
ಜಾತಿ ಸಮೀಕ್ಷೆ
ಇಂದಿನಿಂದ ಜಾತಿ ಗಣತಿ: ಹೈಕೋರ್ಟಿನಲ್ಲೂ ಇಂದೇ ರಿಟ್ ಅರ್ಜಿ ವಿಚಾರಣೆ, ನ್ಯಾಯಾಲಯದತ್ತ ಎಲ್ಲರ ಚಿತ್ತ
ಸಮೀಕ್ಷೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಹಲವು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆಯು ಇಂದು ನಡೆಯಲಿದೆ.
ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬೆಳವಣಿಗೆ, ಆರ್ಥಿಕ ಸ್ಥಿತಿಗತಿ ಕುರಿತ ದತ್ತಾಂಶ ದಾಖಲಿಸಲು ರಾಜ್ಯ ಸರ್ಕಾರವು ಇಂದಿನಿಂದ ಜಾತಿ ಸಮೀಕ್ಷೆ ಆರಂಭಿಸಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಸಲಿದೆ.
ಈ ಮಧ್ಯೆ, ಜಾತಿಗಣತಿ ಗೊಂದಲ ಸೃಷ್ಟಿಸಿದ್ದು, ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ. ಹಾಗಾಗಿ ನ್ಯಾಯಾಲಯ ನೀಡುವ ಆದೇಶ ತೀವ್ರ ಕುತೂಹಲ ಕೆರಳಿಸಿದೆ.
ಯಾರೆಲ್ಲಾ ರಿಟ್ ಸಲ್ಲಿಸಿದ್ದಾರೆ?
ಸರ್ಕಾರದ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ಇಂದೇ ವಿಚಾರಣೆ ನಡೆಸಲಿದೆ.
ಅರ್ಜಿದಾರರ ವಾದವೇನು?
1948ರ ಜನಗಣತಿ ಕಾಯಿದೆ ಮತ್ತು ಸಂವಿಧಾನದ ಏಳನೇ ಅನುಸೂಚಿಯಲ್ಲಿರುವ ಕೇಂದ್ರ ಸರ್ಕಾರದ ಪಟ್ಟಿಗಳಲ್ಲಿ 69ನೇ ವಿಷಯವನ್ನಾಗಿ ಗಣತಿಯನ್ನು ನಮೂದು ಮಾಡಲಾಗಿದೆ. ಆ ಪ್ರಕಾರ ಗಣತಿ ವಿಷಯವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಲಿದ್ದು, ಇಂತಹ ಜಾತಿ ಗಣತಿ ಸಮೀಕ್ಷೆ ನಡೆಸಲು ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯು ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಿರುವಾಗ ದಲಿತರ ಸಮೀಕ್ಷೆಯನ್ನು ಈ ಆಯೋಗವೇ ನಡೆಸಲು ಹೇಗೆ ಸಾಧ್ಯ? ಇದಲ್ಲದೆ ಪರಿಶಿಷ್ಟ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಸೇರಿದಂತೆ ಇತರೆ 331 ಜಾತಿಯವರಿಗೆ ಪ್ರತ್ಯೇಕ ಕಾಲಂ ಮಾಡಿರುವುದೇಕೆ ಎಂಬುದೂ ಸೇರಿದಂತೆ ಇತರೆ ಪ್ರಶ್ನೆಗಳನ್ನು ಎತ್ತಲಾಗಿದೆ.
ರಾಜ್ಯ ಸರ್ಕಾರದ ವಾದವೇನು?
ನಾವು ಕೇಂದ್ರ ಸರ್ಕಾರಕ್ಕಿರುವ ಹಕ್ಕಾದ ಜನಗಣತಿಯನ್ನು ನಡೆಸುತ್ತಿಲ್ಲ. ಬದಲಾಗಿ ನಮ್ಮ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಬಗ್ಗೆ ಅರಿಯಲು ನಮ್ಮ ವ್ಯಾಪ್ತಿಯಲ್ಲಿ ಮಾತ್ರ ಜಾತಿ ಸಮೀಕ್ಷೆ ನಡೆಸುತ್ತಿದ್ದೇವೆ. ನಮ್ಮ ಜನರ ಶ್ರೇಯೋಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಲು ಈ ಜಾತಿ ಸಮೀಕ್ಷೆಯ ಅಂಶಗಳು ಪೂರಕವಾಗಿರುತ್ತವೆ. ಹಾಗಾಗಿ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಎಂದು ವಾದ ಮಂಡಿಸುತ್ತಿದೆ.
ತೀರ್ಪಿನ ಬಗ್ಗೆ ಕುತೂಹಲ
ಸಮೀಕ್ಷೆಯ ಜವಾಬ್ದಾರಿಯನ್ನು ಹಿಂದುಳಿದ ವರ್ಗಗಳ ಆಯೋಗ ವಹಿಸಿಕೊಂಡಿದೆ. ಆದರೆ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿ ಬಗ್ಗೆ ಗಮನ ಕೊಡಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗಗಳು ಸಾಂವಿಧಾನ ಬದ್ಧವಾಗಿಯೇ ರಚನೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಿರುವಾಗ ನ್ಯಾಯಾಲಯವು ಯಾವ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡುತ್ತದೆಯೋ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.