರ ಪ್ರಕಟಿಸಿದ್ದಾರೆ. ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್ಸಿ (ನರ್ಸಿಂಗ್) ಕೋರ್ಸ್‌ಗಳ ಪ್ರವೇಶಕ್ಕೂ ಇದೇ ಪರೀಕ್ಷೆಯ (ಸಿಇಟಿ)ಅಂಕಗಳನ್ನು ಪರಿಗಣಿಸಲಾಗುತ್ತದೆ.

ಸಿಇಟಿ-2025 ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿ ಆಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡು, ಅರ್ಜಿ ಶುಲ್ಕ ಪಾವತಿಸಬೇಕು. ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಾತಿಗೆ ಇದೇ ಅರ್ಜಿ ಅನ್ವಯವಾಗಲಿದೆ.

ಅರ್ಜಿ ಭರ್ತಿ ಮಾಡುವಾಗ ಇರಲಿ ಎಚ್ಚರ

ಸಿಇಟಿ ಅರ್ಜಿ ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನೆ ವಿಚಾರದಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಗೊಂಡಿದೆ. ಯಾರದ್ದೊ ಅರ್ಜಿಯನ್ನು ಇನ್ಯಾರೊ ಭರ್ತಿ ಮಾಡಲು ಸಾಧ್ಯ ಇರುವುದಿಲ್ಲ. ಪ್ರತಿ ಹಂತದಲ್ಲಿ ಪ್ರಮಾಣಿಕರಿಸಿಯೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಿಂದ ಅಕ್ರಮಗಳಿಗೆ ಬ್ರೇಕ್ ಹಾಕುವುದು ಪ್ರಾಧಿಕಾರದ ಉದ್ದೇಶವಾಗಿದೆ.

ಈ ಬಾರಿಯ ಸಿಇಟಿ ವಿಶೇಷ ಏನು?

  • ಲಾಗಿನ್ ಸಂದರ್ಭದಲ್ಲಿ ಅಭ್ಯರ್ಥಿಗಳು ನಮೂದಿಸುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆಯನ್ನು ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ.
  • ಆನ್‌ಲೈನ್‌ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ / ಜಾತಿ ಆದಾಯ ಪ್ರಮಾಣ ಪತ್ರ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುವುದು.
  • SATS (Students Achievement Tracking System) ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಯ ವ್ಯಾಸಂಗದ ವಿವರಗಳನ್ನು ವೆಬ್‌ ಸರ್ವೀಸ್‌ ಮೂಲಕ ಪಡೆಯಲಾಗುವುದು.
  • ಅಭ್ಯರ್ಥಿಗಳಿಗೆ ಕ್ಲೈಮ್ಸ್ ಸರ್ಟಿಫಿಕೇಟ್ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.
  • Claims Certificate ನಲ್ಲಿ Successfully Verified ಎಂದು ನಮೂದಿಸಿದ್ದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿ / ಕಾಲೇಜಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ನಂತರದ ದಿನಗಳಲ್ಲಿ ಸಿಇಟಿ ಫಲಿತಾಂಶದ ನಂತರ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • Claimed Verified Or claimed not verified or not claimed ಎಂದು claims certificate ನಲ್ಲಿ ನಮೂದಾಗಿದ್ದರೆ ಅಭ್ಯರ್ಥಿಗಳು ದ್ವಿತೀಯ ಪಿಯುಸಿ / 12ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರುವ ಆಯಾ ಕಾಲೇಜಿಗೆ ಭರ್ತಿ ಮಾಡಿದ ಅರ್ಜಿಯನ್ನು ಮತ್ತು ಕ್ಲೇಮ್ಸ್ ಮಾಡಿರುವ ಎಲ್ಲಾ ಮೂಲ ದಾಖಲೆಗಳನ್ನು ಪ್ರಾಂಶುಪಾಲರಿಗೆ ತೋರಿಸಿ ಒಂದು ಸೆಟ್ ಪ್ರತಿಗಳನ್ನು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಸಲ್ಲಿಸುವುದು ಕಡ್ಡಾಯ. ಕಾಲೇಜಿನವರು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಪರಿಶೀಲನೆ ಮಾಡಿದ ನಂತರ ಅಭ್ಯರ್ಥಿಯ ವಿವರಗಳನ್ನು ಅನುಮೋದಿಸುತ್ತಾರೆ.
  • ಪ್ರತಿ ಹಂತದ ಪ್ರಕ್ರಿಯೆ ಕುರಿತು ಅಭ್ಯರ್ಥಿಯ ಮೊಬೈಲ್‌ಗೆ ಸಂದೇಶ ಸ್ವೀಕೃತವಾಗುತ್ತದೆ.
  • ಪ್ರಾಧಿಕಾರವು ರಾಜ್ಯದಲ್ಲಿರುವ ಎಲ್ಲಾ ಪಿಯುಸಿ ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಕಾಲೇಜಿನವರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ಪಡೆದು, ಪರಿಶೀಲನೆ ಮಾಡಲು ತಂತ್ರಾಂಶವನ್ನು ಸಿದ್ದಪಡಿಸಿದೆ.
  • ಅಭ್ಯರ್ಥಿಗಳು ಬಿಇಒ ಕಚೇರಿಗೆ ಪರಿಶೀಲನೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
  • ವಿಶೇಷ ಕ್ಯಾಟಗರಿಗಳಾದ ಎನ್‌ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ, ಸಿಎಪಿಎಫ್, ಮಾಜಿ ಸಿಎಪಿಎಫ್, ಸ್ಕೌಟ್ಸ್ ಅಂಡ್ ಗೈಡ್ಸ್, ಆಂಗ್ಲೋ ಇಂಡಿಯನ್ಸ್ ಕೋಟದ ಅಡಿಯಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೆಇಎ ನಲ್ಲಿ ಖುದ್ದಾಗಿ ಸಲ್ಲಿಸಲು ಪ್ರತ್ಯೇಕವಾಗಿ ಪರೀಕ್ಷೆ ನಂತರ ದಿನಾಂಕಗಳನ್ನು ನೀಡಲಾಗುವುದು.
  • ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್ ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಅಗತ್ಯವಿರುವುದಿಲ್ಲ.

ಐದು ಪರೀಕ್ಷೆಗಳ ದಿನಾಂಕ ಇಂತಿದೆ

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ಸೇರಲು ಡಿಸಿಇಟಿ ಪರೀಕ್ಷೆ ಬರೆಯಬೇಕಾಗುತ್ತದೆ. ಅದಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್ 24ರಿಂದ ಮೇ 10ರವರೆಗೆ ಅವಕಾಶ ನೀಡಲಾಗಿದೆ. ಈ ಪರೀಕ್ಷೆ ಮೇ 31ರಂದು ನಡೆಯಲಿದೆ.

ಪಿಜಿಸಿಇಟಿ (ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್) ಕೋರ್ಸ್‌ಗಳ ಪ್ರವೇಶಕ್ಕೆ ಮೇ 31ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್ 24ರಿಂದ ಮೇ 10ರವರೆಗೆ ಅವಕಾಶ ನೀಡಲಾಗಿದೆ.

ಎಂಸಿಎ ಮತ್ತು ಎಂಬಿಎ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ 22ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಏಪ್ರಿಲ್ 24ರಿಂದ ಜೂನ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಂ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ 22ರಂದು ಪರೀಕ್ಷೆ ನಡೆಸಲಾಗುತ್ತದೆ. ಏಪ್ರಿಲ್ 24ರಿಂದ ಜೂನ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಎಲ್ಲಾ ಪರೀಕ್ಷೆಗಳನ್ನು ನಿಗದಿತ ದಿನಾಂಕಗಳಂದೇ ನಡೆಸಲಾಗುತ್ತದೆ. ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

Read More
Next Story