Caste Census | Union of Matadhis calls for entry of Lingayat in religion column
x

ಸಾಂದರ್ಭಿಕ ಚಿತ್ರ

ಜಾತಿಗಣತಿ| ಧರ್ಮದ ಕಾಲಂನಲ್ಲಿ ʼಲಿಂಗಾಯತʼ ಎಂದೇ ನಮೂದಿಸುವಂತೆ ಮಠಾಧೀಶರ ಒಕ್ಕೂಟ ಕರೆ

ಜಾತಿ ಕಾಲಂನಲ್ಲಿ ನಿರ್ದಿಷ್ಟ ಕೋಡ್‌ ಸಂಖ್ಯೆ ಗುರುತಿಸಿ ಒಳಪಂಗಡವನ್ನು ಸ್ಪಷ್ಟವಾಗಿ ಬರೆಯಿರಿ, ಮೀಸಲಾತಿ ನೀಡಿಕೆಗೂ ಈ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಭಯಪಡದೆ ಸ್ಪಷ್ಟವಾಗಿ ಗಣತಿದಾರರಿಗೆ ಮಾಹಿತಿ ನೀಡಿ ಎಂದು ಕರೆ ನೀಡಲಾಗಿದೆ.


Click the Play button to hear this message in audio format

ಮುಂಬರುವ ಜಾತಿ ಗಣತಿಯಲ್ಲಿ ಲಿಂಗಾಯತರು ‘ಹಿಂದೂ’ ಎಂದು ನಮೂದಿಸದೆ ಧರ್ಮ ಕಾಲಂನಲ್ಲಿ ಲಿಂಗಾಯತ ಎಂದೇ ನಮೂದಿಸುವಂತೆ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಕರೆಕೊಟ್ಟಿದೆ.

ಮಾಧ್ಯಮಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಒಕ್ಕೂಟದ ಅಧ್ಯಕ್ಷ ಬಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ‘ಈಚೆಗೆ ಹೊರಬಂದಿದ್ದ ಒಂದು ವರದಿ ಪ್ರಕಾರ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿರುವುದನ್ನು ಗಮನಿಸಿದ್ದೇವೆ. ವಾಸ್ತವವಾಗಿ ರಾಜ್ಯದಲ್ಲಿ ಸುಮಾರು 2ಕೋಟಿಯಷ್ಟು ಲಿಂಗಾಯತರು ಇದ್ದಾರೆ. ಆದರೆ, ಕೇವಲ 70-72ಲಕ್ಷ ಜನಸಂಖ್ಯೆ ಇರುವುದಾಗಿ ಹೇಳಲಾಗಿದೆ. ವಿವಿಧ ಪಂಗಡಗಳನ್ನು ಲಿಂಗಾಯತರಿಂದ ಬೇರ್ಪಡಿಸುವ ಕೆಲಸ ನಡೆದಿದೆ. ಇದರಿಂದ ಲಿಂಗಾಯತ ಧರ್ಮಿಯರಿಗೆ ಹಾನಿಯಾಗಿದೆ. ಹೀಗಾಗಿ ನಮ್ಮವರು ಗಣತಿ ವೇಳೆ ಯಾವುದೇ ಸಂದಿಗ್ಧಕ್ಕೆ ಒಳಗಾಗಬೇಡಿ. ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಆಯ್ಕೆ ಇಲ್ಲ. ಬದಲಾಗಿ 11ನೇ ಕಾಲಂನಲ್ಲಿ ‘ಇತರೆ’ ನೀಡಲಾಗಿದ್ದು, ಅದರಲ್ಲಿ ಲಿಂಗಾಯತ ಎಂದೇ ಬರೆಸಿ’ ಎಂದು ಹೇಳಿದರು.

‘ಕೆಲವರು ತಪ್ಪು ಸಂದೇಶ ನೀಡುತ್ತಿದ್ದು, ವೀರಶೈವ ಲಿಂಗಾಯತ, ಲಿಂಗಾಯತ ವೀರಶೈವ, ಹಿಂದೂ ಎಂದು ಬರೆಸಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ಲಿಂಗಾಯತರ ಸ್ಪಷ್ಟ ಸಂಖ್ಯೆ ತಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಮುದಾಯದವರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು’ ಎಂದು ಹೇಳಿದರು.

ಜಾತಿ ಕಾಲಂನಲ್ಲಿ ನಿರ್ದಿಷ್ಟ ಕೋಡ್‌ ಸಂಖ್ಯೆ ಗುರುತಿಸಿ ಒಳಪಂಗಡವನ್ನು ಸ್ಪಷ್ಟವಾಗಿ ಬರೆಯಿರಿ. ಮೀಸಲಾತಿ ನೀಡಿಕೆಗೂ ಈ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಭಯಪಡದೆ ಸ್ಪಷ್ಟವಾಗಿ ಗಣತಿದಾರರಿಗೆ ಮಾಹಿತಿ ನೀಡಿ. ಅವರು ಬರೆದುಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದರು.

ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿ, ಕೂಡಲಸಂಗಮ ಬಸವಧರ್ಮಪೀಠದ ಗಂಗಾಮಾತಾಜಿ, ನೆಲಮಂಗಲದ ಸಿದ್ಧಲಿಂಗಸ್ವಾಮೀಜಿ, ಗುರುವಣ್ಣದೇವರಮಠದ ನಂಜುಡಂಪ್ಪ ಸ್ವಾಮೀಜಿ ಸೇರಿ ಇತರ ಸ್ವಾಮೀಜಿಗಳು ಇದ್ದರು.

Read More
Next Story