ಕೇಂದ್ರ ಮೂರು ಹೊಸ ಕಾನೂನಿಗೆ ರಾಜ್ಯ ಸರ್ಕಾರ ವಿರೋಧ
x

ಕೇಂದ್ರ ಮೂರು ಹೊಸ ಕಾನೂನಿಗೆ ರಾಜ್ಯ ಸರ್ಕಾರ ವಿರೋಧ


ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ 3 ಕಾನೂನುಗಳನ್ನು ಮೊದಲ ದಿನವೇ ರಾಜ್ಯ ಸರ್ಕಾರ ವಿರೋಧಿಸಿದೆ. ಆ ಕಾನೂನುಗಳನ್ನು ತಿದ್ದುಪಡಿಗೆ ಒಳಪಡಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಬದಲಾವಣೆ ಮಾಡಲಾಗಿದೆ. ಮೂರು ಕಾನೂನು‌ ಬದಲಾವಣೆ ಮಾಡಿ ಹೊಸ ಕಾನೂನು ಜಾರಿಗೆ ತರಲಾಗಿದೆ. ಯಾವ ಸರ್ಕಾರ ಕಾನೂನು ಮಾಡುತ್ತದೆ, ಅದನ್ನು ಅವರ ಅವಧಿಯಲ್ಲಿ ಜಾರಿ ಮಾಡುವ ನೈತಿಕ ಹಕ್ಕಿದೆ. ಆದರೆ, ಸರ್ಕಾರದ ಅವಧಿ ಮುಗಿದ ಮೇಲೆ ಜಾರಿ ಮಾಡುವುದು ಅನೈತಿಕ ಹಾಗೂ ರಾಜಕೀಯ ಅಸಂಬದ್ಧ ಕ್ರಮʼʼ ಎಂದರು.

ʻʻಈ ಮೂರು ತಾಯಿ ಕಾನೂನುಗಳು, ಸಂವಿಧಾನದ ತಿದ್ದುಪಡಿ ಮಹತ್ವ ಇದಕ್ಕೆ ಕೊಡಲಾಗುತ್ತದೆ. ಈ ಕಾನೂನು ಜಾರಿಯ ಸಂದರ್ಭದಲ್ಲಿ ಎಲ್ಲಾ ಎಚ್ಚರಿಕೆ ಕೈಗೊಳ್ಳಬೇಕು. ಹಿಂದಿನ ಸರ್ಕಾರದ ಕ್ಯಾಬಿನೆಟ್ ನಲ್ಲಿ ಆದ ನಿರ್ಧಾರ ಇದೀಗ ಜಾರಿಗೊಳಿಸಿದ್ದು ಸರಿಯಲ್ಲ. 2023 ರಲ್ಲಿ ಅಮಿತ್ ಶಾ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮೂರು ಕಾನೂನುಗಳು ಮಸೂದೆ ಹಂತದಲ್ಲಿ ಇರುವಾಗ ಪರಿಶೀಲನೆ, ಸಲಹೆ ಸೂಚನೆ ಕೇಳಿದ್ದರು. ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡಲು ಈ ಸಂದರ್ಭದಲ್ಲಿ ನನಗೆ ಸಿಎಂ ಸೂಚಿಸಿದ್ದರು. ಇದಕ್ಕೆ ಉತ್ತರವಾಗಿ ತಜ್ಞರ ಸಮಿತಿ ವರದಿ ಹಾಗೂ ನನ್ನ ಅಭಿಪ್ರಾಯ ತಿಳಿಸಿ ಸಿಎಂಗೆ ಪತ್ರ ಕಳಿಸಿದ್ದೆ.‌ ಇದನ್ನು ಉಲ್ಲೇಖಿಸಿ ಅಮಿತ್ ಶಾಗೆ ಸಿದ್ದರಾಮಯ್ಯ ಪತ್ರ ಬರೆದು, ವರದಿಯನ್ನು ನೀಡಿದ್ದರುʼʼ ಎಂದು ವಿವರಣೆ ‌ನೀಡಿದರು.

ʻʻಆ ಪತ್ರದಲ್ಲಿ ಒಟ್ಟು 23 ಸಲಹೆಗಳನ್ನು ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಂಡನೆ ಮಾಡಿದ ಮಸೂದೆಯನ್ಮು ಯಥಾವತ್ತಾಗಿ ಕಾನೂನು ಮಾಡಿದ್ದಾರೆ. ಆದರೆ, ಹೊಸ ಕಾನೂನಿನಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳೇ ಅಧಿಕ. ಗೊಂದಲ ಮೂಡಿಸುವ ತಿದ್ದುಪಡಿಗಳು ಇವಾಗಿವೆ. ಜನಾಭಿಪ್ರಾಯ ನಿರ್ಲಕ್ಷ್ಯ ಮಾಡಿ, ವಕೀಲರ ಅಭಿಪ್ರಾಯ ನಿರ್ಲಕ್ಷ್ಯ ಮಾಡಿ ಕಾನೂನು ಮಾಡಿದ್ದಾರೆ. ಹಾಗಾಗಿ ನಾವು ಈ ಕಾನೂನುಗಳನ್ನು ವಿರೋಧ ಮಾಡುತ್ತೇವೆʼʼ ಎಂದು ತಿಳಿಸಿದರು.

ʻʻರಾಜ್ಯದಲ್ಲಿ ಈ ಮೂರು ಕಾನೂನಿಗೆ ನಾವು ಅಗತ್ಯ ತಿದ್ದುಪಡಿ ಮಾಡಿ ಸರ್ಕಾರ ಚಿಂತನೆ ನಡೆಸಿದೆ. ಇದನ್ನು ವಿರೋಧ ಮಾಡ್ತೀವಿ, ಹಾಗೂ ತಿದ್ದುಪಡಿ ತರುತ್ತೇವೆ. ಕಾನೂನುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಸಂವಿಧಾನ ಅನುಚ್ಛೇದ 7, 3 ನೇ ಪಟ್ಟಿಯ ಅಧಿಕಾರ ಬಳಸಿ ತಿದ್ದುಪಡಿ ಮಾಡಲು ಅವಕಾಶ ಇದೆʼʼ ಎಂದರು.

ಯಾವುದಕ್ಕೆಲ್ಲ ತಿದ್ದುಪಡಿ?

  • ಸರ್ಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಈ ಕಾನೂನಿನ ಅಪರಾಧವಾಗಿದೆ. ಆದರೆ ಆತ್ಮಹತ್ಯೆ ಮಾಡುವುದು ಅಪರಾಧ ಅಲ್ಲ ಈ ಕಾನೂನಿನಲ್ಲಿ.ಇದು ದುರ್ದೈವದ ಸಂಗತಿಯಾಗಿದೆ. ಇದು ಸ್ವಾತಂತ್ರ್ಯ ಹೋರಾಟಕ್ಕೆ, ಹೋರಾಟಗಾರರನ್ನು ತಿರಸ್ಕಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಅಪಾರಾಧ ಎಂಬುವುದಕ್ಕೆ ತಿದ್ದುಪಡಿ.
  • ರಾಷ್ಟ್ರ ಪಿತ, ರಾಷ್ಟ್ರೀಯ ಲಾಂಚನ, ಬಾವುಟಕ್ಕೆ ಅಗೌರವ ತೋರಿಸಿದವದ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಾಡಲು ಸೂಚಿಸಿದ್ದೆವು. ಆದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿಗೆ ಸರ್ಕಾರ ಚಿಂತನೆ.
  • ಸಂಘಟಿತ ಅಪರಾಧ ಎಂದು ಆರೋಪಿಸಿ, ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷೀಯ ಮತ್ತು ವಿವೇಚನಾಧಿಕಾರಗಳು ಹೊಸ ಕಾನೂನಿನಲ್ಲಿ ಅವಕಾಶ ಇದೆ. ಇದಕ್ಕೆ ತಿದ್ದುಪಡಿ.
  • ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ 3 ವರ್ಷ ಜೈಲು ಹಾಗೂ ದಂಡಕ್ಕೆ ಅವಕಾಶ ಇದೆ. ಇದಕ್ಕೆ ತಿದ್ದುಪಡಿ.
  • ಸೈಬರ್ ಅಪರಾಧ, ಹ್ಯಾಕಿಂಗ್, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ.
  • ಮೃತ ದೇಹದ ಮೇಲೆ ಅತ್ಯಾಚಾರ ಅಪರಾಧಿಕರಣಗೊಳಿಸುವ ನಿಟ್ಟಿನಲ್ಲಿ ತಿದ್ದುಪಡಿ.
  • ಹೊಸ ಕಾಯ್ದೆ ಅಡಿಯಲ್ಲಿ ಪೊಲೀಸ್ ಕಸ್ಟಡಿ ಅವಧಿಯಲ್ಲಿ 90 ದಿನಗಳವರೆಗೆ ಅವಕಾಶ ಇದೆ. ಇದನ್ನು ಕಡತಗೊಳಿಸಲು ತಿದ್ದುಪಡಿ.
  • ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ ಪಾಸ್ತಿ ಜಪ್ತಿ ಮಾಡಲು ಪೊಲೀಸರಿಗೆ ನೀಡಿರುವ ಅಧಿಕಾರಕ್ಕೆ ತಿದ್ದುಪಡಿ.

ಹೊಸ ಕಾನೂನು ಜಾರಿ ಮಾಡುತ್ತೇವೆ ಎಂಬ ಪೊಲೀಸ್ ಕಮಿಷನರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಚ್ ಕೆ ಪಾಟೀಲ್, ʻʻಸದ್ಯ ಈಗ ಹೊಸ ಕಾನೂನಿನ ಪ್ರಕಾರ ಎಫ್ ಐ ಆರ್ ಆಗುತ್ತಿವೆ. ತಿದ್ದುಪಡಿ ಆದ ಬಳಿಕ ಅದರಂತೆ ಪಾಲಿಸಬೇಕಾಗುತ್ತದೆʼʼ ಎಂದು ಸಚಿವರು ತಿಳಿಸಿದ್ದಾರೆ.

Read More
Next Story