
ಜಾತಿ ಸಮೀಕ್ಷೆ ನಾಳೆ ಮುಕ್ತಾಯ | ನ.10ರವರೆಗೆ ಆನ್‌ಲೈನ್ ನೋಂದಣಿಗೆ ಅವಕಾಶ
ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶುಕ್ರವಾರಕ್ಕೆ ಕೊನೆಯಾಗಲಿದ್ದು, ಆನ್‌ಲೈನ್ ಮೂಲಕ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಲು ನ.10ರವರೆಗೆ ಕಾಲಾವಕಾಶ ವಿಸ್ತರಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ನಾಳೆಗೆ (ಶುಕ್ರವಾರ) ಕೊನೆಯಾಗಲಿದೆ. ಆದರೆ, ಆನ್‌ಲೈನ್ ಮೂಲಕ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವವರಿಗೆ ನ.10ರವರೆಗೆ ಕಾಲಾವಕಾಶ ನೀಡಲಾಗಿದೆ.
ಗಣತಿದಾರರು ಮನೆಗೆ ಬಂದಾಗ ಇಲ್ಲದಿದ್ದರೆ ಅಥವಾ ನೆಟ್‌ವರ್ಕ್ ಸಮಸ್ಯೆಗಳಿಂದ ಸಮೀಕ್ಷೆಯಾಗದಿದ್ದಲ್ಲಿ ನಾಗರಿಕರು ತಮ್ಮ ಮನೆಯಿಂದಲೇ ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಹಿತಿ ಭರ್ತಿ ಮಾಡಬಹುದು. ಇದು ಸಮೀಕ್ಷೆಯಲ್ಲಿ ಭಾಗವಹಿಸಲು ಅತ್ಯಂತ ಸರಳ ಮತ್ತು ಅನುಕೂಲಕರ ಮಾರ್ಗವಾಗಿದೆ. ಆನ್‌ಲೈನ್‌ನಲ್ಲಿ ಭರ್ತಿ ಮಾಡುವವರು https://kscbcselfdeclaration.karnataka.gov.in ಮೂಲಕ ಸಲ್ಲಿಸಬಹುದಾಗಿದೆ.
ಸಮೀಕ್ಷೆಯ ಉದ್ದೇಶ ರಾಜ್ಯದ ಜನಸಂಖ್ಯೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಸರ್ಕಾರದ ಹಿಂದುಳಿದ ವರ್ಗ ನೀತಿಗಳಿಗೆ ಆಧಾರ ಒದಗಿಸುವುದಾಗಿದೆ. ಸಮೀಕ್ಷೆಯಲ್ಲಿ ಇನ್ನೂ ಪಾಲ್ಗೊಳ್ಳದ ನಾಗರಿಕರು ನಿಗದಿತ ಪೋರ್ಟಲ್‌ನಲ್ಲಿ ನ.10ರೊಳಗಾಗಿ ತಮ್ಮ ಮಾಹಿತಿಯನ್ನು ತಿಳಿಸುವಂತೆ ಎಂದು ಹಿಂದುಳಿದ ವರ್ಗಗಳ ಆಯೋಗವು ತಿಳಿಸಿದೆ
ಅನ್‌ಲೈನ್‌ಲ್ಲಿ ಭರ್ತಿ ಮಾಡುವ ವಿಧಾನ:
* https://kscbcselfdeclaration.karnataka.gov.in ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಅಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
* ನಾಗರಿಕ ಅಥವಾ ಸಿಟಿಜನ್ ಎಂದು ನಮೂದು ಮಾಡಬೇಕು.
* ಮೊಬೈಲ್ ನಂಬರ್ ನಮೂದಿಸಿ, ಓಟಿಪಿ ಪಡೆಯಬೇಕು
* ಹೊಸ ಸಮೀಕ್ಷೆ ಪ್ರಾರಂಭಿಸಿ ಅಥವಾ ಸ್ಟಾರ್ಟ್ ನ್ಯೂ ಸರ್ವೇ ಬಿಗಿನ್ ಮೇಲೆ ಕ್ಲಿಕ್ ಮಾಡಬೇಕು.
* ಯುಎಚ್‌ಐಡಿ ನಂಬರ್ ನಮೂದಿಸಿ ಮತ್ತು ವೇರಿಫೈ ಮೇಲೆ ಕ್ಲಿಕ್ ಮಾಡಿ ಮಾಹಿತಿ ಭರ್ತಿ ಮಾಡಬೇಕು.
* ಯುಎಚ್‌ಐಡಿ ನಂಬರ್ ಇಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಎಚ್‌ಐಡಿ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ವಿದ್ಯುತ್ ಐಡಿ ನಂಬರ್ ನಮೂದಿಸಬೇಕು.
* ಸಮೀಕ್ಷೆಯಲ್ಲಿ ಭಾಗವಹಿಸುವ ವ್ಯಕ್ತಿಯ ಫೋಟೊ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.
* ರೇಷನ್ ಕಾರ್ಡ್ ಇದ್ದರೆ ಅದರ ನಂಬರ್ ನಮೂದಿಸಿ ಸಬ್‌ಮಿಟ್ ಆರ್‌ಸಿ ಇನ್ಫೋ ಮೇಲೆ ಕ್ಲಿಕ್ ಮಾಡಿ ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.
* ರೇಷನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ನಂಬರ್ ಹಾಕಬೇಕು. ಓಟಿಪಿ ಬಳಸಿ ಮುಂದುವರಿಯಬೇಕು. ಇಲ್ಲವೇ ಫೇಸ್ ಕ್ಯಾಪ್ಚರ್ ಆಗಿದ್ದರೆ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಕ್ಯೂಆರ್ ಕೋಡ್ ಆನ್ ಸ್ಕ್ಯಾನ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಕಿ ನಂತರ ಸ್ಕ್ಯಾನ್ ಕ್ಯುಆರ್ ಮೇಲೆ ಕ್ಲಿಕ್ ಮಾಡಿ ಫೇಸ್ ಕ್ಯಾಪ್ಚರ್ ಅನ್ನು ಪೂರ್ಣಗೊಳಿಸಬೇಕು.
* ಆಧಾರ್ ನಂಬರ್ ಬಳಸಿದ್ದರೆ, ಅದರಲ್ಲಿನ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ. ಪ್ರತಿಯೊಂದಕ್ಕೂ ಓಟಿಪಿ ಬಳಸಬೇಕಾಗುತ್ತದೆ. ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರನ್ನೊಳಗೊಂಡು ಸಮೀಕ್ಷೆಯ ಪ್ರಶ್ನಾವಳಿಗೆ ಮಾಹಿತಿ ನೀಡಿ ಭರ್ತಿ ಮಾಡಬೇಕು
* ಪ್ರಶ್ನಾವಳಿ ಭರ್ತಿ ಮಾಡಿದ ನಂತರ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
* ಸ್ವಯಂ ಘೋಷಣೆ ದಾಖಲೆ ಸಲ್ಲಿಸಬೇಕು. ಇದನ್ನು ಬಿಳಿ ಹಾಳೆಯಲ್ಲಿ'ನಾನು ಈ ಸಮೀಕ್ಷೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದೇನೆ ಮತ್ತು ನೀಡಿರುವ ಎಲ್ಲ ಮಾಹಿತಿಯು ನಿಜ ಮತ್ತು ಸರಿಯಾಗಿದೆ' ಎಂದು ಬರೆದು ಸಹಿ ಮಾಡಬೇಕು. ಇದನ್ನು ಮೊಬೈಲ್‌ನಲ್ಲಿ ಪಡೆದು ಅಪ್‌ಲೋಡ್ ಮಾಡಬೇಕು.
ಶುಕ್ರವಾರದವರೆಗೆ ಸಮೀಕ್ಷೆ ವಿಸ್ತರಣೆಯಾಗಿತ್ತು
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಶುಕ್ರವಾರದವರೆಗೆ ವಿಸ್ತರಣೆ ಮಾಡಲಾಗಿತ್ತು. ಸೆ.22 ರಂದು (ಜಿಬಿಎ ಪ್ರದೇಶವನ್ನು ಹೊರತುಪಡಿಸಿ) ಪ್ರಾರಂಭವಾದ ಸಮೀಕ್ಷೆಯು ಅ.7 ರಂದು ಕೊನೆಗೊಳ್ಳಬೇಕಾಗಿತ್ತು. ಆದರೆ, ಆ ದಿನಾಂಕವನ್ನು ಸಹ ವಿಸ್ತರಿಸಿ ಅ.19 ರವರೆಗೆ ನೀಡಲಾಗಿತ್ತು. ಸಂಪೂರ್ಣಗೊಳ್ಳದ ಕಾರಣ ಶುಕ್ರವಾರದವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ವಿಸ್ತರಣೆಗೆ ಸರ್ಕಾರ ತೀರ್ಮಾನಿಸಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಮಾಹಿತಿ ನೀಡುವುದಕ್ಕೆ ಮಾತ್ರ ಅವಕಾಶ ಒದಗಿಸಿದೆ.

