ಹಿಂದೂ ಮಾಲಿಕತ್ವದ ಸಂಸ್ಥೆಗಳಲ್ಲೇ ಮದುವೆ, ಶಿಕ್ಷಣ: ದ್ವೇಷ ಭಾಷಣ ಮಾಡಿದ ಪ್ರಾಧ್ಯಾಪಕ
ಹಿಂದೂ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಲ್ಲೇ ವ್ಯಾಸಂಗ ಮಾಡಬೇಕು ಎಂದಿರುವ ಅರುಣ್ ಉಲ್ಲಾಳ್ ಶಿಕ್ಷಣ ಪಡೆದಿರುವುದು ಮತ್ತು ಕೆಲಸ ಮಾಡುತ್ತಿರುವುದು ಕ್ರಿಶ್ಚಿಯನ್ ಸಂಸ್ಥೆಗಳಲ್ಲೇ!.
ಧರ್ಮದ ಕುರಿತು ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ವಿರುದ್ಧ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಉಳ್ಳಾಲ ತಾಲೂಕಿನ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಡಾ.ಅರುಣ್ ಉಳ್ಳಾಲ್, ಹಿಂದೂಗಳು ಅವರ ಮಾಲಿಕತ್ವದ ಸಭಾಂಗಣದಲ್ಲೇ ಮದುವೆ ಆಗಬೇಕು. ಅವರ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಲ್ಲೇ ವ್ಯಾಸಂಗ ಮಾಡಬೇಕು. ಅನ್ಯ ಧರ್ಮಿಯರ ಸಭಾಂಗಣದಲ್ಲಿ ಮದುವೆ ಆಗಬಾರದು ಎಂದು ಭಾಷಣ ಮಾಡಿದ್ದರು.
ಡಾ.ಅರುಣ್ ಉಳ್ಳಾಲ್ ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಪ್ರಾಧ್ಯಾಪಕನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ವ್ಯಾಪಕ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೆನ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, 66(C) IT ACT AND 196, 351 (BNS), 2023 ರಂತೆ ಪ್ರಕರಣ ದಾಖಲಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ಅವರಿಗೆ ಈ ಹಿಂದೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿದ್ದವು.
ವಿಶೇಷವೆಂದರೆ, ಅರುಣ್ ಉಳ್ಳಾಲ್, ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ, ಉಳ್ಳಾಲದ ಸೇಂಟ್ ಸೆಬಾಸ್ಟಿಯನ್ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಸೇಂಟ್ ಸೆಬಾಸ್ಟಿಯನ್ ಪಿಯು ಕಾಲೇಜು ಪೆರ್ಮನ್ನೂರು, ಮಂಗಳೂರಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದು, ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಬಿ.ಎ.ಮೇಜರ್ ಪದವಿ ವ್ಯಾಸಂಗ ಮಾಡಿದ್ದರು.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಆತ ಪಡೆದಿರುವ ಶಿಕ್ಷಣ, ಮತ್ತು ಈಗಿನ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ರಿಸ್ಟನ್ ಮೆನೇಜಸ್ ಎಂಬವರು ಅರುಣ್ ಉಳ್ಳಾಲ್‌ಗೆ ಪತ್ರ ಬರೆದಿದ್ದು, "ನಿಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣವನ್ನು ಕ್ರಿಶ್ಚಿಯನ್ ಸಂಸ್ಥೆಗಳು ಪೋಷಿಸುತ್ತವೆ. ಕೆಜಿಯಿಂದ ಯುಜಿವರೆಗೆ, ನೀವು ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಸ್ಕೂಲ್, ಸೇಂಟ್ ಸೆಬಾಸ್ಟಿಯನ್ ಹೈಸ್ಕೂಲ್ ಮತ್ತು ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಓದಿದ್ದೀರಿ. ನೀವು ಸೇಂಟ್ ಸೆಬಾಸ್ಟಿಯನ್ಸ್ ಪ್ರಿ-ಯೂನಿವರ್ಸಿಟಿ ಕಾಲೇಜು ಮತ್ತು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದೀರಿ, ಪುಸ್ತಕಗಳನ್ನು ಪ್ರಕಟಿಸಲು ಮತ್ತು ಆಡಿಯೊ ಹಾಡುಗಳನ್ನು ಬಿಡುಗಡೆ ಮಾಡಲು ಅವರ ವೇದಿಕೆಗಳನ್ನು ಬಳಸಿಕೊಳ್ಳುತ್ತೀರಿ. ಈಗ, ನೀವು ಈ ಸಂಸ್ಥೆಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೀರಿ, ಕೋಮು ಭಾವನೆಗಳನ್ನು ಉತ್ತೇಜಿಸುತ್ತೀರಿ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಇತ್ತೀಚಿನ ಭಾಷಣವು ನಿಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.," ಎಂದು ಟೀಕಿಸಿದ್ದಾರೆ.