ಕೇಂದ್ರ ಸರ್ಕಾರದ ʼರಿಪೋರ್ಟ್‌ ಕಾರ್ಡ್‌ʼ ಬಿಡುಗಡೆ ಮಾಡಿದ ಬಹುತ್ವ ಕರ್ನಾಟಕ
x

ಕೇಂದ್ರ ಸರ್ಕಾರದ ʼರಿಪೋರ್ಟ್‌ ಕಾರ್ಡ್‌ʼ ಬಿಡುಗಡೆ ಮಾಡಿದ ಬಹುತ್ವ ಕರ್ನಾಟಕ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿಪಾದನೆಗಳು ಮತ್ತು ವಾಸ್ತವ ಸ್ಥಿತಿಯನ್ನು ವಿಶ್ಲೇಷಿಸಿರುವ ಬಹುತ್ವ ಕರ್ನಾಟಕ ತಂಡವು ಅದರ ಆಧಾರದಲ್ಲಿ ವರದಿಯನ್ನು ಬಿಡುಗಡೆಗೊಳಿಸಿದೆ.


ಬೆಂಗಳೂರು: ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ʼಬಹುತ್ವ ಕರ್ನಾಟಕʼ ತಂಡವು, ಒಕ್ಕೂಟ (ಕೇಂದ್ರ) ಸರ್ಕಾರದ ರಿಪೋರ್ಟ್‌ ಕಾರ್ಡ್‌ ಅನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದ ಪ್ರತಿಪಾದನೆಗಳು ಮತ್ತು ಸದ್ಯದ ವಾಸ್ತವವನ್ನು ಮುಂದಿಟ್ಟಿದೆ.

ವರದಿಯಲ್ಲಿ ಪ್ರಸ್ತುತಪಡಿಸಲಾದ ಎಲ್ಲಾ ಡೇಟಾ ಮತ್ತು ವಿಶ್ಲೇಷಣೆಯು ಸರ್ಕಾರದ ಅಂಕಿಅಂಶ ಮತ್ತು ಸಾರ್ವಜನಿಕವಾಗಿ ಲಭ್ಯ ಇರುವ ದತ್ತಾಂಶಗಳನ್ನು ಆಧರಿಸಿದೆ. ಈ ವಿಶ್ಲೇಷಣೆಯು 2022-23ನೇ ಸಾಲಿನಲ್ಲಿ ದೇಶದ 49 ಕೋಟಿ ಕಾರ್ಮಿಕರ ಸ್ಥಿತಿಗತಿ ಪ್ರತಿನಿಧಿಸುತ್ತದೆ ಎಂದು ವರದಿ ಬಿಡುಗಡೆ ಮಾಡಿರುವ ಬಹುತ್ವ ಕರ್ನಾಟಕ ಹೇಳಿದೆ.

ಉದ್ಯೋಗ

ʼನಮ್ಮನ್ನು ಆಯ್ಕೆ ಮಾಡಿದರೆ ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ, ಮತ್ತು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಕೈಗಾರಿಕೆಗಳು ಮತ್ತು ಕಾರ್ಪೊರೇಟ್‌ಗಳನ್ನು ಪ್ರೋತ್ಸಾಹಿಸುತ್ತೇವೆʼ ಎಂದು ಬಿಜೆಪಿ ಹೇಳಿಕೊಂಡಿತ್ತು. ವಾಸ್ತವದಲ್ಲಿ 25 ವರ್ಷದೊಳಗಿನ ಶೇ.47ಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಬಹುತ್ವ ಕರ್ನಾಟಕ ಬಿಡುಗಡೆ ಮಾಡಿರುವ ವರದಿ ಹೇಳಿದೆ.

2011-12 ಹಾಗೂ 2022-23 ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಸ್ವಉದ್ಯೋಗಿಗಳ (Self-Employed) ಪ್ರಮಾಣ ಹೆಚ್ಚಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಪುರುಷರು ಮತ್ತು ಮೂರರಲ್ಲಿ ಎರಡು ಭಾಗಕ್ಕಿಂತ ಹೆಚ್ಚು ಮಹಿಳೆಯರು ಈಗ ‘ಸ್ವ-ಉದ್ಯೋಗಿಗಳುʼ ಆಗಿದ್ದಾರೆ. ಇದರಲ್ಲಿ ಗ್ರಾಮೀಣ ನೇಕಾರರು, ಕೃಷಿಕಾರರು, ಕುಂಬಾರರು, ನಗರಗಳ ಬೀದಿ ಬದಿ ವ್ಯಾಪಾರಿಗಳು, ದರ್ಜಿಗಳು, ಕ್ಷೌರಿಕರು ಮೊದಲಾದವರು ಸೇರಿದ್ದಾರೆ.

ಜೊತೆಗೆ ಗೃಹಾಧಾರಿತ ಸಣ್ಣ ಉದ್ಯಮಗಳಲ್ಲಿ ತೊಡಗಿರುವ ವೇತನರಹಿತ ಕೆಲಸಗಾರರೂ ಇದೇ ವರ್ಗಕ್ಕೆ ಬರುತ್ತಾರೆ. ಐದು ವರ್ಷಗಳ ಹಿಂದೆ ಪ್ರತಿ ನಾಲ್ವರು ಮಹಿಳೆಯರಲ್ಲಿ ಓರ್ವ ಮಹಿಳೆ ಆದಾಯ ಇಲ್ಲದೆ ಕುಟುಂಬದ ಕೆಲಸದಲ್ಲೇ ಸಹಾಯಕರಾಗಿ ತೊಡಗಿಸಿಕೊಂಡಿದ್ದರೆ, ಈಗ ಆ ಪ್ರಮಾಣ ಪ್ರತಿ ಮೂವರು ಮಹಿಳೆಯರಲ್ಲಿ ಓರ್ವ ಮಹಿಳೆಗೆ ಇಳಿದಿದೆ. ಹಸಿವು ಮತ್ತು ಸಾವಿನ ಭಯದಿಂದ ಸ್ವಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯು ಹೇಳಿದೆ.




ವೇತನ

ಬಿಜೆಪಿಯು 2019ರ ಪ್ರಣಾಳಿಕೆಯಲ್ಲಿ “ನಮ್ಮ ಸರ್ಕಾರದ ಅಡಿಯಲ್ಲಿ, ರಾಷ್ಟ್ರೀಯ ಕನಿಷ್ಠ ವೇತನದಲ್ಲಿ 42% ಬೆಳವಣಿಗೆ ಕಂಡುಬಂದಿದೆ. ಕಾರ್ಮಿಕರ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾವು ಮುಂದಿನ ಐದು ವರ್ಷಗಳಲ್ಲಿ ಅದೇ ದಾರಿಯಲ್ಲಿ ಸಾಗುತ್ತೇವೆ” ಎಂದು ಹೇಳಿತ್ತು. ವಾಸ್ತವದಲ್ಲಿ, ಹಣದುಬ್ಬರವನ್ನು ನೋಡಿದರೆ ಸರ್ಕಾರ ಹೇಳಿದ್ದಷ್ಟು ಪ್ರಮಾಣದಲ್ಲಿ ಕನಿಷ್ಠ ವೇತನದಲ್ಲಿ ಬೆಳವಣಿಗೆ ಕಂಡಿಲ್ಲ ಎಂದು ವರದಿಯು ಹೇಳಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ಹಾಗು ಉದ್ಯೋಗ ಸಚಿವಾಲಯವು ನೇಮಿಸಿದ ಅನೂಪ್ ಸತ್ಪತಿ ಅವರ ನೇತೃತ್ವದ 2019ರ ಕೂಲಿ/ವೇತನ ಕುರಿತ ತಜ್ಞರ ಸಮಿತಿಯು ಭಾರತದಲ್ಲಿ ಮೂಲ ವೇತನವು ದಿನಕ್ಕೆ ಕನಿಷ್ಠ 375 ರೂಪಾಯಿ ಇರಬೇಕೆಂದು ಸೂಚಿಸಿತ್ತು. ಆದರೆ ಈಗಲೂ ಕೂಡಾ ರಾಷ್ಟ್ರೀಯ ಕನಿಷ್ಠ ಮೂಲ ವೇತನವು ರೂ. 178 ಆಗಿಯೇ ಉಳಿದಿದೆ. ಸುಮಾರು 30 ಕೋಟಿ ಜನರು ಮೂಲ ವೇತನಕ್ಕಿಂತಲೂ ಕಡಿಮೆ (ದಿವಸಕ್ಕೆ 375 ರೂ.ಗೂ ಕಡಿಮೆ) ಗಳಿಸುತ್ತಿದ್ದಾರೆ. 10 ರಲ್ಲಿ 9 ಜನ ದಿನಗೂಲಿ ಕೆಲಸಗಾರರು, 5 ರಲ್ಲಿ 3 ಜನ ಸ್ವಉದ್ಯೋಗಿಗಳು, ಸುಮಾರು ಅರ್ಧದಷ್ಟು ನಿಗದಿತ ವೇತನ ಗಳಿಸುವ ನೌಕರರು ಮೂಲ ವೇತನಕ್ಕಿಂತಲೂ ಕಡಿಮೆ (ದಿವಸಕ್ಕೆ 375 ರೂ.ಗೂ ಕಡಿಮೆ ) ಗಳಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಸರ್ವರಿಗೂ ಅಭಿವೃದ್ಧಿ

ಸರ್ಕಾರವು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಘೋಷಿಸಿದೆಯಾದರೂ, ಕಳೆದ 10 ವರ್ಷಗಳಲ್ಲಿ ತಲಾವಾರು GDP 60% ರಷ್ಟು ಹೆಚ್ಚಾಗಿದೆ. ಆದರೆ ಅದರಿಂದ ಶ್ರೀಮಂತರು ಉದ್ದಾರ ಆಗುತ್ತಿದ್ದಾರೆಯೇ ಹೊರತು ಬಡವರಲ್ಲ ಎಂದು ವರದಿ ಬೊಟ್ಟು ಮಾಡಿದೆ.

2012ರಲ್ಲಿ ಅತಿ ಶ್ರೀಮಂತರು ಅಂದರೆ ದೇಶದ ಶೇ.10%ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ. 63% ಭಾಗವನ್ನು ಹೊಂದಿದ್ದರು. 2022ರಲ್ಲಿ ಈ ಪ್ರಮಾಣ ಶೇ.64.5%ಕೆ ಏರಿದೆ. 2012ರಲ್ಲಿ ಸಾಮಾನ್ಯವರ್ಗಕ್ಕೆ ಸೇರಿದ ಶೇ.50%ಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.6.1% ಭಾಗ ಹೊಂದಿದ್ದರು. 2022ರಲ್ಲಿ ಈ ಪ್ರಮಾಣ ಶೇ.5.6% ಗೆ ಇಳಿದಿದೆ ಎಂದು ವರದಿ ಹೇಳಿದೆ.

ಪ್ರಜೆಗಳ ಅಭಿವೃದ್ಧಿಗೆ ಸರ್ಕಾರವು ವಿರುದ್ಧವಾಗಿ ಹೋಗುತ್ತಿದ್ದು, ವೇತನಗಳು ಸ್ಥಗಿತಗೊಂಡ ಸಮಯದಲ್ಲಿ ಸರ್ಕಾರವು, ಎಲ್ಲರಿಗೂ ಆಹಾರದ, ಉದ್ಯೋಗ, ಜೀವನ ವೇತನ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಯ, ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳ, ಉಚಿತ ಮತ್ತು ಗುಣಮಟ್ಟದ ಶಿಕ್ಷಣದ ಮತ್ತು ನಿವೃತ್ತಿ ವೇತನದ ಹಕ್ಕುಗಳನ್ನು ಖಾತರಿಪಡಿಸಲು ಕ್ರಮ ವಹಿಸಬೇಕಿತ್ತು ಎಂದು ಬಹುತ್ವ ಕರ್ನಾಟಕವು ಹೇಳಿದೆ.

Read More
Next Story