Caste Census: ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ ಘೋಷಣೆ
ʼಮುಂದಿನ ಸಂಪುಟ ಸಭೆʼಯಲ್ಲಿ ಜಾತಿ ಗಣತಿ ವರದಿ ಮಂಡನೆ ಸಂಬಂಧ ವಿಷಯ ಮಂಡಿಸುವುದಾಗಿ ಸಿಎಂ ಹೇಳಿದ್ದಾರೆ. ಮುಂದಿನ ವಾರ ಅಂದರೆ ಜ. 23 ರಂದು ವಿಷಯ ಮಂಡನೆ ಮಾಡಲಿರುವುದು ಬಹುತೇಕ ಖಚಿತ ಎನ್ನಲಾಗಿದೆ.
ಹಲವಾರು ತಿಂಗಳುಗಳಿಂದ ಪ್ರಸ್ತಾಪಕ್ಕೆ ಬರುತ್ತಲೇ ಇರುವ ವಿವಾದಿತ ಜಾತಿ ಗಣತಿ ಮಂಡನೆ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಮಂಡನೆ ಮಾಡಲಾಗುವುದು ಎಂದು ಹೇಳಿಕೆ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ʼಮುಂದಿನ ಸಂಪುಟ ಸಭೆʼಯಲ್ಲಿ ಜಾತಿ ಗಣತಿ ವರದಿ ಮಂಡನೆ ಸಂಬಂಧ ವಿಷಯ ಮಂಡಿಸುವುದಾಗಿ ಹೇಳಿದ್ದಾರೆ.
ಇದರಿಂದ, ಜಾತಿ ಗಣತಿ ವರದಿ ಸಂಬಂಧ ಮುಂದಿನ ವಾರ ಅಂದರೆ ಜ. 23 ರಂದು ವಿಷಯ ಮಂಡನೆ ಮಾಡಲಿರುವುದು ಬಹುತೇಕ ಖಚಿತ ಎನ್ನಲಾಗಿದೆ.
ನಾಳೆ (ಜ. 16) ನಡೆಯಲಿರುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿ ಸಂಬಂಧ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಲಾಗಿತ್ತು. ಈ ಸಂಬಂಧ ಸ್ಪಷ್ಟನೆ ನೀಡಿದರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಸಂಪುಟಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. "ನಾಳೆ ನಡೆಯುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಜಾತಿಗಣತಿ ವರದಿಯಲ್ಲಿರುವ ಅಂಕಿಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ ಎಂದೂ ಅವರು ಹೇಳಿದ್ದಾರೆ. ಅವರು ಬುಧವಾರ ನವದೆಹಲಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕನ್ನಡ ಭವನದ ನೂತನ ಕಟ್ಟಡವನ್ನು ವೀಕ್ಷಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡುತ್ತಿದ್ದರು.
ಏಐಸಿಸಿ ಕಚೇರಿ ಉದ್ಘಾಟನೆ
ಏಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಭಾಷಣ ಉತ್ತಮವಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ ಕಟ್ಟಡ , ಇಂದು ಸುಸಜ್ಜಿತ ಕಟ್ಟಡವಾಗಿ ಉದ್ಘಾಟನೆಗೊಂಡಿದೆ ಎಂದು ತಿಳಿಸಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ
ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಅವರು ಆಯೋಧ್ಯೆಯ ರಾಮಮಂದಿರ ಪ್ರಾರಂಭವಾದ ದಿನ ದೇಶಕ್ಕೆ ನಿಜಅರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಮೋಹನ್ ಭಾಗವತರ ಹೇಳಿಕೆ ಸರಿಯಾದುದಲ್ಲ ಎಂದರು.
ಹಂತ ಹಂತವಾಗಿ ಬಾಕಿ ಪಾವತಿ
ಕಿಯೋನಿಕ್ಸ್ ಅಸೋಸಿಯೇಷನ್ ಅವರು ಬಾಕಿ ಇರುವ ಬಿಲ್ಲುಗಳು ಪಾವತಿಯಾಗದಿರುವ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದಿನ ಬಿಜೆಪಿ ಸರ್ಕಾರದವರು ದೊಡ್ಡ ಮೊತ್ತದ ಬಿಲ್ಲುಗಳನ್ನು ಪಾವತಿ ಮಾಡದೇ ಬಾಕಿ ಉಳಿಸಿದ್ದಾರೆ. ಈ ಬಿಲ್ಲುಗಳನ್ನು ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.