ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: 2,000 ಕೋಟಿ ರೂಪಾಯಿ ಎಸ್.ಬಿ.ಐ. ವಂಚನೆ ಪ್ರಕರಣದಲ್ಲಿ ಸಿಬಿಐ ದಾಳಿ
x

ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: 2,000 ಕೋಟಿ ರೂಪಾಯಿ ಎಸ್.ಬಿ.ಐ. ವಂಚನೆ ಪ್ರಕರಣದಲ್ಲಿ ಸಿಬಿಐ ದಾಳಿ

ಇ.ಡಿ. ರಿಲಯನ್ಸ್ ಗ್ರೂಪ್ ಕಂಪನಿಗಳಾದ ರಿಲಯನ್ಸ್ ಇನ್​​ಫ್ರಾಸ್ಟ್ರಕ್ಷರ್​ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಗಳ ಹಣಕಾಸು ಅವ್ಯವಹಾರ ಮತ್ತು ಸಾಲದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿರುವ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ.


ಉದ್ಯಮಿ ಅನಿಲ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಸಂಸ್ಥೆಗೆ ಮತ್ತೊಂದು ಆಘಾತ ಎದುರಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,000 ಕೋಟಿ ರೂಪಾಯಿ ಅಧಿಕ ವಂಚನೆ ಎಸಗಿದ ಆರೋಪದ ಮೇಲೆ ಕೇಂದ್ರ ತನಿಖಾ ದಳ ಶನಿವಾರ ಅವರ ನಿವಾಸ ಮತ್ತು ಕಂಪನಿಯ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದೆ.

ಈ ವರ್ಷದ ಜೂನ್ 13ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಂಚನೆ ನಿರ್ವಹಣೆ ಮಾರ್ಗಸೂಚಿಗಳ ಅಡಿಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಖಾತೆಗಳನ್ನು 'ವಂಚನೆ' ಎಂದು ಘೋಷಿಸಿತ್ತು. ಈ ಮಾಹಿತಿಯನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ದೃಢಪಡಿಸಿದ್ದರು.

ಇ.ಡಿ. ತನಿಖೆಯ ಬೆನ್ನಲ್ಲೇ ಸಿಬಿಐ ದಾಳಿ

17,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬ್ಯಾಂಕ್ ಸಾಲಗಳ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಆಗಸ್ಟ್ 5ರಂದು ಅನಿಲ್ ಅಂಬಾನಿ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿತ್ತು. ಅದರ ಬೆನ್ನಲ್ಲೇ ಇದೀಗ ಸಿಬಿಐ ಮತ್ತೊಂದು ಪ್ರಕರಣದಲ್ಲಿ ದಾಳಿ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇ.ಡಿ. ರಿಲಯನ್ಸ್ ಗ್ರೂಪ್ ಕಂಪನಿಗಳಾದ ರಿಲಯನ್ಸ್ ಇನ್​​ಫ್ರಾಸ್ಟ್ರಕ್ಷರ್​ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಗಳ ಹಣಕಾಸು ಅವ್ಯವಹಾರ ಮತ್ತು ಸಾಲದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿರುವ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ.

ಅನಿಲ್ ಅಂಬಾನಿ ಮೇಲಿನ ಇತರ ಆರೋಪಗಳು

ಯೆಸ್ ಬ್ಯಾಂಕ್ ಪ್ರಕರಣದಲ್ಲಿ, 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್‌ನಿಂದ 3,000 ಕೋಟಿ ರೂಪಾಯಿ ಹಣವನ್ನು ರಿಲಯನ್ಸ್ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಹಾಗೆಯೇ, ಕೆನರಾ ಬ್ಯಾಂಕ್‌ಗೆ 1,050 ಕೋಟಿ ರೂಪಾಯಿ ವಂಚಿಸಿದ ಆರೋಪವೂ ತನಿಖೆಯ ಹಂತದಲ್ಲಿದೆ. ಮತ್ತೊಂದು ಪ್ರಕರಣದಲ್ಲಿ, ರಿಲಯನ್ಸ್ ಇನ್ಫ್ರಾ ಕಂಪನಿಯು 10,000 ಕೋಟಿ ರೂಪಾಯಿ ಬೇನಾಮಿ ಸಂಸ್ಥೆಗಳಿಗೆ ವರ್ಗಾಯಿಸಿದೆ ಎಂದು ಸೆಬಿ ಆರೋಪಿಸಿತ್ತು.

ಈ ಎಲ್ಲಾ ಆರೋಪಗಳನ್ನು ರಿಲಯನ್ಸ್ ಗ್ರೂಪ್ ನಿರಾಕರಿಸಿದ್ದು, ಹಲವು ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ ಎಂದು ಸ್ಪಷ್ಟಪಡಿಸಿದೆ. ಆದರೆ, ತನಿಖಾ ಸಂಸ್ಥೆಗಳು ಸತತವಾಗಿ ನಡೆಸುತ್ತಿರುವ ದಾಳಿಗಳು ಮತ್ತು ತನಿಖೆಗಳು ಅನಿಲ್ ಅಂಬಾನಿ ಅವರ ಉದ್ಯಮ ಸಾಮ್ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ.

Read More
Next Story