Modi 3.0 Budget | ಕೇಂದ್ರ ಬಜೆಟ್‌ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?
x
ಕೇಂದ್ರ ಬಜೆಟ್‌ ಮಂಡನೆ

Modi 3.0 Budget | ಕೇಂದ್ರ ಬಜೆಟ್‌ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಗಳವಾರ ಲೋಕಸಭೆಯಲ್ಲಿ 2024-25ನೇ ಹಣಕಾಸು ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್‌ಗೆ ರಾಜ್ಯದ ಬಿಜೆಪಿ ಸಂಸದರು, ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಲೋಕಸಭೆಯಲ್ಲಿ ಇಂದು ಮಂಡಿಸಲಾದ 2024-25ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಅನುದಾನ

ದೇಶದ ಅರ್ಥ ವ್ಯವಸ್ಥೆಗೆ ಶರವೇಗ ನೀಡುವ ನಿಟ್ಟಿನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಹಣದುಬ್ಬರವನ್ನು ನಿಯಂತ್ರಿಸಲಿದ್ದು ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ ಮೀಸಲಿರಿಸಿ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ನೀಡುವ ಮೂಲಕ ರೈತರ ಏಳಿಗೆಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿರುವುದು ರೈತರು ಹಾಗೂ ಸ್ತ್ರೀ ಕುಲದ ಬಗೆಗಿನ ಅದಮ್ಯ ವಿಶ್ವಾಸವನ್ನು ಸಂಕೇತಿಸಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ಮೂಲಕ ಯುವ ಸಮುದಾಯದಕ್ಕೆ ಉದ್ಯೋಗ ಸೃಷ್ಟಿಗೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡಲು ಮನ್ನಣೆ ದೊರಕಿರುವುದು ನಿಜಕ್ಕೂ ಪ್ರಶಂಸನೀಯ ಹೆಜ್ಜೆಯಾಗಿದೆ ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ.

ಪ್ರಗತಿದಾಯಕ ಬಜೆಟ್

ಅಂತೆಯೇ ಭಾರತದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಹೊರೆಯಾಗದಂತೆ ವಿತ್ತ ಸಚಿವರು ಎಚ್ಚರವಹಿಸಿ ಜಾಣ್ಮೆ ತೋರಿದ್ದಾರೆ. ಉಚಿತ ಪಡಿತರ ಯೋಜನೆ 2029ರ ವರೆಗೆ ಮುಂದುವರಿಸಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುವ ಮೂಲಕ ಬಡವರ ಬಗೆಗಿನ ಕಾಳಜಿಯಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ. ಸತತ 7ನೇ ಬಾರಿಗೆ ಅತ್ಯುತ್ತಮ ಹಾಗೂ ಪ್ರಗತಿದಾಯಕ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವೆ ಎಂದು ಅವರು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಡಾ. ಸುಧಾಕರ್‌ ಪ್ರತಿಕ್ರಿಯೆ

ಇನ್ನು ಸಂಸದ ಡಾ.ಕೆ.ಸುಧಾಕರ್ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಬಜೆಟ್ ವಿಕಸಿತ ಭಾರತದ ಪರಿಕಲ್ಪನೆಗೆ ಪೂರಕವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯನ್ನ ಮತ್ತಷ್ಟು ವೇಗಗೊಳಿಸುವ ಹಾದಿಯಲ್ಲಿದೆ.

ರಾಜನೀತಿಗಿಂತ ರಾಷ್ಟ್ರನೀತಿಯೇ ಮುಖ್ಯ

ವೋಟ್‌ ಬ್ಯಾಂಕ್‌ ಬಜೆಟ್‌ ಮಂಡಿಸದೆ ವಿಕಸಿತ ಭಾರತದ ಬಜೆಟ್‌ ಮಂಡಿಸುವ ಮೂಲಕ ಪ್ರಧಾನಿ ಮೋದಿ ಅವರು ತಮಗೆ ರಾಜನೀತಿಗಿಂತ ರಾಷ್ಟ್ರನೀತಿಯೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆರ್ಥಿಕ ಅಭಿವೃದ್ಧಿ ಮತ್ತು ಜನಕಲ್ಯಾಣದ ಸಮತೋಲನ ಸಾಧಿಸಿರುವ ಕೇಂದ್ರ ಬಜೆಟ್, ತನ್ನ ಆಡಳಿತದ ರಾಜ್ಯಗಳನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿರುವ ಸರ್ಕಾರಗಳಿಗೆ ಒಂದು ಉತ್ತಮ ಮಾದರಿ ನೀಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿದ್ದರಿಂದ ಬಜೆಟ್‌ನಲ್ಲೂ ತಾರತಮ್ಯ ಮಾಡಬಹುದು ಎಂಬ ವಿರೋಧ ಪಕ್ಷಗಳ ಸುಳ್ಳಿನ ಊಹೆಗಳಿಗೆ ಈ ಬಜೆಟ್‌ ತಣ್ಣೀರು ಎರಚಿದೆ ಎಂದಿದ್ದಾರೆ.

ಯುವಜನರಿಗೆ ಹೊಸ ಆಶಾಕಿರಣ

ಟಾಪ್ 500 ಕಂಪನಿಗಳಲ್ಲಿ 1 ಕೋಟಿ ಯುವಜನರಿಗೆ 12 ತಿಂಗಳ ಇಂಟರ್ನ್‌ಶಿಪ್ ಅವಕಾಶ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ 1 ತಿಂಗಳ ವೇತನದಂತಹ ಕ್ರಮಗಳು ಯುವಜನರಿಗೆ ಹೊಸ ಆಶಾಕಿರಣವನ್ನು ನೀಡಿದೆ.

ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಇದರಿಂದಾಗಿ ಈ ಭಾಗದ ಆರ್ಥಿಕ ಸ್ಥಿತಿಯಲ್ಲಿ ಅಗಾಧ ಸುಧಾರಣೆ ಕಂಡುಬರಲಿದೆ. ಈ ಯೋಜನೆ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಇತ್ತೀಚೆಗಷ್ಟೇ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಯೋಜನೆಯನ್ನು ಬಜೆಟ್‌ನಲ್ಲಿ ತಂದಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.

ಮಹಿಳಾ ಉದ್ಯೋಗಿಗಳಿಗೆ ಸುಭದ್ರತೆ ಒದಗಿಸಲು ವಸತಿ ನಿಲಯಗಳನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಿರುವುದು ಕೂಡ ಶ್ಲಾಘನೀಯವಾಗಿದ್ದು, ಔದ್ಯೋಗಿಕವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲಿದೆ ಎಂದು ಡಾ ಸುಧಾಕರ್‌ ಹೇಳಿದ್ದಾರೆ.

ಆರ್‌ ಅಶೋಕ್‌ ಪ್ರತಿಕ್ರಿಯೆ

ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ 3.0 ವಿಕಸಿತ ಭಾರತ ಬಜೆಟ್ 2024-25 ರಲ್ಲಿ ಅನ್ನದಾತ, ಬಡವ ಹಾಗೂ ಮಹಿಳೆ ಸೇರಿದಂತೆ ಈ 9 ಕ್ಷೇತ್ರಗಳಿಗೆ ಪ್ರಮುವಾಗಿ ಆದ್ಯತೆ ನೀಡಲಾಗಿದೆ. ಕೌಶಲ್ಯ, ಮಧ್ಯಮವರ್ಗ, ನಿರುದ್ಯೋಗ, ಎಮ್ ಎಸ್ ಎಮ್ ಇ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ ಎಂದು ಅವರು ʼಎಕ್ಸ್‌ʼ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭವಿಷ್ಯದ ಭಾರತದ ಯುವಕರ ಬಜೆಟ್: ಬೊಮ್ಮಾಯಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್ ತೋರಿಸುತ್ತದೆ. ಹಣದುಬ್ಬರ ಸೀಮಿತಗೊಳಿಸಿರುವುದು, ಹೆಚ್ಚು ಜನರಿಗೆ ಕೆಲಸ ಕೊಡಿಸಿರುವುದು ಹತ್ತು ವರ್ಷದಲ್ಲಿ ಮಾಡಿರುವುದರ ಫಲವಾಗಿ ವಿಕಸಿತ ಭಾರತ ಮಾಡುವ ಹತ್ತು ವರ್ಷದ ಫಲವನ್ನು ಬರುವ ದಿನಗಳಲ್ಲಿ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು

ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸೇವಾ ವಲಯವೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರು ವಲಯದಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡಲು ದೇಶದ ಆರ್ಥಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ವಲಯಗಳಾದ ಶಿಕ್ಷಣ, ಆರೋಗ್ಯ ಉದ್ಯೋಗಕ್ಕೆ ಹೆಚ್ಚಿನ ಹಣ ನೀಡಿರುವುದು ಸ್ವಾಗತಾರ್ಹ ವಿಷಯ. ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ಹೆಚ್ಚು ಹಣ ನೀಡಿದ್ದಾರೆ. ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ವಿದ್ಯುತ್ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ನವೀಕರಣ ಇಂಧನಕ್ಕೆ ಮಹತ್ವ ನೀಡಿದ್ದು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಸುಮಾರು ಒಂದು ಕೋಟಿ ಜನರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಈಗಾಗಲೇ ಒಂದು ಲಕ್ಷ ಜನರು ಹೆಸರು ನೋಂದಾಯಿಸಿರುವುದು ದಾಖಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಸಾಮಾನ್ಯ ಜನರ ತೆರಿಗೆ ಕಡಿಮೆ ಮಾಡಿದ್ದು, ಮೂರು ಲಕ್ಷದವರೆಗೂ ಯಾವುದೇ ತೆರಿಗೆಯಿಲ್ಲ. ಮೂರು ಲಕ್ಷದಿಂದ 5 ಲಕ್ಷದವರೆಗೆ ಶೇ 5% ರಷ್ಟು ತೆರಿಗೆ ವಿಧಿಸಿ ತೆರಿಗೆ ಕಡಿಮೆ ಮಾಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಶಿಸ್ತು ಕಾಪಾಡಿರುವುದು ಮುಖ್ಯವಾಗಿದೆ. ವಿತ್ತೀಯ ಕೊರತೆ 5.3% ರಿಂದ 4.7 ಕ್ಕೆ ಇಳಿಸಿದ್ದು, ಮುಂದಿನ ವರ್ಷ 4.5% ಕ್ಕೆ ಇಳಿಸುವಂಥದ್ದು ಹಾಗೂ ವಿದೇಶಿ ನೇರ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವಂತೆ ಅನುಕೂಲ ಮಾಡಿದ್ದು, ಸರ್ಕಾರದ ಸಾಲ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದು ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಬೊಮ್ಮಾಯಿ ಕೇಂದ್ರ ಬಜೆಟ್‌ ಬಣ್ಣಿಸಿದ್ದಾರೆ.

Read More
Next Story