ದುಬಾರಿ ದುನಿಯಾ | ರಾಜ್ಯದೆಲ್ಲೆಡೆ ಟೊಮೆಟೋ ಬೆಲೆ ಏರಿಕೆ! ಉತ್ತರದಲ್ಲಿ ಸೆಂಚುರಿ ಹೊಡೆದ ದರ!
x

ದುಬಾರಿ ದುನಿಯಾ | ರಾಜ್ಯದೆಲ್ಲೆಡೆ ಟೊಮೆಟೋ ಬೆಲೆ ಏರಿಕೆ! ಉತ್ತರದಲ್ಲಿ ಸೆಂಚುರಿ ಹೊಡೆದ ದರ!


ಮತ್ತೆ ಟೊಮೆಟೋ ಬೆಲೆ ಏರಿಕೆಯಾಗುತ್ತಿದೆ! ಬೆಂಗಳೂರಿನಲ್ಲಿ 75 ರೂ.ಗಳಾದರೆ, ದೂರದ ಬಾಗಲಕೋಟೆಯಲ್ಲಿ ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದೆ. ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಈ ಬಾರಿ ಬೇಸಿಗೆ ಕಾಲದಲ್ಲಿ ಬರಗಾಲದಂತಹ ಪರಿಸ್ಥಿತಿ ಎದುರಾದ ಕಾರಣ ಟೊಮೆಟೊ ಸೇರಿದಂತೆ ಯಾವ ಬೆಳೆಯನ್ನೂ ರೈತರು ಹೆಚ್ಚಾಗಿ ಬೆಳೆಯಲು ಸಾಧ್ಯವಾಗಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಬಿತ್ತನೆ ಮಾಡಿದ್ದು, ಎರಡು ಮೂರು ತಿಂಗಳ ಬಳಿಕ ಬೆಳೆ ಹೇರಳವಾಗಿ ಬೆಳೆಯುತ್ತದೆ. ಆಗ ಮತ್ತೆ ಟೊಮೆಟೊ ದರ ಇಳಿಕೆಯಾಗುತ್ತದೆ. ಸದ್ಯ ರೈತರು ಕಡಿಮೆ ಬೆಳೆ ಬೆಳೆದಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತಿರತ ಕಡೆ ಟೊಮೆಟೋ ಬೆಲೆ 75 ಆಸುಪಾಸಿನಲ್ಲಿದೆ. ಆದರೆ, ಇಲ್ಲಿಂದ ಬೆಳಗಾವಿ, ಹೊಸಪೇಟೆ ಹಾಗೂ ಕೋಲಾರ ಸೇರಿದಂತೆ ಅನೇಕ ಭಾಗಗಳಿಂದ ಬೇರೆ ಭಾಗಗಳಿಗೆ ಸರಬರಾಜಾಗುವ ಟೊಮೊಟೋ ದರ ಶತಕ ದಾಟಿದೆ!

ಬೆಂಗಳೂರಿನಲ್ಲೇ ಕೆ.ಜಿ. ಟೊಮೆಟೋಗೆ 75 ರೂ. ಆಗಿದ್ದರೆ, ದೂರದ ಉತ್ತರ ಕರ್ನಾಟಕದ ಬೀದರ್‌, ಬಾಗಲಕೋಟೆ, ಬಳ್ಳಾರಿ ಮುಂತಾದ ಭಾಗಗಳಲ್ಲಿ ಕೆ.ಜಿ.ಗೆ 100 ರೂ. ದಾಟಿದೆ! ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ ಮತ್ತಿತರ ಕಡೆಗೆ ಈಗ ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆ ಹಾಗೂ ಕೋಲಾರ ಮಾರುಕಟ್ಟೆಯಿಂದ ಪೂರೈಕೆಯಾಗುತ್ತಿದೆ. ಪ್ರತಿ 30 ಕೆ.ಜಿ ಹಣ್ಣಿನ ಬಾಕ್ಸ್‌ಗೆ 1,000ರಿಂದ 1,500 ರೂ. ವರೆಗೂ ಮಾರಾಟವಾಗಿದೆ.

ಪ್ರತಿ ಭಾನುವಾರ ಬಾಗಲಕೋಟೆಯ ನವನಗರದಲ್ಲಿರುವ ಸಂತೆ ಮಾರುಕಟ್ಟೆಗೆ ಸುತ್ತಲಿನ ಹಲವು ಹಳ್ಳಿಗಳಿಂದ ರೈತರು ತರಕಾರಿ ಮಾರಾಟಕ್ಕೆ ಬರುತ್ತಾರೆ. ಕೆಲ ರೈತರು ದಲ್ಲಾಳಿಗಳ ಮೊರೆ ಹೋದರೆ, ಇನ್ನೂ ಕೆಲ ರೈತರು ನೇರವಾಗಿ ಮಾರಾಟ ಮಾಡುತ್ತಾರೆ. ರೈತರ ಬಳಿ ತರಕಾರಿ ದರ ಈವರೆಗೆ ಕಡಿಮೆ ಇತ್ತು. ಇದೀಗ ಅವರೂ ಕೂಡ ಮಾರುಕಟ್ಟೆ ದರದಂತೆ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಮತ್ತೊಂದೆಡೆ ಒಂದು ವಾರದಿಂದ ನಿರಂತರವಾಗಿ ಸುರಿದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ಬಂದ ಬೆಳೆಯೂ ಹಾಳಾಗುತ್ತಿದೆ. ಹಾಗಾಗಿ ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯದ ಕಾರಣ ಬೆಲೆ ಏರಿಕೆಯಾಗಿದೆ.

ಟೊಮೆಟೋ ದರ 100 ರೂ. ಗಡಿ ದಾಟಿದ್ದರೆ, ಹೀರೆಕಾಯಿ ಕೆಜಿಗೆ 120 ರೂ., ಸೌತೆಕಾಯಿ 120 ರೂ., ಚೌಳಿಕಾಯಿ 80 ರೂ., ಬೀನ್ಸ್‌ 160 ರೂ., 6 ನಿಂಬೆ ಹಣ್ಣಿಗೆ 20 ರೂ., 1 ಮೂಲಂಗಿಗೆ 10 ರೂ., ಹೀಗೆ ತರಕಾರಿ ದರ ಹೆಚ್ಚಾಗುತ್ತಲೇ ಇದೆ.

ಗ್ರಾಹಕರ ಗೋಳು

ಒಂದು ಕಡೆ ಟೊಮೆಟೋ ದರ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು, ಅದೇ ಹುಳಿ ಅಂಶವಿರುವ ಹುಣಸೆ ಹಣ್ಣು ಖರೀದಿಯತ್ತ ಮುಖ ಮಾಡಿದ್ದಾರೆ. ಹುಣಸೆ ಹಣ್ಣಿನ ಬೆಲೆ ಕೆಜಿಗೆ 100 ರೂ. ಇದೆ. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗಿದೆ.

ಈ ಬಗ್ಗೆ ʻದ ಫೆಡರಲ್‌ ಕರ್ನಾಟಕ‌ʼದೊಂದಿಗೆ ಮಾತನಾಡಿದ ವಿರೇಶ್ ನಾಲತವಾಡ ಅವರು, ʻʻಟೊಮೊಟೋ ಬೆಲೆ 100 ರೂ. ದಾಟೇದ ರ್ರೀ, ಉಳಿದ ಕಾಯಿಪಲ್ಯ ರೇಟ್ ಸಹಿತ ಹೆಚ್ಚಾಗೇದ, ಪೆಟ್ರೋಲ್‌ ಡಿಸೈಲ್‌ ರೇಟ್‌ ಹೆಚ್ಚಾಗೇದಲ್ರೀ ಈ ವಾರದಿಂದ ಎಲ್ಲಾ ರೇಟ್‌ನೂ ಇನ್ನೂ ಜಾಸ್ತಿ ಆಗಬಹುದು. ಈ ಬೆಲೆ ಏರಿಕೆ ನಡುವ ಸಂಸಾರ ನಡೆಸೋದೇ ಕಷ್ಟ ಆಗೈತಿ ರ್ರೀʼʼ ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ರೀತಿ ತರಕಾರಿ ವ್ಯಾಪಾರಿ ಹಾಗೂ ರೈತ ಮಹಿಳೆ ಸಂಗವ್ವ ತಳವಾರ ಅವರು ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʻʻನಾವು ರೈತರು ರ್ರೀ ಉತ್ಪನ್ನನ ಇಲ್ಲ ರ್ರೀ, ಹಂಗಾಗಿ ನಾವು ಇಲ್ಲಿ ಎಪಿಎಂಸಿ ಮಾರ್ಕೇಟ್‌ದಾಗ ಸವಾಲ್‌ನಲ್ಲಿ ಖರೀದಿ ಮಾಡಿ ಮಾರಾಟ ಮಾಡ್ತೀವಿ. ನಮಗ ಟೊಮೊಟೋ ಕೆಜಿಗೆ 80-90 ರೂ. ಬೀಳತ್ತ ರ್ರೀ ನಾವು 100 ರೂ.ಗೆ ಮಾರತೀವಿʼʼ ಎಂದರು.

ʻʻಟೊಮೊಟೋ ಬೆಳೆದ ಕೆಲವು ರೈತರಿಗೆ ಈಗ ಲಾಭ ಇದೆ. ಆದ್ರ ಇದೇ ರೇಟ್‌ ಮುಂದಿನ ಎರಡು ತಿಂಗಳು ಇರಲ್ಲ ರ್ರೀ ಅವಾಗ ಎಲ್ಲಾ ರೈತರದು ಉತ್ಪನ್ನ ಬಂದಿರತ್ತ ಅವಾಗ ರೇಟ್‌ ಬರಲ್ಲ ರಸ್ತೆಗೆ ಸುರದ ಹೋಗುವ ಪರಿಸ್ಥಿತಿ ಬರತ್ತ. ಈಗ ಯಾವೆಲ್ಲಾ ರೈತರು ಬೆಳದಿದ್ದಾರೋ ಅವರಿಗೆ ಲಾಭ ಆಗೇದ ರ್ರೀʼʼ ಎಂದು ತಿಳಿಸಿದರು.

Read More
Next Story