ಜಾತಿ ಗಣತಿ ಜತೆ ʼನಾಸ್ತಿಕರ ಗಣತಿʼಗೆ ಮುಂದಾದ ಸರ್ಕಾರ!, ದೇವರ ನಂಬದವರ ಲೆಕ್ಕ ಗಣತಿಯಲ್ಲಿ ಪಕ್ಕಾ!
x

ಜಾತಿ ಗಣತಿ ಜತೆ ʼನಾಸ್ತಿಕರ ಗಣತಿʼಗೆ ಮುಂದಾದ ಸರ್ಕಾರ!, ದೇವರ ನಂಬದವರ ಲೆಕ್ಕ ಗಣತಿಯಲ್ಲಿ ಪಕ್ಕಾ!

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಬೃಹತ್ ಸಮೀಕ್ಷೆಗೆ ರಾಜ್ಯ ಸರ್ಕಾರವು 420 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ.


Click the Play button to hear this message in audio format

ರಾಜ್ಯದಲ್ಲಿ ಜಾತಿ, ಧರ್ಮಗಳ ಲೆಕ್ಕಾಚಾರದ ನಡುವೆ, ಇದೇ ಮೊದಲ ಬಾರಿಗೆ ದೇವರು ಮತ್ತು ಧರ್ಮದ ಅಸ್ತಿತ್ವವನ್ನು ನಂಬದ 'ನಾಸ್ತಿಕ'ರ ಸಂಖ್ಯೆಯನ್ನು ಅಧಿಕೃತವಾಗಿ ಲೆಕ್ಕ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ), 'ನಾಸ್ತಿಕ' ಎಂಬ ಹೊಸ ವರ್ಗವನ್ನು ಸೇರ್ಪಡೆಗೊಳಿಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿರುವ ನಾಸ್ತಿಕರ ನಿಖರ ಸಂಖ್ಯೆಯನ್ನು ಪಡೆಯಲು ಸರ್ಕಾರ ತೀರ್ಮಾನಿಸಿದೆ.

ಸಾಂಪ್ರದಾಯಿಕವಾಗಿ ಜಾತಿ ಮತ್ತು ಧರ್ಮದ ಚೌಕಟ್ಟಿನಲ್ಲೇ ಸೀಮಿತವಾಗಿದ್ದ ಗಣತಿ ಪ್ರಕ್ರಿಯೆಯಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದು ಹೇಳಲಾಗುತ್ತಿದೆ. ವ್ಯಕ್ತಿಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮೀರಿ, ತಮ್ಮ ವೈಚಾರಿಕ ನಿಲುವನ್ನು ದಾಖಲಿಸಲು ಈ ಹೊಸ ಆಯ್ಕೆಯು ಅವಕಾಶ ಕಲ್ಪಿಸಿದೆ.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಬೃಹತ್ ಸಮೀಕ್ಷೆಗೆ ರಾಜ್ಯ ಸರ್ಕಾರವು 420 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುವುದು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ಈ ಗಣತಿಯ ಮುಖ್ಯ ಉದ್ದೇಶ.

ರಾಜ್ಯದಲ್ಲಿ ಈ ಹಿಂದೆ ನಡೆಸಲಾಗಿದ್ದ ಜಾತಿ ಗಣತಿಯು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಹೀಗಾಗಿ, ಈ ಬಾರಿ ಹೆಚ್ಚು ವೈಜ್ಞಾನಿಕ ಮತ್ತು ಪಾರದರ್ಶಕವಾಗಿ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತೀರ್ಮಾನಿಸಿದೆ. 'ನಾಸ್ತಿಕ' ವರ್ಗದ ಸೇರ್ಪಡೆಯು, ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಈ ನಿರ್ಧಾರವು, ವ್ಯಕ್ತಿಗಳ ವೈಯಕ್ತಿಕ ನಂಬಿಕೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ನಿಟ್ಟಿನಲ್ಲಿ ಒಂದು ಪ್ರಗತಿಪರ ಹೆಜ್ಜೆ ಎಂದು ಕೆಲವರು ಶ್ಲಾಘಿಸಿದರೆ, ಧಾರ್ಮಿಕವಾಗಿ ಸೂಕ್ಷ್ಮವಾಗಿರುವ ಸಮಾಜದಲ್ಲಿ ಇದು ಅನಗತ್ಯ ಗೊಂದಲವನ್ನು ಸೃಷ್ಟಿಸಬಹುದು ಎಂದು ಇನ್ನು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಮನೋಬಲ ಇರುವವರು ನಾಸ್ತಿಕರು?

ನಾಸ್ತಿಕರ ಸಮೀಕ್ಷೆ ಅಗತ್ಯವಿದೆ. ಅವರ ಐಡೆಂಟಿಟಿ, ನನ್ನ ನಾಸ್ತಿಕತೆಯ ಬಗ್ಗೆ ಅಭಿಮಾನವಿದೆ. ಧಾರ್ಮಿಕ ಸಂಘರ್ಷದ ಹೊರತಾಗಿದೆ, ಜಾತಿವಾರು ವಿಷಯಗಳಿಂದ ಹೊರತಾಗಿ ಪ್ರಗತಿಪರತೆಗೆ ಕಾರಣವಾಗಲಿದೆ. ಮನೋಬಲ ಇರುವವರು ಸ್ವಾಭಾವಿಕವಾಗಿ ನಾಸ್ತಿಕರಾಗಬಹುದು. ದೇವರ ಮೇಲೆ ಅವಲಂಬಿತರಲ್ಲ, ತಮ್ಮ ಒಳಿತು-ಕೆಡಕುಗಳುಗೆ ತಾವೇ ಜವಾಬ್ದಾರಿ ಹೊರುತ್ತಾರೆ. ಮಾನಸಿಕವಾಗಿ ಸಶಕ್ತರು ನಾಸ್ತಿಕರು., ಕೆಲವರು ದ್ವಂದ್ವದಲ್ಲಿಇರುತ್ತಾರೆ., ಈ ಈತಿ ಗುರುತಿಸಿಕೊಳ್ಳುವುದು ಅಗತ್ಯವಿದೆ. ನಾಸ್ತಕತೆ ಘೋಷಿಸಿಕೊಳ್ಳುವವರು ಧರ್ಮ ನಿರಪೇಕ್ಷಿತರಾಗಿರುತ್ತಾರೆ. ಸರ್ಕಾರದ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಸಾಂಪ್ರಾದಾಯಿಕ ಚೌಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವವರು ಮೌಢ್ಯ, ಮರ್ಯಾದೆ ಹತ್ಯೆಯಂತಹ ಗಂಭೀರ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಇಂತಹ ಸಮಸ್ಯೆಗಳಿಗೆ ನಾಸ್ತಿಕತೆಯಿಂದ ಪರಿಹಾರ ಕಂಡುಕೊಳ್ಳಬಹುದು. ನಾವು ನಾಸ್ತಿಕರು ಅಲ್ಪಸಂಖ್ಯಾತರು, ನಮಗೂ ಹಕ್ಕುಗಳು ಹಾಗೂ ರಕ್ಷಣೆ ಬೇಕಾಗಿದೆ ಎಂದು ಪ್ರಗತಿಪರ ಲೇಖಕ ಯೋಗೇಶ್ ಮಾಸ್ಟರ್ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ನಾಸ್ತಿಕ ಬದಲು ಮತಾತೀತ ಎಂದಿರಬೇಕಿತ್ತು!

ಯಾರಿಗೆ ಧರ್ಮ ಹಾಗೂ ದೇವರ ಮೇಲೆ ನಂಬಿಕೆ ಇಲ್ಲವೋ ಅವರು ನಾಸ್ತಿಕರು. ಅವರು ಧರ್ಮಾತೀತರು ಕೂಡ. ಸಂವಿಧಾನ ಧಾರ್ಮಿಕ ಹಕ್ಕಿನ ಜತೆಗೆ ಆಯ್ಕೆ ಹಕ್ಕನ್ನೂ ನೀಡಿದೆ. ಧರ್ಮದ ಕಾಲಂನಲ್ಲಿ ನಾಸ್ತಿಕ ಬದಲು ಧರ್ಮರಹಿತ, ಧರ್ಮಾತೀತ ಅಥವಾ ಮತಾತೀತ ಎಂದು ಉಲ್ಲೇಖಿಸಬೇಕಿತ್ತು ಎಂದು ಪ್ರಗತಿ ಪರ ಸಾಹಿತಿ ಬಂಜಗೆರೆ ಜಯಪ್ರಕಾಶ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ತಮಿಳುನಾಡು ಹೈಕೋರ್ಟ್‌ ಇತ್ತೀಚೆಗೆ ಜಾತಿರಹಿತ ಪ್ರಮಾಣ ಪತ್ರ ನೀಡುವ ಕುರಿತು ಮಹತ್ವದ ತೀರ್ಪು ನೀಡಿದೆ. ವ್ಯಕ್ತಿಯು ತಾನು ಯಾವುದೇ ಜಾರಿಗೆ ಸೇರದ ಕಾರಣ ಜಾತಿರಹಿತ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರದಲ್ಲಿ ಜಾತಿ ಪ್ರಮಾಣ ಪತ್ರ ವಿತರಣೆಗೆ ಮಾತ್ರ ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಈ ತೀರ್ಪು ನೀಡಿತ್ತು. ಹಾಗಾಗಿ ಜಾತಿ ಹೇಳಿಕೊಳ್ಳುವುದು ಅವರವರ ವೈಯಕ್ತಿಕ ವಿಚಾರ, ಸಂವಿಧಾನವೇ ಧಾರ್ಮಿಕ ಆಯ್ಕೆ ಸ್ವಾತಂತ್ರ ನೀಡಿರುವಾಗ ನಾಸ್ತಿಕ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ನಾಸ್ತಿಕರ ಗಣತಿಯು ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಮಾನ್ಯತೆ ನೀಡುವಂತಿದೆ.ಈ ವಿಷಯದಲ್ಲಿ ಸರ್ಕಾರ ನಿರ್ಲಿಪ್ತ ಧೋರಣೆ ತಳೆದಿದೆ. ಕಾಲ ಕಾಲಕ್ಕೆ ಮಾನವ ಹಕ್ಕುಗಳು, ಬದಲಾಗುವ ಅಭಿಪ್ರಾಯಗಳಿಗೆ ಮಾನ್ಯತೆ ನೀಡಬೇಕು, ಪ್ರಜಾಪ್ರಭುತ್ವದಲ್ಲಿ ಇಂತಹ ಎಲ್ಲ ಬದಲಾವಣೆಗೂ ಅವಕಾಶವಿದೆ. ನಾಸ್ತಿಕರ ಗಣತಿ ಅವರವರ ನಂಬಿಕೆಯನ್ನು ಗೌರವಿಸಿದಂತಿದೆ ಎಂದು ಅಭಿಪ್ರಾಯಪಟ್ಟರು.

ಗೊಂದಲ ಸೃಷ್ಟಿಸುವ ಯತ್ನ ಎಂದ ಬ್ರಾಹ್ಮಣ ಮಹಾಸಭಾ

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಧರ್ಮದ ಕಾಲಂನಲ್ಲಿ ನಾಸ್ತಿಕ ಪದ ಬಳಸಿರುವುದು ಗೊಂದಲ ಸೃಷ್ಟಿಸುವ ಪ್ರಯತ್ನ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾರನಹಳ್ಳಿ ಅಶೋಕ್‌ ಆರೋಪಿಸಿದರು.

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಹುಟ್ಟಿನಿಂದ ಬರುವುದು ಜಾತಿ, ಬೆಳೆಯುತ್ತಾ ನಾಸ್ತಿಕನಾದರೂ ಯಾವುದಾದರೂ ಒಂದು ಜಾತಿಗೆ ಸೇರಿರಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ಧರ್ಮದ ಕಲಂನಲ್ಲಿ ನಾಸ್ತಿಕ ಪದ ಬಳಸಿರುವುದೇ ತಪ್ಪು ಎಂದು ಹೇಳಿದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮೂಲ ಉದ್ದೇಶ ಉಪಜಾತಿಗಳನ್ನು ಪತ್ತೆ ಮಾಡುವುದಕ್ಕಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ, ಹೊಸ ಉಪ ಜಾತಿಗಳನ್ನು ಸೇರಿಸುವ ಮೂಲಕ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಉಪಜಾತಿ ವರ್ಗೀಕರಣಕ್ಕೂ, ಸರ್ಕಾರದ ಸೌಲಭ್ಯ ಹಂಚಿಕೆಗೂ ಎತ್ತಣಿಂದೆತ್ತ ಸಂಬಂಧ, ಇಲ್ಲಿ ಜಾತಿಗೂ, ನಂಬಿಕೆಗೂ ಯಾವುದೇ ಸಂಬಂಧವಿಲ್ಲ. ಕೇವಲ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ. ಕೆಲ ಪ್ರಗತಿಪರರು ನಾಸ್ತಿಕ ಪದ ಬಳಕೆಗೆ ಸಮ್ಮತಿ ಸೂಚಿಸಿರಬಹುದು. ಪಶ್ಚಿಮ ಬಂಗಾಳದಲ್ಲಿ ಬಹುತೇಕ ಎಡಪಂಥೀಯರು ಬ್ರಾಹ್ಮಣರು ಇರಲಿಲ್ಲವೇ ಎಂದು ಹೇಳಿದರು.

Read More
Next Story