ಜಾತಿ ಸಮೀಕ್ಷೆ ಗೊಂದಲವಿಲ್ಲ, ನಿಗದಿತ ದಿನಾಂಕಕ್ಕೆ ನಡೆಯಲಿದೆ: ಸಚಿವ ತಂಗಡಗಿ ಸ್ಪಷ್ಟನೆ
x

ಶಿವರಾಜ್ ತಂಗಡಗಿ

ಜಾತಿ ಸಮೀಕ್ಷೆ ಗೊಂದಲವಿಲ್ಲ, ನಿಗದಿತ ದಿನಾಂಕಕ್ಕೆ ನಡೆಯಲಿದೆ: ಸಚಿವ ತಂಗಡಗಿ ಸ್ಪಷ್ಟನೆ

ನಮ್ಮಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಒಂದು ತಿಂಗಳ ಮುಂಚಿತವಾಗಿಯೇ ಸಮೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದ್ದೇವೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳು ನಡೆದಿವೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತು ಯಾವುದೇ ಗೊಂದಲಗಳಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಸಮೀಕ್ಷೆಯು ನಿಗದಿತ ವೇಳಾಪಟ್ಟಿಯಂತೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಮೀಕ್ಷೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಒಂದು ತಿಂಗಳ ಮುಂಚಿತವಾಗಿಯೇ ದಿನಾಂಕವನ್ನು ಪ್ರಕಟಿಸಿದ್ದೇವೆ. ಅಕ್ಟೋಬರ್‌ನಲ್ಲಿ ಸಮೀಕ್ಷೆ ಪೂರ್ಣಗೊಂಡು, ಡಿಸೆಂಬರ್‌ನಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಸರ್ಕಾರ ಖಂಡಿತವಾಗಿ ಜಾರಿಗೊಳಿಸಲಿದೆ," ಎಂದು ಭರವಸೆ ನೀಡಿದರು.

ಇದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

"ಇದು ಕೇವಲ ಜಾತಿ ಸಮೀಕ್ಷೆಯಲ್ಲ, ಬದಲಾಗಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದೆ. ಸಮಾಜದಲ್ಲಿ ಹಿಂದುಳಿದವರಿಗೆ ಮತ್ತು ತೊಂದರೆಗೊಳಗಾದವರಿಗೆ ನ್ಯಾಯ ಒದಗಿಸುವುದೇ ಇದರ ಮುಖ್ಯ ಉದ್ದೇಶ. ಸುಮಾರು 95 ವರ್ಷಗಳ ನಂತರ, ಅಂದರೆ 1932-33ರ ಬಳಿಕ ಇಂತಹ ಮಹತ್ವದ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ," ಎಂದು ಅವರು ಸಮೀಕ್ಷೆಯ ಮಹತ್ವವನ್ನು ವಿವರಿಸಿದರು.

ವಿವಾದಗಳಿಗೆ ಸ್ಪಷ್ಟನೆ

"ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಕುರುಬ ಎಂಬ ಕಾಲಂ ಸೃಷ್ಟಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಅಥವಾ ಆಯೋಗದವರು ಯಾರೂ ಈ ರೀತಿ ಬರೆಸಿಲ್ಲ. ಕಾಂತರಾಜು ಆಯೋಗದವರು ಸಮೀಕ್ಷೆ ನಡೆಸುವ ವೇಳೆ ಸಾರ್ವಜನಿಕರೇ ಸ್ವಇಚ್ಛೆಯಿಂದ ತಮ್ಮ ಸಮುದಾಯದ ಹೆಸರುಗಳನ್ನು ಈ ರೀತಿ ಬರೆಸಿದ್ದಾರೆ. ಜನರ ಅಭಿಪ್ರಾಯವನ್ನು ಆಯೋಗ ಪಟ್ಟಿಯಲ್ಲಿ ಸೇರಿಸಿದೆ," ಎಂದು ಸ್ಪಷ್ಟಪಡಿಸಿದರು. ಸಚಿವ ಸಂಪುಟದಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಅವರು, "ನಮ್ಮಲ್ಲಿ ಯಾವುದೇ ಅಪಸ್ವರಗಳಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಕೇವಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದಿದೆಯಷ್ಟೇ. ಇದಕ್ಕೆ ನೀವು ವಿರೋಧ ಎನ್ನುತ್ತೀರಿ, ನಾವು ಚರ್ಚೆ ಎನ್ನುತ್ತೇವೆ," ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, "ಬಿಜೆಪಿಯವರಿಗೆ ಜಾತಿ, ಮಸೀದಿ ಕಂಡರೆ ಮಾತ್ರ ಪ್ರೀತಿ. ಅವರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೇವಲ ಧರ್ಮ, ಜಾತಿಗಳ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ದೇಶ ಅವನತಿಯತ್ತ ಸಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಳಾಗಿದ್ದೇ ಧರ್ಮದ ಚರ್ಚೆಯಿಂದ," ಎಂದು ವಾಗ್ದಾಳಿ ನಡೆಸಿದರು.

ಸಾರ್ವಜನಿಕರಲ್ಲಿ ಮನವಿ

"ನಾವು ಪ್ರಣಾಳಿಕೆಯಲ್ಲಿ ಸಮೀಕ್ಷೆಯ ಬಗ್ಗೆ ಘೋಷಣೆ ಮಾಡಿದ್ದೆವು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ," ಎಂದರು. ಕೊನೆಯಲ್ಲಿ, ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, "ಸಮೀಕ್ಷೆಗಾಗಿ ನಿಮ್ಮ ಮನೆಗೆ ಬರುವ ಶಿಕ್ಷಕರಿಗೆ ಯಾವುದೇ ಒತ್ತಡಕ್ಕೆ ಒಳಗಾಗದೆ, ದಯಮಾಡಿ ಸೂಕ್ತ ಮಾಹಿತಿ ನೀಡಿ ಸಹಕರಿಸಿ," ಎಂದು ಕೋರಿದರು.

Read More
Next Story