Modi 3.0 Budget | ʼಖಾಲಿ ಚೊಂಬುʼ ವಾಗ್ವಾದ ಮತ್ತೆ ಮುನ್ನೆಲೆಗೆ ತಂದ ಕೇಂದ್ರ ಬಜೆಟ್
x

Modi 3.0 Budget | ʼಖಾಲಿ ಚೊಂಬುʼ ವಾಗ್ವಾದ ಮತ್ತೆ ಮುನ್ನೆಲೆಗೆ ತಂದ ಕೇಂದ್ರ ಬಜೆಟ್

ಭಾರೀ ಕೊಡುಗೆಗಳ ನಿರೀಕ್ಷೆ ಹುಟ್ಟುಹಾಕಿದ್ದ ಕೇಂದ್ರ ಬಜೆಟ್, ಕರ್ನಾಟಕದ ಪಾಲಿಗೆ ದೊಡ್ಡ ನಿರಾಶೆಯ ಕೊಡುಗೆ ನೀಡಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಗ್ವಾದಕ್ಕೆ ಬಳಕೆಯಾಗುತ್ತಿರುವ ʼಖಾಲಿ ಚೊಂಬುʼ ಮತ್ತೊಮ್ಮೆ ಪರಸ್ಪರ ಕಾಲೆಳೆದಾಟದ ಮುನ್ನೆಲೆಗೆ ಬಂದಿದೆ.


ಭಾರೀ ಕೊಡುಗೆಗಳ ನಿರೀಕ್ಷೆ ಹುಟ್ಟುಹಾಕಿದ್ದ ಕೇಂದ್ರ ಬಜೆಟ್, ಕರ್ನಾಟಕದ ಪಾಲಿಗೆ ದೊಡ್ಡ ನಿರಾಶೆಯ ಕೊಡುಗೆ ನೀಡಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಗ್ವಾದಕ್ಕೆ ಬಳಕೆಯಾಗುತ್ತಿರುವ ʼಖಾಲಿ ಚೊಂಬುʼ ಮತ್ತೊಮ್ಮೆ ಪರಸ್ಪರ ಕಾಲೆಳೆದಾಟದ ಮುನ್ನೆಲೆಗೆ ಬಂದಿದೆ.

ರಾಜ್ಯದ ಭದ್ರಾ ಮೇಲ್ಗಂಡೆ ಯೋಜನೆಗೆ ಘೋಷಣೆಯಾಗಿ ಬಿಡುಗಡೆಗೆ ಬಾಕಿ ಉಳಿದಿರುವ ಅನುದಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ರಾಯಚೂರಿಗೆ ಏಮ್ಸ್, ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ನೀಡಬೇಕಾದ ಬಾಕಿ ಬಿಡುಗಡೆ, ರೈಲ್ವೆ ಮತ್ತು ಸಂಪರ್ಕ ಕಾರಿಡಾರ್ ಯೋಜನೆಗಳ ಘೋಷಣೆ, ಬಾಕಿ ಇರುವ ಬರ ಪರಿಹಾರ ಹಾಗೂ ಇದೀಗ ಹೊಸದಾಗಿ ಸಂಭವಿಸಿರುವ ಈ ಬಾರಿಯ ಪ್ರವಾಹದ ಹಿನ್ನೆಲೆಯಲ್ಲಿ ನೆರವು ಸೇರಿದಂತೆ ಹಲವು ಅನುದಾನ, ನೆರವು, ಯೋಜನೆಗಳ ಘೋಷಣೆಯ ನಿರೀಕ್ಷೆ ಕನ್ನಡಿಗರದ್ದಾಗಿತ್ತು.

ಅದರಲ್ಲೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯಸಭೆಗೆ ಆರಿಸಿ ಕಳಿಸಿದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಅವರ ಬಜೆಟ್ನಲ್ಲಿ ವಿಶೇಷ ಪಾಲು ನಿರೀಕ್ಷಿಸುವ ಹಕ್ಕುದಾರಿಕೆ ಕೂಡ ಇದೇ ಎಂದೇ ಹೇಳಲಾಗುತ್ತಿತ್ತು.

ಆದರೆ, ಮಂಗಳವಾರ ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ಒಂದೇ ಒಂದು ಬಾರಿಯೂ ಕರ್ನಾಟಕದ ಹೆಸರು ಕೇಳಿಸಲಿಲ್ಲ. ಅಷ್ಟೇ ಅಲ್ಲ; ಹೈದರಾಬಾದ್ ಮತ್ತು ಬೆಂಗಳೂರು ಸಂಪರ್ಕ ಕಾರಿಡಾರ್ ಕುರಿತ ಹೇಳಿಕೆಯಲ್ಲಿ ಅನಿವಾರ್ಯವಾಗಿ ಬೆಂಗಳೂರು ಹೆಸರು ಕೇಳಿಬಂದದ್ದನ್ನು ಹೊರತುಪಡಿಸಿದರೆ ಕರ್ನಾಟಕದ ಯಾವ ಊರುಗಳಾಗಲೀ, ಯಾವುದೇ ಯೋಜನೆಗಳಾಗಲೀ ಹಣಕಾಸು ಸಚಿವೆಯ ಒಂದೂವರೆ ತಾಸಿನ ಬಜೆಟ್ ಭಾಷಣದಲ್ಲಿ ಸ್ಥಾನ ಪಡೆಯಲೇ ಇಲ್ಲ.

ರಾಜ್ಯದ ಬೇಡಿಕೆಗೆ ಸೊಪ್ಪುಹಾಕದ ಸಚಿವೆ

ದೇಶದ ಹಣಕಾಸು ಸಚಿವೆಯಾಗಿ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮನ್ನು ಸಂಸತ್ತಿನ ಮೇಲ್ಮನೆಗೆ ಸತತ ಮೂರನೇ ಬಾರಿಗೆ ಆಯ್ಕೆ ಮಾಡಿ ಕಳಿಸಿದ ಕನ್ನಡಿಗರ ಋಣ ನಿಮ್ಮ ಮೇಲಿದೆ. ಹಾಗಾಗಿ ರಾಜ್ಯಕ್ಕೆ ತುರ್ತಾಗಿ ಮತ್ತು ನ್ಯಾಯಯುತವಾಗಿ ಸಿಗಲೇಬೇಕಾದ ನೆರವು ನಿಮ್ಮ ಬಜೆಟ್ ಮೂಲಕ ಸಿಗಬೇಕಿದೆ. ಹಾಗಾಗಿ ರಾಜ್ಯ, ನಿಮ್ಮ ಈ ಏಳನೇ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದೆ ಎಂದು ರಾಜ್ಯ ಸರ್ಕಾರದ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಲವು ಬೇಡಿಕೆಗಳ ಪಟ್ಟಿಯನ್ನು ಮಾಧ್ಯಮಗಳ ಮೂಲಕ ಹಣಕಾಸು ಸಚಿವರ ಮುಂದಿಟ್ಟಿದ್ದರು.

ಅದರಲ್ಲಿ ಪ್ರಮುಖವಾಗಿ ಮಧ್ಯಕರ್ನಾಟಕದ ಲಕ್ಷಾಂತರ ರೈತ ಕುಟುಂಬಗಳ ಆಸರೆಯಾದ ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಬಾಕಿ ಉಳಿಸಿಕೊಂಡಿರುವ ಕೇಂದ್ರದ ಅನುದಾನ 5,300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಎಂಬುದು ಕೂಡ ಸೇರಿತ್ತು. ಜೊತೆಗೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11495 ಕೋಟಿ ರೂ. ಕರ್ನಾಟಕದ ಪಾಲಿನ ಹಣವನ್ನು ಕೂಡಲೇ ಬಿಡುಗಡೆ ಮಾಡಿ, ಬೆಂಗಳೂರು ಮಹಾನಗರ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿ, ರಾಯಚೂರಿಗೆ ಏಮ್ಸ್ ಆಸ್ಪತ್ರೆ ಘೋಷಿಸಿ, ವಸತಿ ಯೋಜನೆ ಸಹಾಯಧನ ಹೆಚ್ಚಿಸಿ, ಸೆಸ್ ಮತ್ತು ಸರ್ಚಾಜ್ ಆದಾಯ ಹಂಚಿಕೆಗೆ ಪೂರಕ ಕಾನೂನು ತಿದ್ದುಪಡಿ ಮಾಡಿ ಎಂಬ ಬೇಡಿಕೆಗಳನ್ನು ಕೂಡ ಮಂಡಿಸಲಾಗಿತ್ತು.

ಆದರೆ, ಕೇಂದ್ರ ಹಣಕಾಸು ಸಚಿವರು ಕರ್ನಾಟಕದ ಬೇಡಿಕೆಗಳಿಗೆ ಸೊಪ್ಪು ಹಾಕಿಲ್ಲ. ಬದಲಾಗಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಹಜವಾಗೇ ಇದು ಎನ್ಡಿಎ ಸರ್ಕಾರ ಉಳಿಸಿಕೊಳ್ಳುವ ಬಜೆಟ್ ಎಂಬ ಟೀಕೆ ವ್ಯಕ್ತವಾಗಿದೆ.

ರಾಜ್ಯಕ್ಕೆ ಸಿಕ್ಕಿದ್ದು ಖಾಲಿ ಚೊಂಬು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ. ಪ್ರಧಾನಮಂತ್ರಿಗಳ ಕುರ್ಚಿ ಉಳಿಸಿಕೊಳ್ಳಲು ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಸಚಿವೆ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. ನಾವು ಕೇಳಿದ್ದ ಬೇಡಿಕೆಗೂ ಸ್ಪಂದಿಸಿಲ್ಲ, ಸ್ವತಃ ತಾವೇ ನೀಡಿದ್ದ ಭರವಸೆಗಳನ್ನೂ ಈಡೇರಿಸಿಲ್ಲ” ಎಂದಿದ್ದಾರೆ. ಅಲ್ಲದೆ, “ಐದು ಮಂದಿ ಕೇಂದ್ರ ಸಚಿವರು 19 ಮಂದಿ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಎಲ್ಲರೂ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ” ಎಂದೂ ಸಿಎಂ ಟೀಕಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಜೆಟ್ ಕುರಿತು ಪ್ರತಿಕ್ರಿಯಿಸಿ, “ಇದು ಎನ್‌ಡಿಎ ಬಜೆಟ್. ಇಡೀ ದೇಶವನ್ನು ಒಂದಾಗಿ ನೋಡಿ ಮಂಡಿಸಿದ ಬಜೆಟ್ ಅಲ್ಲ. ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ಮಿತ್ರಪಕ್ಷಗಳಿಗೆ ಖುಷಿಪಡಿಸಲು ಮಂಡಿಸಲಾಗಿರುವ ಬಜೆಟ್. ಇಂಡಿಯಾ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ನಯಾಪೈಸೆ ನೀಡಿಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡ, ಬಜೆಟ್ ಕುರಿತು ವ್ಯಂಗ್ಯವಾಡಿದ್ದು, ಏನಿಲ್ಲಾ, ಏನಿಲ್ಲಾ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನಿಲ್ಲಾ.. 19 ಸಂಸದರು, ಐವರು ಸಚಿವರು ಇದ್ದರೂ ರಾಜ್ಯಕ್ಕೆ ದಕ್ಕಿದ್ದು ಸೊನ್ನೆ, ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ.. ಒಟ್ಟಿನಲ್ಲಿ ರಾಜ್ಯಕ್ಕೆ ʼಖಾಲಿ ಚೊಂಬುʼ ಬಿಟ್ಟರೆ ಬೇರೇನಿಲ್ಲ..” ಎಂದು ಎಕ್ಸ್ ಖಾತೆಯಲ್ಲಿ ಕೇಂದ್ರ ಬಜೆಟನ್ನು ಅಣಕಿಸಿದೆ.

ಒಟ್ಟಾರೆ, ಕೆಲವು ದಿನಗಳ ಹಿಂದೆ ಭಾರೀ ಟ್ರೋಲ್ಗೆ ಒಳಗಾಗಿ ಬದಿಗೆ ಸರಿದಿದ್ದ ʼಖಾಲಿ ಚೊಂಬುʼ ಇದೀಗ ಮತ್ತೆ ಕರ್ನಾಟಕ ರಾಜಕಾರಣದ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿದೆ. ಖಾಲಿ ಚೊಂಬನ್ನು ರಾಜಕೀಯವಾಗಿ ಮತ್ತೆ ಸಕ್ರಿಯ ಮಾಡಿದ್ದು ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್!

Read More
Next Story