ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ: ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚನೆ ಸಾಧ್ಯತೆ
x

ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ: ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚನೆ ಸಾಧ್ಯತೆ


ಬಹು ನಿರೀಕ್ಷಿತ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

ಆದರೆ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವರದಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ, ವರದಿಯ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ನೇಮಕ ಮಾಡಿ ತತಕ್ಷಣಕ್ಕೆ ಜಾರಿ ಮಾಡುವ ಒತ್ತಡದಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ.

ಗುರುವಾರ ಮಧ್ಯಾಹ್ನ ಪೂರ್ವನಿಗದಿಯಂತೆ ಎರಡು ಬಾಕ್ಸ್ ತುಂಬಿದ ವರದಿಯ ಪ್ರತಿಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಜಯಪ್ರಕಾಶ್ ಹೆಗ್ಡೆ ಅವರು, ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ವರದಿಯ ಪ್ರತಿಯನ್ನು ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಆ ಮೂಲಕ ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ವರದಿ ಕೊನೆಗೂ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾದಂತಾಗಿದೆ.

ವರದಿಯ ಒಟ್ಟು 13 ಪ್ರತಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಬೃಹತ್ ಸಂಪುಟಗಳನ್ನು ಒಳಗೊಂಡ ಈ ಪ್ರತಿಗಳಲ್ಲಿ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಮಾಹಿತಿ ಮತ್ತು ಅಂಕಿಅಂಶ ಅಡಕ ಮಾಡಲಾಗಿದೆ.

ಸಂಜೆ ಮಹತ್ವದ ಸಂಪುಟ ಸಭೆ

ಗುರುವಾರ ಸಂಜೆ ಸಂಪುಟ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವರದಿ ಕುರಿತ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಹುತೇಕ ವರದಿಯ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ನೇಮಕ ಮಾಡಲು ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಆ ಮೂಲಕ ಭೌತಿಕವಾಗಿ ಸ್ವೀಕರಿಸಿರುವ ವರದಿಯ ಅಂಶಗಳು ಮತ್ತು ಶಿಫಾರಸುಗಳ ಕುರಿತ ಅಧ್ಯಯನದ ನೆಪದಲ್ಲಿ ಸರ್ಕಾರ, ವರದಿ ಸ್ವೀಕರಿಸಿದ್ದೇವೆ ಎಂಬುದನ್ನೇ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಪ್ರಮುಖವಾಗಿ ಬಿಂಬಿಸಿ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳನ್ನು ಸೆಳೆಯುವ ತಂತ್ರ ಹೂಡಲೂಬಹುದು. ಕೆಲವೇ ದಿನಗಳಲ್ಲಿ ಜಾರಿಗೆ ಬರುವ ಲೋಕಸಭಾ ಚುನಾವಣಾ ನೀತಿಸಂಹಿತೆಯ ಮರೆಯಲ್ಲಿ ಸರ್ಕಾರ ತತಕ್ಷಣಕ್ಕೆ ವರದಿಯ ಜಾರಿಯ ಒತ್ತಡದಿಂದಲೂ ಪಾರಾಗುವ ಅವಕಾಶ ಕೂಡ ಇದೆ.

2015ರಲ್ಲಿ ವರದಿಗೆ ಸೂಚನೆ

2015ರಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿಂದುಳಿದ ವರ್ಗಗಳು ಮತ್ತು ಇತರೆ ಸಮುದಾಯಗಳ ಮೀಸಲಾತಿ, ಅನುದಾನ ಹಂಚಿಕೆ ಮತ್ತು ಸರ್ಕಾರದ ಯೋಜನೆಗಳ ಪಾಲು ನಿರ್ಧರಿಸಲು ಪೂರಕವಾಗಿ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವಂತೆ ಹಿಂದುಳಿದ ವರ್ಗಗಳ ಅಂದಿನ ಅಧ್ಯಕ್ಷ ಎಚ್ ಕಾಂತರಾಜ್ ಅವರಿಗೆ ಸೂಚಿಸಿತ್ತು.

ಆ ಸೂಚನೆಯಂತೆ ಆಯೋಗ, ಸಾವಿರಾರು ಸಿಬ್ಬಂದಿಯನ್ನು ನೇಮಿಸಿ ಮನೆಮನೆಗೆ ತೆರಳಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿತ್ತು. ಆದರೆ, ಆಯೋಗ ತಯಾರಿಸಿದ ವರದಿ ಸಲ್ಲಿಕೆಯ ವಿಷಯದಲ್ಲಿ ಆಯೋಗ ಮತ್ತು ಸರ್ಕಾರದ ನಡುವೆ ಗೊಂದಲ ಉಂಟಾಗಿತ್ತು. ಆಯೋಗದ ಕಾರ್ಯದರ್ಶಿಯ ಸಹಿ ಇಲ್ಲದೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, 2018ರಲ್ಲಿ ಇದ್ದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿರಲಿಲ್ಲ.

ಕಳೆದ ವರ್ಷ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರವಧಿಯನ್ನು ವಿಸ್ತರಿಸಿ, ಹಿಂದಿನ ಜಾತಿ ಜನಗಣತಿ ವರದಿಯನ್ನು ಅಗತ್ಯ ವಿವರ ಮತ್ತು ಮಾಹಿತಿಯೊಂದಿಗೆ ಪುನರ್ ಸಲ್ಲಿಸಲು ಸರ್ಕಾರ ಸೂಚನೆ ನೀಡಿತ್ತು.

ಆ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸೆಕೆಂಡರಿ ಸೋರ್ಸ್ ಡೇಟಾ ಸೇರಿದಂತೆ ಅಗತ್ಯ ಮಾಹಿತಿ ಮತ್ತು ಅಂಕಿಅಂಶ ಸೇರಿಸಿ ಇದೀಗ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ವರದಿಯ ಪರ- ವಿರುದ್ಧ ಹೋರಾಟ

ಸುಮಾರು 158 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದ್ದ ವರದಿ ಕಳೆದ ಏಳೆಂಟು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವರದಿಯ ಪರ ಮತ್ತು ವಿರುದ್ಧ ಹಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ವಾಗ್ವಾದ ನಡೆಸಿದ್ದರು. ಅದೇ ಹೊತ್ತಿಗೆ, ಲಿಂಗಾಯತ ಮತ್ತು ಒಕ್ಕಲಿಗ ಮತ್ತಿತರ ಕೆಲವು ಪ್ರಬಲ ಸಮುದಾಯಗಳು ವರದಿ ಸ್ವೀಕರಿಸದಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸಿದ್ದವು.

ಹಾಗೇ ಸಾಕಷ್ಟು ಅತಿ ಹಿಂದುಳಿದ ಸಮುದಾಯಗಳ ಒಕ್ಕೂಟದಂತಹ ಹಲವು ಸಂಘಟನೆಗಳು ವರದಿ ಸ್ವೀಕರಿಸಿ ಜಾರಿ ಮಾಡುವಂತೆ ಆಗ್ರಹಿಸಿ ಹೋರಾಟವನ್ನೂ ನಡೆಸಿದ್ದವು. ಅಲ್ಲದೆ, ವರದಿ ಅಧಿಕೃತವಾಗಿ ಸ್ವೀಕೃತವಾಗಿ ಅದರ ಶಿಫಾರಸುಗಳು ಜಾರಿಯಾದಲ್ಲಿ ರಾಜ್ಯದ ರಾಜಕೀಯ ಮೀಸಲಾತಿ ಮತ್ತು ಅನುದಾನ ಹಂಚಿಕೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.

Read More
Next Story