Mysore MUDA Scam | ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ವರದಿ ನಾಟಕ: ಕುಮಾರಸ್ವಾಮಿ ಆರೋಪ
x

Mysore MUDA Scam | ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ವರದಿ ನಾಟಕ: ಕುಮಾರಸ್ವಾಮಿ ಆರೋಪ

ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡಲಾಗುತ್ತಿದೆ. ಈಗ ಮುಡಾ ಹಗರಣದ ಮೇಲಿರುವ ಜನರ ಗಮನ ಬೇರೆಡೆ ತಿರುಗಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ ಎಂಬುದು ಕುಮಾರಸ್ವಾಮಿ ಆರೋಪ.


ಮುಡಾ ಹಗರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ರಾಜ್ಯ ಸರ್ಕಾರ ನಾಟಕವಾಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸೋಮವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡಲಾಗುತ್ತಿದೆ. ಈಗ ಮುಡಾ ಹಗರಣದ ಮೇಲಿರುವ ಜನರ ಗಮನ ಬೇರೆಡೆ ತಿರುಗಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ ಎಂದು ದೂರಿದರು.

ಚುನಾವಣೆಗೆ ಮೊದಲೇ ವರದಿ ಕೊಟ್ಟಿದ್ದರು

ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಆ ವರದಿಗೆ 10 ವರ್ಷ ಆಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿತ್ತು. ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲವೇಕೆ? ಎಂದು ತೀಕ್ಷ್ಣವಾಗಿ ಕೇಳಿದರು.

ಮುಡಾ ಅಕ್ರಮದಿಂದ ರಕ್ಷಣೆ ಪಡೆಯಲು ಯತ್ನ

ಈಗ ಜಾತಿಗಣತಿ ವರದಿ ಇಟ್ಟುಕೊಂಡು ಮುಡಾ ಅಕ್ರಮದಿಂದ ರಕ್ಷಣೆ ಪಡೆಯುವ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ. ಹಳೆಯ ವರದಿ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನುಕೂಲ ಆಗುವುದಿಲ್ಲ ಎಂದು ಹೇಳಿದರು.

ಜಾತಿ ಗಣತಿ ವರದಿ ಇಟ್ಟುಕೊಂಡು ಚುನಾವಣೆಗೆ ಹೋಗಿ

ಜಾತಿಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆಗೆ ಹೋಗಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಕುಮಾರಸ್ವಾಮಿ ಅವರು; ಸರ್ಕಾರ ಹೋದರೆ ಹೋಗಲಿ ಎನ್ನುವ ಬದಲಿಗೆ ಮುಕ್ತವಾಗಿ ಘೋಷಣೆ ಮಾಡಿ ಚುನಾವಣೆ ನಡೆಯಲಿ ಎಂದರು.

ಸರ್ಕಾರ ಹೋದರೆ ಹೋಗಲಿ, ಜಾತಿಗಣತಿ ಜಾರಿ ಮಾಡಿ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಾತಿಗಣತಿ ವಿಷಯ ಇಟ್ಟುಕೊಂಡು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ ನೋಡೋಣ. ಹರಿಪ್ರಸಾದ್ ಅವರು ಈ ರೀತಿ ಹೇಳುವುದು ಏನಿದೆ? ಅದರ ಬದಲು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬಹುದಲ್ಲವೆ? ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ಜಾತಿಗಣತಿ ವರದಿ ಇಟ್ಟುಕೊಂಡು ನಾವು ಅನುಷ್ಠಾನ ಮಾಡುತ್ತೇವೆ, ನಮಗೆ ಇನ್ನೊಂದು ಅವಕಾಶ ಕೊಡಿ ಅಂತ ಜನರ ಮುಂದೆ ಹೋಗಬಹುದು. ದೆಹಲಿಯಲ್ಲಿ ರಾಹುಲ್ ಗಾಂಧಿ ಒಂದು ಹೇಳುತ್ತಾರೆ, ಇಲ್ಲಿ ಇವರು ಇನ್ನೊಂದು ಹೇಳುತ್ತಾರೆ. ಸರ್ಕಾರದಲ್ಲಿ ಆಗಿರುವ ಹಲವಾರು ತಪ್ಪುಗಳನ್ನು ಮುಚ್ಚಿಕೊಳ್ಳೋದಕ್ಕೆ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಇದೆಲ್ಲವನ್ನು ಜನರ ಮನಸಿನಿಂದ ಡೈವರ್ಟ್ ಮಾಡೋದಕ್ಕೆ ಈ ಡ್ರಾಮಾಗಳು ಪ್ರಾರಂಭ ಮಾಡಿದ್ದಾರೆ ಎಂದು ದೂರಿದರು.

Read More
Next Story