Ceasefire between India and Pakistan disappointing: Minister Priyank Kharge
x

ಪ್ರಿಯಾಂಕ್‌ ಖರ್ಗೆ

ಭಾರತ - ಪಾಕ್‌ ನಡುವಿನ ಕದನವಿರಾಮ ನಿರಾಸೆ ಮೂಡಿಸಿದೆ: ಸಚಿವ ಪ್ರಿಯಾಂಕ್‌ ಖರ್ಗೆ

ಕದನ ವಿರಾಮವನ್ನು ಯಾರು ಘೋಷಿಸಬೇಕು? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಉಲ್ಲಂಘಿಸಿದರೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಅಧಿವೇಶನ ಕರೆದು ಜನರಿಗೆ ವಾಸ್ತವ ತಿಳಿಸಬೇಕು ಎಂದು ಒತ್ತಾಯಿಸಿದರು.


ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವೀಪಕ್ಷೀಯ ವಿಷಯವಾಗಿದ್ದು, ಅಮೆರಿಕ ಮಧ್ಯೆ ಪ್ರವೇಶಿಸುವ ಮೂಲಕ ಅಂತಾರಾಷ್ಟ್ರೀಯ ವಿಚಾರವನ್ನಾಗಿ ಮಾಡಿದೆ. ಕದನ ವಿರಾಮ ಘೋಷಣೆ ಮಾಡಲು ಡೊನಾಲ್ಡ್‌ ಟ್ರಂಪ್ ಯಾರು? ಕದನ ವಿರಾಮ ನಿರ್ಧಾರದಿಂದ ಭಾರತೀಯ ಸೇನೆ ಹಾಗೂ ಸಾಮಾನ್ಯ‌ ನಾಗರಿಕರಿಗೆ ನಿರಾಸೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ. ನಾಗರಿಕರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ನೆಲೆಗಳ ಮೇಲೆ ಸೈನಿಕರು ದಾಳಿ ಮಾಡಿ‌ ನಾಶಪಡಿಸಿದ್ದಾರೆ. ಕದನ ವಿರಾಮವನ್ನು ಯಾರು ಘೋಷಿಸಬೇಕು? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು ? ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಅಧಿವೇಶನ ಕರೆದು ರಾಷ್ಟ್ರದ ಜನರಿಗೆ ವಾಸ್ತವ ತಿಳಿಸಬೇಕು ಎಂದು ಒತ್ತಾಯಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ʼಎಕ್ಸ್‌ʼ ಪೋಸ್ಟ್‌ನಲ್ಲಿರುವ ಅಂಶಗಳನ್ನು ಗಮನಿಸಿದ್ದೀರಾ? ಕಾಮನ್ ಸೆನ್ಸ್ ಎನ್ನುವ ಪದ ಬಳಸಿ, ಭಾರತಕ್ಕೆ ಬುದ್ದಿ ಹೇಳಿರುವ ರೀತಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ, ವಿದೇಶಾಂಗ ಸಚಿವರು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರು ಕದನ ವಿರಾಮದ ಕುರಿತು ಜನರಿಗೆ ವಾಸ್ತವ ತಿಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದೇಶಾಂಗ ನೀತಿಗಳು ಬಲಿಷ್ಠಗೊಳ್ಳಬೇಕಾದರೆ ಪ್ರಧಾನಿಗಳು ವಿದೇಶಗಳ ಪ್ರಧಾನ ಮಂತ್ರಿಗಳನ್ನು ಅಪ್ಪಿಕೊಂಡರೆ‌ ಸಾಲದು, ಅವರೊಂದಿಗೆ ಮಾತುಕತೆ ನಡೆಸಬೇಕು. ಭಯೋತ್ಪಾದಕ ಕೃತ್ಯವನ್ನು ಅಮೆರಿಕ ಖಂಡಿಸಿಲ್ಲ. ಚೀನಾ ಹಾಗೂ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪಾಕಿಸ್ತಾನಕ್ಕೆ ಸಾಲ ಘೋಷಿಸಿದೆ ಎಂದರೆ ಭಯೋತ್ಪಾದನೆಗೆ ಬೆಂಬಲವಾಗಿರುವ ಪಾಕಿಸ್ತಾನಕ್ಕೆ ಸಾಲ‌ ನೀಡದಂತೆ ಮನವರಿಕೆ ಮಾಡಲು‌ ಭಾರತ ಸರ್ಕಾರ ವಿಫಲವಾಗಿದೆ. ವಿದೇಶಾಂಗ ನೀತಿಗಳು ಎಡವುತ್ತಿವೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಕಾಂಗ್ರೆಸ್‌, ದೇಶದ ಹಿತಾಸಕ್ತಿ‌ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ. ಪಹಲ್ಗಾಮ್‌ ದಾಳಿಯ ಭಯೋತ್ಪಾದಕರು ಏನಾದರು? ಈಗ ಎಲ್ಲಿದ್ದಾರೆ? ದೇಶದ ಹಿತಾಸಕ್ತಿ ಹಾಗೂ ವಾಸ್ತವಾಂಶಗಳಿಗಿಂತ ವ್ಯಕ್ತಿಯ ವೈಭವೀಕರಣವಾಗುತ್ತಿದೆ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವವರು ಹಾಗೂ ಬಿಜೆಪಿಯ ಬಾಡಿಗೆ ಭಾಷಣಕಾರರು ಕರಾಚಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ, ಪಾಕಿಸ್ತಾನ ನಾಲ್ಕು ಭಾಗವಾಗುತ್ತದೆ ಎಂಬ ತಪ್ಪು ಮಾಹಿತಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

Read More
Next Story