Census period extension | Additional classroom stress for teachers, students
x

ಸಾಂದರ್ಭಿಕ ಚಿತ್ರ

ಗಣತಿ ಸುಳಿಯಲ್ಲಿ ಶಿಕ್ಷಣ: ಶಿಕ್ಷಕರು-ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ನೆಟ್‌ವರ್ಕ್‌, ತಂತ್ರಾಂಶ ಸಮಸ್ಯೆ ಹಾಗೂ ವಿಳಾಸ ಪತ್ತೆ ಹಚ್ಚುವುದು ಸೇರಿದಂತೆ ಹಲವಾರು ಸಮಸ್ಯೆಗಳ ನಡುವೆ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೇ.80ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.


ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಇದೀಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಇಬ್ಬಾಯು ಖಡ್ಗದಂತಾಗಿದೆ. ದಸರಾ ರಜೆಯನ್ನೂ ಬಲಿ ಪಡೆದು ನಡೆಯುತ್ತಿರುವ ಈ ಸಮೀಕ್ಷೆಯ ಅವಧಿಯನ್ನು ಸರ್ಕಾರ ಅಕ್ಟೋಬರ್ 24ರವರೆಗೆ ವಿಸ್ತರಿಸಿರುವುದು ಒಂದೆಡೆ ಗಣತಿದಾರ ಶಿಕ್ಷಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದರೆ, ಮತ್ತೊಂದೆಡೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.

ಸರ್ಕಾರವು ಮೊದಲು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆಗೆ ದಿನಾಂಕ ನಿಗದಿಪಡಿಸಿತ್ತು. ಆದರೆ, ಗೊಂದಲ, ನೆಟ್‌ವರ್ಕ್‌, ತಂತ್ರಾಂಶ ಸಮಸ್ಯೆ, ವಿಳಾಸ ಪತ್ತೆಯಾಗದಿರುವುದು ಸೇರಿದಂತೆ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೇ.80ರಷ್ಟು ಸಮೀಕ್ಷೆ ಮುಗಿದಿದ್ದರೂ, ಶೇ.100ರಷ್ಟು ಗುರಿ ಸಾಧಿಸಲು ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಟೋಬರ್ 12ರವರೆಗೆ ಮತ್ತು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 24ರವರೆಗೆ ಅವಧಿ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಿ, ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಇದು ಗಣತಿದಾರರಿಗೆ ತುಸು ಸಮಾಧಾನ ತಂದರೂ, ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಅಡ್ಡಿಯಾಗುವ ಆತಂಕ ಸೃಷ್ಟಿಸಿದೆ.

ಬೋಧನೆಗಿಂತ ಗಣತಿಯೇ ಶಿಕ್ಷಕರ ಕಾಯಕವೇ?

ಸರ್ಕಾರಿ ಶಾಲಾ ಶಿಕ್ಷಕರನ್ನು ಬೋಧನೆಗಿಂತ ಹೆಚ್ಚಾಗಿ ಗಣತಿ, ಚುನಾವಣೆ ಮತ್ತು ಇತರ ಸರ್ಕಾರಿ ಯೋಜನೆಗಳಿಗೇ ಬಳಸಿಕೊಳ್ಳಲಾಗುತ್ತಿದೆ ಎಂಬುದು ಸಾರ್ವತ್ರಿಕ ಆರೋಪ. ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಒಳಮೀಸಲಾತಿಗಾಗಿ ಜಾತಿಗಣತಿ ನಡೆಸಲಾಗಿತ್ತು. ಇದೀಗ ಮತ್ತೆ ಆರ್ಥಿಕ, ಸಾಮಾಜಿಕ ಸಮೀಕ್ಷೆ. ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ, ಜನವರಿಯಲ್ಲಿ ಬೃಹತ್ ಬೆಂಗಳೂರು ಪಾಲಿಕೆ, ನಂತರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸಾಲುಗಟ್ಟಿ ನಿಂತಿವೆ. ಕೇಂದ್ರ ಸರ್ಕಾರ 2026ಕ್ಕೆ ಜನಗಣತಿ ನಡೆಸಲು ಸಜ್ಜಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಲ್ಲೂ ಶಿಕ್ಷಕರನ್ನು ಕಡ್ಡಾಯವಾಗಿ ಬಳಸಿಕೊಳ್ಳಲಾಗುತ್ತದೆ. "ಹೀಗೆ ವರ್ಷಪೂರ್ತಿ ಗಣತಿ, ಚುನಾವಣಾ ಕೆಲಸ ಮಾಡಿದರೆ, ನಾವು ಮಕ್ಕಳಿಗೆ ಪಾಠ ಮಾಡುವುದು ಯಾವಾಗ? ಅವರ ಭವಿಷ್ಯ ರೂಪಿಸುವುದು ಹೇಗೆ?" ಎಂಬುದು ಶಿಕ್ಷಕರ ಯಕ್ಷಪ್ರಶ್ನೆಯಾಗಿದೆ.

ವಿಶೇಷ ತರಗತಿ ಮೂಲಕ ಪಾಠ ಪೂರ್ಣ: ಶಿಕ್ಷಕರ ಸಂಘದ ಭರವಸೆ

ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ರಾಜ್ಯ ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಎಂ.ಎನ್., "ಸಮೀಕ್ಷೆಯ ಅವಧಿ ವಿಸ್ತರಣೆ ಮಾಡಿರುವುದು ಗಣತಿದಾರರಿಗೆ ಅನುಕೂಲಕರವಾಗಿದೆ. ನೆಟ್‌ವರ್ಕ್, ಯುಎಚ್‌ಐಡಿ ಸಂಖ್ಯೆ, ಒಟಿಪಿ ಸಮಸ್ಯೆಗಳಿಂದ ಸಮೀಕ್ಷೆ ವಿಳಂಬವಾಗಿತ್ತು. ರಜಾ ಅವಧಿಯಲ್ಲಿ ಸಮೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದು. ವಿಶೇಷ ತರಗತಿಗಳನ್ನು ನಡೆಸಿ ಪಾಠಗಳನ್ನು ಪೂರ್ಣಗೊಳಿಸಬಹುದು," ಎಂದು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. "ರಾಜ್ಯ ಸರ್ಕಾರದ ಈ ಸಮೀಕ್ಷೆಯ ದತ್ತಾಂಶವು ಪರಿಪೂರ್ಣವಾಗಿದ್ದು, 2026ರ ಜನಗಣತಿಗೆ ಕೇಂದ್ರ ಸರ್ಕಾರವೂ ಇದನ್ನು ಬಳಸಿಕೊಳ್ಳಬಹುದು," ಎಂದು ಅವರು ಅಭಿಪ್ರಾಯಪಟ್ಟರು.

ಗಣತಿದಾರರ ಗೋಳು: ಮಾನಸಿಕ, ದೈಹಿಕ ಹಿಂಸೆ

ಆದರೆ, ಸದ್ಯದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. "ಈ ಹಿಂದಿನ ಒಳ ಮೀಸಲಾತಿ ಸಮೀಕ್ಷೆ ಸರಳವಾಗಿತ್ತು. ಆದರೆ, ಈಗಿನ ಸಮೀಕ್ಷೆ ತೀರಾ ಗೊಂದಲಮಯ. ಒಬ್ಬ ಗಣತಿದಾರನಿಗೆ ಮೂರು ಗ್ರಾಮ, ಒಂದೇ ಗ್ರಾಮದಲ್ಲಿ ಇಬ್ಬರು ಗಣತಿದಾರರು, ಒಂದು ಮನೆಗೆ ಕನಿಷ್ಠ 40 ನಿಮಿಷ ಸಮಯ, ಲೊಕೇಶನ್ ಹಾಕಿದರೆ ಬಯಲಿಗೆ ಕರೆದೊಯ್ಯುವ ತಂತ್ರಾಂಶ... ಹೀಗೆ ಹತ್ತಾರು ಸಮಸ್ಯೆಗಳಿವೆ. ಸಾರ್ವಜನಿಕರೂ ಕುಹಕವಾಡುತ್ತಾರೆ. ಇದು ನಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದೆ. ವಿದ್ಯಾರ್ಥಿಗಳಿಗೂ ಅನ್ಯಾಯವಾಗುತ್ತಿದೆ," ಎಂದು ಬೆಂಗಳೂರು ಗ್ರಾಮಾಂತರದ ಶಿಕ್ಷಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

ಮಕ್ಕಳ ಮೇಲೆ ಹೆಚ್ಚುತ್ತಿರುವ ಒತ್ತಡ

ಶಿಕ್ಷಕರನ್ನು ಪದೇ ಪದೇ ಬೋಧಕೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವುದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. "ರಜೆ ವಿಸ್ತರಣೆಯಿಂದ ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಕುಂಠಿತಗೊಳ್ಳಲಿವೆ. ಸಮೀಕ್ಷೆ ಮುಗಿದ ನಂತರ ಶಿಕ್ಷಕರು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಮಕ್ಕಳ ಮೇಲೆ ಒಂದೇ ಸಮನೆ ಒತ್ತಡ ಹೇರುತ್ತಾರೆ. ಇದು ಮಕ್ಕಳಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗಲಿದೆ," ಎಂದು ಪೋಷಕರಾದ ವೆಂಕಟರಾಜು ಕೆ.ಎಚ್. 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು. ಒಟ್ಟಿನಲ್ಲಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶಿಕ್ಷಣ ವ್ಯವಸ್ಥೆಯನ್ನೇ ಅತಂತ್ರ ಸ್ಥಿತಿಗೆ ತಳ್ಳಿದೆ.

Read More
Next Story