ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸಿದ್ಧ, ರಾಜ್ಯ ಸರ್ಕಾರದ ಸ್ಪಂದನೆ ಅಗತ್ಯ: ಹೆಚ್‌ಡಿ ದೇವೇಗೌಡ
ರಾಜ್ಯದ ಹೆದ್ದಾರಿ ಯೋಜನೆಗಳು, ಅದರಲ್ಲಿ ಮುಖ್ಯವಾಗಿ ಶಿರಾಡಿ ಘಾಟಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜತೆ ಮಾತುಕತೆ ನಡೆಸಿದ್ದಾರೆ.
ರಾಜಧಾನಿ ಬೆಂಗಳೂರು - ಮಂಗಳೂರು ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಶಿರಾಡಿ ಘಾಟಿ ಪ್ರದೇಶದಲ್ಲಿ ಇತ್ತೀಚೆಗೆ ಗುಡ್ಡ ಕುಸಿತ ಉಂಟಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವೈಜ್ಞಾನಿಕವಾಗಿ ಗುಡ್ಡ ಕೊರೆದು ರಸ್ತೆ ಮಾಡಲಾಗಿದೆ ಎಂದು ಕಿಡಿಕಾರಿದ್ದರು. ಗುಡ್ಡ ಕುಸಿತದಿಂದ ಆ ರಸ್ತೆ ಹಾಳಾಗಿದೆ. ಈ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ದೇವೇಗೌಡರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ʻʻಕರ್ನಾಟಕ ಸರಕಾರ ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಿದರೆ ಶಿರಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಸಿದ್ಧವಿದೆʼʼ ಎಂದು ತಿಳಿಸಿದರು.
ʻʻಅಲ್ಲದೆ, ಈ ಯೋಜನೆಗೆ ಹಣ ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸುವುದು ಎಂದು ನಿತಿನ್ ಗಡ್ಕರಿ ಅವರು ಮಾಜಿ ಪ್ರಧಾನಿಗಳಿಗೆ ಭರವಸೆ ನೀಡಿದ್ದಾರೆ. ಅಭಿವೃದ್ಧಿ ಯೋಜನೆಯು ಸುರಂಗ ತಂತ್ರಜ್ಞಾನ ಬಳಸುವುದನ್ನು ಒಳಗೊಂಡಿರುತ್ತದೆ. ರಾಜ್ಯ ಸರಕಾರ ಕೇಂದ್ರಕ್ಕೆ ಸ್ಪಂದಿಸಬೇಕು ಎಂದು ಸಚಿವರು ಹೇಳಿದ್ದಾರೆʼʼ ಎಂದು ದೇವೇಗೌಡ ಅವರು ತಿಳಿಸಿದ್ದಾರೆ.
ಈ ಮಾಹಿತಿಯನ್ನು ಮಾಜಿ ಪ್ರಧಾನಿಗಳು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
I had a very fruitful meeting with Union Surface Transport Minister Shri. @nitin_gadkari avaru, today. Among other things we discussed, his assurance on the Shiradi Ghat Road was heartening.
— H D Devegowda (@H_D_Devegowda) August 8, 2024
1/2 pic.twitter.com/hLbtiv10aQ