
ಸಿಬಿಐ ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣಾ ಪತ್ರ
ಸಿಬಿಐ ಬೇಟೆ; 9.5 ಲಕ್ಷ ಲಂಚ ಪಡೆಯುತ್ತಿದ್ದ ಸಿಪಿಆರ್‌ಐ ಜಂಟಿ ನಿರ್ದೇಶಕ ವಶಕ್ಕೆ; 3.76 ಕೋಟಿ ರೂ. ಪತ್ತೆ
ಸಿಪಿಆರ್‌ಐ ಜಂಟಿ ನಿರ್ದೇಶಕರಾದ ರಾಜಾರಾಮ್ ಮೋಹನ್ ರಾವ್ ಚೆನ್ನು ಮತ್ತು 'ಮೆಸರ್ಸ್ ಸುಧೀರ್ ಗ್ರೂಪ್ ಆಫ್ ಕಂಪನಿಸ್'ನ ನಿರ್ದೇಶಕ ಅತುಲ್ ಖನ್ನಾ ಬಂಧಿತರು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಆರ್‌ಐ) ನ ಜಂಟಿ ನಿರ್ದೇಶಕರು ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದು, ಬರೋಬ್ಬರಿ 3.76 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಖಾಸಗಿ ಕಂಪನಿಯೊಂದರ ವಿದ್ಯುತ್ ಉಪಕರಣಗಳಿಗೆ ಅನುಕೂಲಕರವಾದ ಪರೀಕ್ಷಾ ವರದಿಗಳನ್ನು ನೀಡಲು 9.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಜಂಟಿ ನಿರ್ದೇಶಕರನ್ನು ಮತ್ತು ಖಾಸಗಿ ಕಂಪನಿಯ ಕಾರ್ಯನಿರ್ವಾಹಕರನ್ನು ಬಂಧಿಸಿದ್ದಾರೆ.
ಸಿಪಿಆರ್‌ಐ ಜಂಟಿ ನಿರ್ದೇಶಕರಾದ ರಾಜಾರಾಮ್ ಮೋಹನ್ ರಾವ್ ಚೆನ್ನು ಮತ್ತು 'ಮೆಸರ್ಸ್ ಸುಧೀರ್ ಗ್ರೂಪ್ ಆಫ್ ಕಂಪನಿಸ್'ನ ನಿರ್ದೇಶಕ ಅತುಲ್ ಖನ್ನಾ ಬಂಧಿತರು ಎಂದು ಗುರುತಿಸಲಾಗಿದೆ. ಜನವರಿ 8ರಂದು ಸಿಬಿಐ ಈ ಇಬ್ಬರು ಹಾಗೂ ಇತರ ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಎಫ್‌ಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೇ ಜನವರಿ 9ರಂದು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು, 9.5 ಲಕ್ಷ ರೂ. ಲಂಚದ ಹಣವನ್ನು ಹಸ್ತಾಂತರಿಸುವಾಗ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲಂಚದ ವ್ಯವಹಾರದ ಹಿನ್ನೆಲೆ
ಆರೋಪಿ ಜಂಟಿ ನಿರ್ದೇಶಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸುಧೀರ್ ಗ್ರೂಪ್ ಆಫ್ ಕಂಪನಿಸ್ ತಯಾರಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರವಾದ 'ಟೆಸ್ಟ್ ರಿಪೋರ್ಟ್' (ಪರೀಕ್ಷಾ ವರದಿ) ಗಳನ್ನು ನೀಡುವ ಸಲುವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಭ್ರಷ್ಟಾಚಾರದ ಜಾಲವನ್ನು ಭೇದಿಸಲು ಸಿಬಿಐ ತಂಡವು ನಿಖರ ಮಾಹಿತಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಮನೆಯಲ್ಲಿ ಕುಬೇರನ ಖಜಾನೆ ಪತ್ತೆ
ಬಂಧನದ ನಂತರ ಜಂಟಿ ನಿರ್ದೇಶಕರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಿಢೀರ್ ಶೋಧ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 3.59 ಕೋಟಿ ರೂ. ಪತ್ತೆಯಾಗಿದೆ. ಇದರ ಜೊತೆಗೆ ಅಮೆರಿಕನ್ ಡಾಲರ್, ಹಾಂಕಾಂಗ್ ಡಾಲರ್, ಸಿಂಗಾಪುರ್ ಡಾಲರ್, ಯುರೋ, ಯುವಾನ್ ಸೇರಿದಂತೆ ವಿವಿಧ ವಿದೇಶಿ ಕರೆನ್ಸಿಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 3.76 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ವಶಪಡಿಸಿಕೊಳ್ಳಲಾದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದ ಮೇಲೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರ ಉನ್ನತ ಅಧಿಕಾರಿಯೇ ಇಷ್ಟು ದೊಡ್ಡ ಮೊತ್ತದ ಅಕ್ರಮ ಹಣದೊಂದಿಗೆ ಸಿಕ್ಕಿಬಿದ್ದಿರುವುದು ಸರ್ಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ.

