ʼದ ರಿಪೋರ್ಟರ್ಸ್‌ ಕಲೆಕ್ಟೀವ್‌ʼ, ʼದ ಫೈಲ್‌ʼಗೆ ನೀಡಿದ್ದ ತೆರಿಗೆ ವಿನಾಯ್ತಿ ಹಿಂಪಡೆದ  ಇಲಾಖೆ
x
ಮಾಧ್ಯಮ ಸಿಬ್ಬಂದಿ(ಸಾಂದರ್ಭಿಕ ಚಿತ್ರ)

ʼದ ರಿಪೋರ್ಟರ್ಸ್‌ ಕಲೆಕ್ಟೀವ್‌ʼ, ʼದ ಫೈಲ್‌ʼಗೆ ನೀಡಿದ್ದ ತೆರಿಗೆ ವಿನಾಯ್ತಿ ಹಿಂಪಡೆದ ಇಲಾಖೆ

ʼದ ರಿಪೋರ್ಟರ್ಸ್‌ ಕಲೆಕ್ಟಿವ್ʼ ಹಾಗೂ ʼದ ಫೈಲ್‌ʼ ಸಂಸ್ಥೆಗಳು ಮನರಂಜನೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಒತ್ತು ನೀಡಿವೆ. ಹಾಗಾಗಿ ಅವುಗಳಿಗೆ ನೀಡಿರುವ ತೆರಿಗೆ ವಿನಾಯಿತಿ ಹಾಗೂ ಲಾಭರಹಿತ ಸ್ಥಾನಮಾನ(ನಾನ್‌ ಪ್ರಾಫಿಟ್‌ ಸ್ಟೇಟಸ್‌) ಹಿಂಪಡೆದಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.


ನವದೆಹಲಿಯ ʼದ ರಿಪೋರ್ಟರ್ಸ್ ಕಲೆಕ್ಟಿವ್‌ʼ ಹಾಗೂ ಬೆಂಗಳೂರಿನ ಕನ್ನಡ ವೆಬ್‌ಸೈಟ್‌ ʼದ ಫೈಲ್ʼ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಿದೆ. ಸ್ವತಂತ್ರ ಪತ್ರಿಕೋದ್ಯಮದ ಈ ಡಿಜಿಟಲ್‌ ಮಾಧ್ಯಮಗಳಿಗೆ ನೀಡಿದ್ದʼಲಾಭರಹಿತ ಸ್ಥಾನಮಾನʼ ಹಾಗೂ ʼತೆರಿಗೆ ವಿನಾಯಿತಿʼ ಹಿಂಪಡೆದಿದೆ.

ʼದ ರಿಪೋರ್ಟರ್ಸ್‌ ಕಲೆಕ್ಟೀವ್‌ʼ ಹಾಗೂ ʼದ ಫೈಲ್‌ʼ ಸಂಸ್ಥೆಗಳು ಮನರಂಜನೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಒತ್ತು ನೀಡಿವೆ. ಹಾಗಾಗಿ ಅವುಗಳಿಗೆ ನೀಡಿರುವ ತೆರಿಗೆ ವಿನಾಯಿತಿ ಹಾಗೂ ಲಾಭರಹಿತ ಸ್ಥಾನಮಾನ(ನಾನ್‌ ಪ್ರಾಫಿಟ್‌ ಸ್ಟೇಟಸ್‌) ಹಿಂಪಡೆದಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ಇಲಾಖೆಯ ಈ ಆದೇಶದ ಪರಿಣಾಮ ಡಿಜಿಟಲ್‌ ಮಾಧ್ಯಮ ಸಂಸ್ಥೆಗಳು ತೆರಿಗೆ ಪಾವತಿಸಬೇಕಾಗಿದೆ. ಜೊತೆಗೆ ಈ ಮಾಧ್ಯಮ ಸಂಸ್ಥೆಗಳಿಗೆ ಬರುವ ದೇಣಿಗೆಯೂ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ.

ʼದ ಫೈಲ್‌ʼ ಮೇಲೆ ಕ್ರಮವೇಕೆ?

2020 ರಿಂದ ಕನ್ನಡದ ಡಿಜಿಟಲ್‌ ಮಾಧ್ಯಮ ʼದ ಫೈಲ್‌ʼ ಆಯಾ ಸರ್ಕಾರದ ನೀತಿ ನಿರೂಪಣೆಯಲ್ಲಿನ ಲೋಪ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಕುರಿತು ದಾಖಲೆಗಳನ್ನು ಆಧರಿಸಿ ತನಿಖಾ ವರದಿ ಪ್ರಕಟಿಸುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವ ನಾಗೇಶ್‌ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ಇದರಿಂದ ನಾಗೇಶ್‌ ರಾಜೀನಾಮೆ ನೀಡಿದ್ದರು. ಇಲ್ಲದೇ ಗೋಮಾಳ ಜಮೀನು ಕಬಳಿಸುತ್ತಿರುವ ರಾಷ್ಟ್ರೋತ್ತಾನ ಪರಿಷತ್‌ ಕುರಿತಂತೆಯೂ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಕಾಂಗ್ರೆಸ್‌ ಅವಧಿಯ ಭ್ರಷ್ಟಾಚಾರ, ಆಡಳಿತದ ಲೋಪಗಳನ್ನು ದಾಖಲೆಗಳ ಸಮೇತ ವರದಿ ಪ್ರಕಟಿಸಿತ್ತು.

ʼಪಾರದರ್ಶಕ ಮೀಡಿಯಾ ಫೌಂಡೇಷನ್‌ʼ ಅಡಿಯಲ್ಲಿ ದೇಣಿಗೆಯಿಂದಲೇ ʼದ ಫೈಲ್‌ʼ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಫೌಂಡೇಷನ್‌ ಆದಾಯ ತೆರಿಗೆ ಇಲಾಖೆಯಿಂದ 12ಎ ಹಾಗೂ 80ಜಿ ಅನ್ವಯ ತೆರಿಗೆ ವಿನಾಯ್ತಿ ಪಡೆದಿತ್ತು.

ʼದ ಫೈಲ್‌ʼ ಕುರಿತು ಐಟಿ ಆಕ್ಷೇಪ ಏನು?

ʼಪಾರದರ್ಶಕ ಮೀಡಿಯಾ ಫೌಂಡೇಷನ್‌ʼ ಅಡಿ ಕಾರ್ಯನಿರ್ವಹಿಸುತ್ತಿರುವ ʼದ ಫೈಲ್‌ʼ ವೆಬ್‌ಸೈಟ್‌ ಸಾರ್ವಜನಿಕ ಹಿತಾಸಕ್ತಿಯ ವರದಿ ಹೊರತಾಗಿಯೂ ಮನರಂಜನೆ, ವಾಣಿಜ್ಯ ಚಟುವಟಿಕೆಗಳಿಗೆ ಒತ್ತು ನೀಡಿದೆ. ಹಾಗಾಗಿ ಫೌಂಡೇಷನ್‌ ಚಾರಿಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ತೆರಿಗೆ ವಿನಾಯ್ತಿ ರದ್ದುಪಡಿಸಿರುವುದಕ್ಕೆ ಹಲವು ಕಾರಣಗಳನ್ನು ಮುಂದಿಟ್ಟಿದೆ.

ʼದ ಫೈಲ್‌ʼ ವೆಬ್‌ಸೈಟ್‌ ನ್ಯೂಸ್‌ ಏಜೆನ್ಸಿ ಸೇವೆ ಒದಗಿಸುತ್ತಿದೆ. ಗ್ರಂಥಾಲಯ ಸೇವೆ ಹಾಗೂ ಮನರಂಜನೆ ಆಧರಿತ ಮಾಧ್ಯಮವಾಗಿದೆ. ವ್ಯವಹಾರ ಆಧರಿತವಾದ ವೆಬ್‌ಸೈಟ್‌ಗಳಿಗೆ ಪ್ರಚಾರ ನೀಡುತ್ತಿರುವ ಕಾರಣಗಳಿಂದ ಫೌಂಡೇಷನ್‌ ನಾನ್‌ ಚಾರಿಟಿ ವ್ಯಾಪ್ತಿಗೆ ಬರಲಿದೆ. ಹಾಗಾಗಿ ತೆರಿಗೆ ವಿನಾಯ್ತಿ ಹಿಂಪಡೆಯಲಾಗಿದೆ ಎಂಬುದು ಆದಾಯ ಇಲಾಖೆ ನೀಡಿರುವ ಕಾರಣ. ಆದರೆ, ಇದಕ್ಕೆ ಆಕ್ಷೇಪಣೆ ಸಲ್ಲಿಸಿರುವ ʼದ ಫೈಲ್‌ʼ ವೆಬ್‌ಸೈಟ್‌ ಸಂಪಾದಕ ಜಿ.ಮಹಾಂತೇಶ್‌ ಅವರು ʼದ ಫೈಲ್‌ʼ ವೆಬ್‌ಸೈಟ್‌ ಸಂಪೂರ್ಣ ತನಿಖಾ ಪತ್ರಿಕೋದ್ಯಮಕ್ಕೆ ಮೀಸಲಾಗಿದೆ. ಆಯಾ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ನೀತಿ ನಿರೂಪಣೆಗಳಲ್ಲಿ ಲೋಪಗಳನ್ನು ದಾಖಲೆಗಳ ಸಮೇತ ವರದಿ ಮಾಡುತ್ತಿದೆ. ಯಾವುದೇ ಜಾಹೀರಾತನ್ನು ಬಳಸುತ್ತಿಲ್ಲ. ಸರ್ಕಾರದಿಂದ ಯಾವುದೇ ಸಹಾಯಧನವನ್ನೂ ಪಡೆದಿಲ್ಲ. ಹೀಗಿರುವಾಗ ಆದಾಯ ತೆರಿಗೆ ಇಲಾಖೆ ನೀಡಿರುವ ಕಾರಣಗಳು ಆಶ್ಚರ್ಯ ತರಿಸಿದೆ. ಈ ಬಗ್ಗೆ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಗೆ ದಿನ ನಿಗದಿ ಮಾಡಿಲ್ಲ ಎಂದು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೇಂದ್ರದ ವಿರುದ್ಧ ಆಕ್ರೋಶ

ಸ್ವತಂತ್ರ ಪತ್ರಿಕೋದ್ಯಮದ ಮೇಲಿನ ನಿಯಂತ್ರಣ ಕ್ರಮಗಳನ್ನು ಮೇಲೆ ಕೇಂದ್ರ ಸರ್ಕಾರ ಗುರಾಣಿಯಂತೆ ಬಳಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಪತ್ರಕರ್ತರ ಹಿತರಕ್ಷಣಾ ಸಮಿತಿಯು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

"ಪತ್ರಿಕೋದ್ಯಮವು ಸಾರ್ವಜನಿಕ ಸೇವಾ ಕ್ಷೇತ್ರ. ಅನಗತ್ಯ ನಿಯಂತ್ರಣ ಹೆಸರಿನಲ್ಲಿ ತನಿಖಾ ಪತ್ರಿಕೋದ್ಯಮವನ್ನು ಗುರಿಯಾಗಿಸಿದ ಕ್ರಮ ಸರಿಯಲ್ಲ. ʼದಿ ರಿಪೋರ್ಟರ್ಸ್ ಕಲೆಕ್ಟಿವ್ ಮತ್ತು ದಿ ಫೈಲ್ʼ ವಿರುದ್ಧ ಕೈಗೊಂಡಿರುವ ಕ್ರಮದ ಆದೇಶವನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಲಾಭರಹಿತವಾದ ಮಾಧ್ಯಮ ಕ್ಷೇತ್ರ ಅಪಾಯ ಎದುರಿಸಲಿದೆ. ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮ ದುರ್ಬಲಗೊಳ್ಳಲಿದೆ" ಎಂದು ಪತ್ರಕರ್ತರ ಹಿತರಕ್ಷಣಾ ಸಮಿತಿಯ (ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್) ಏಷ್ಯಾ ಸಂಯೋಜಕ ಬೆಹ್ ಲಿಹ್ ಯಿ ಅಭಿಪ್ರಾಯಪಟ್ಟಿದ್ದಾರೆ.

"ಮಾಧ್ಯಮ ಸಂಸ್ಥೆಗಳ ಮೇಲಿನ ಲಾಭರಹಿತ ಸ್ಥಾನಮಾನ ಹಾಗೂ ತೆರಿಗೆ ವಿನಾಯ್ತಿ ಹಿಂಪಡೆದಿರುವ ಕ್ರಮವು ಪತ್ರಕರ್ತರ ಕಾರ್ಯ ಕ್ಷಮತೆಯನ್ನೂ ದುರ್ಬಲಗೊಳಿಸಲಿದೆ. ಸ್ವತಂತ್ರ ಪತ್ರಿಕೋದ್ಯಮವನ್ನೇ ದಿಕ್ಕು ತಪ್ಪಿಸಲಿದೆ" ಎಂದು ʼದ ರಿಪೋರ್ಟರ್ಸ್ ಕಲೆಕ್ಟಿವ್ (ಟಿಆರ್‌ಸಿ ) ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ನಿಯಂತ್ರಣ ಕ್ರಮ ಏಕೆ?

ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಸರ್ಕಾರಿ ಹೊಣೆಗಾರಿಕೆ, ಕಾರ್ಪೊರೇಟ್ ವಲಯದಲ್ಲಿ ಸ್ವಜನ ಪಕ್ಷಪಾತದ ಆರೋಪ ಹಾಗೂ ಇತ್ತೀಚೆಗೆ ಅದಾನಿ ಗ್ರೂಪ್ ವಿರುದ್ಧದ ಅವ್ಯವಹಾರ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕುರಿತು ʼದ ರಿಪೋರ್ಟ್ಸ್‌ ಕಲೆಕ್ಟೀವ್‌ʼ(ಟಿಆರ್‌ಸಿ) ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಅಧೀನದ ಆದಾಯ ತೆರಿಗೆ ಇಲಾಖೆ ಟಿಆರ್‌ಸಿಗೆ ನೀಡಿದ್ದ ಲಾಭರಹಿತ ಸ್ಥಾನಮಾನ ಹಿಂಪಡೆದಿದೆ. ಟಿಆರ್‌ಸಿಯು ಸಂಪೂರ್ಣ ದೇಣಿಗೆಯಿಂದಲೇ ಸ್ವತಂತ್ರ ಪತ್ರಿಕೋದ್ಯಮ ನಡೆಸುತ್ತಿತ್ತು ಎಂದು ಸಮಿತಿ ಹೇಳಿದೆ.

ಮಾಧ್ಯಮ ನಿಯಂತ್ರಣ ಇದೇ ಮೊದಲಲ್ಲ

ಮಾಧ್ಯಮಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸುವ ಪ್ರಯತ್ನ ಇದೇ ಮೊದಲಲ್ಲ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲಾಗಿತ್ತು. 2023 ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದ ಕೆಲ ವಾರಗಳಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿಯ ನವದೆಹಲಿ ಮತ್ತು ಮುಂಬೈ ಬಿಬಿಸಿ ಕಚೇರಿಗಳಲ್ಲಿ ಶೋಧ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಪ್ರತಿಕ್ರಿಯೆ ನೀಡದ ಅಧಿಕಾರಿಗಳು

ʼದ ರಿಪೋರ್ಟರ್ಸ್‌ ಕಲೆಕ್ಟೀವ್‌ʼ ಹಾಗೂ ʼದ ಫೈಲ್‌ʼ ಪ್ರಕರಣಗಳ ಕುರಿತು ನವದೆಹಲಿಯ ʼಪತ್ರಕರ್ತರ ಹಿತರಕ್ಷಣಾ ಸಮಿತಿʼ ನವದೆಹಲಿಯಲ್ಲಿರುವ ಕೇಂದ್ರ ನೇರ ತೆರಿಗೆಗಳ ಮಂಡಳಿ ಆಯುಕ್ತರು, ತೆರಿಗೆ ವಿನಾಯಿತಿ ಆಯುಕ್ತರು ಹಾಗೂ ಬೆಂಗಳೂರಿನಲ್ಲಿರುವ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಾಭರಹಿತ ಸ್ಥಾನಮಾನ ಹಾಗೂ ತೆರಿಗೆ ವಿನಾಯ್ತಿ ಹಿಂಪಡೆದಿರುವ ಆದೇಶವನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್‌ ಪಡೆಯಬೇಕು ಎಂದು ಸಮಿತಿ ಒತ್ತಾಯಿಸಿದೆ.

Read More
Next Story