ಬಹುನಿರೀಕ್ಷಿತ ಜಾತಿ ಗಣತಿ ವರದಿ ಇಂದು ಸಲ್ಲಿಕೆ
ಬಹು ನಿರೀಕ್ಷೆಯ ಜಾತಿವಾರು ಜನಗಣತಿ ಅಥವಾ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಗುರುವಾರ ಸರ್ಕಾರಕ್ಕೆ ಸಲ್ಲಿಸಲಿದೆ.
೨೦೧೫ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿತ್ತು. ಆದರೆ, ಆಯೋಗದ ಅಂದಿನ ಅಧ್ಯಕ್ಷ ಎಚ್ ಕಾಂತರಾಜ್ ನೇತೃತ್ವದ ಸಮಿತಿ ತಯಾರಿಸಿದ ವರದಿ ಸಲ್ಲಿಕೆಯ ವಿಷಯದಲ್ಲಿ ಆಯೋಗ ಮತ್ತು ಸರ್ಕಾರದ ನಡುವೆ ಗೊಂದಲ ಉಂಟಾಗಿತ್ತು. ಆಯೋಗದ ಕಾರ್ಯದರ್ಶಿಯ ಸಹಿ ಇಲ್ಲದೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿರಲಿಲ್ಲ.
ಕಳೆದ ವರ್ಷ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರವಧಿಯನ್ನು ವಿಸ್ತರಿಸಿ, ಹಿಂದಿನ ಜಾತಿ ಜನಗಣತಿ ವರದಿಯನ್ನು ಅಗತ್ಯ ವಿವರ ಮತ್ತು ಮಾಹಿತಿಯೊಂದಿಗೆ ಪುನರ್ ಸಲ್ಲಿಸಲು ಸೂಚನೆ ನೀಡಲಾಗಿತ್ತು.
ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರವಧಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಗುರುವಾರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹೆಗ್ಡೆ, ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳಲಾಗಿದೆ. ಗುರುವಾರ ಸಂಜೆಯೊಳಗೆ ಅವರು ನೀಡಿದ ಸಮಯದಲ್ಲಿ ವರದಿ ಮತ್ತು ಪೂರಕ ದಾಖಲೆಗಳನ್ನು ಒಳಗೊಂಡ ಪೆಟ್ಟಿಗೆಯನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಸುಮಾರು ೧೬೦ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದ್ದ ವರದಿ ವಿಷಯ ಕಳೆದ ಏಳೆಂಟು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವರದಿಯ ಪರ ಮತ್ತು ವಿರುದ್ಧ ಹಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ವಾಗ್ವಾದ ನಡೆಸಿದ್ದಾರೆ. ಅದೇ ಹೊತ್ತಿಗೆ ಸಾಕಷ್ಟು ಹಿಂದುಳಿದ ಸಮುದಾಯಗಳು ವರದಿಯ ಜಾರಿಗೆ ಆಗ್ರಹಿಸಿ ಹೋರಾಟವನ್ನೂ ನಡೆಸಿವೆ. ಅಲ್ಲದೆ, ವರದಿ ಅಧಿಕೃತವಾಗಿ ಸ್ವೀಕೃತವಾಗಿ ಅದರ ಶಿಫಾರಸುಗಳು ಜಾರಿಯಾದಲ್ಲಿ ರಾಜ್ಯದ ರಾಜಕೀಯ ಮೀಸಲಾತಿ ಮತ್ತು ಅನುದಾನ ಹಂಚಿಕೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆ ಎಲ್ಲಾ ಹಿನ್ನೆಲೆಯಲ್ಲಿ ಜಾತಿ ಜನಗಣತಿ ವರದಿ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದು, ವರದಿ ಸಲ್ಲಿಕೆಯಾದ ಕ್ಷಣದಿಂದಲೇ ಅದರ ಕುರಿತ ಚರ್ಚೆಗಳು ಗರಿಗೆದರಲಿವೆ.