Federal Explainer | ಜಾತಿ ಗಣತಿ ವರದಿ ಏನು? ಹೇಗೆ ನಡೆಯಿತು? ಯಾಕೆ ಅಗತ್ಯ?
x

Federal Explainer | ಜಾತಿ ಗಣತಿ ವರದಿ ಏನು? ಹೇಗೆ ನಡೆಯಿತು? ಯಾಕೆ ಅಗತ್ಯ?


2015ರಿಂದ ಸುಮಾರು ಒಂಭತ್ತು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮತ್ತು ದೇಶದಲ್ಲಿಯೇ ಮಾದರಿಯಾದ ಜಾತಿ ಗಣತಿ ಅಥವಾ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಕೊನೆಗೂ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸಲಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಪ್ರತಿಗಳನ್ನು ಸಲ್ಲಿಸುವ ಮೂಲಕ ವರದಿ ಸಲ್ಲಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಹಾಗಾಗಿ ವರದಿ ಈಗ ಸರ್ಕಾರದ ಕೈ ಸೇರಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಭಾರೀ ಬದಲಾವಣೆಗೆ ಕಾರಣವಾಗುವ ಅಂಶಗಳನ್ನು ಮತ್ತು ಶಿಫಾರಸುಗಳನ್ನು ಒಳಗೊಂಡಿದೆ ಎನ್ನಲಾಗುತ್ತಿರುವ ಈ ಜಾತಿ ಗಣತಿ ವರದಿಯ ಕುರಿತು ನಿಮಗೆ ಗೊತ್ತಿರಬೇಕಾದ ವಿವರಗಳು ಇಲ್ಲಿವೆ.

ಜಾತಿ ಗಣತಿ ವರದಿ ಎಂದರೇನು?

ಜಾತಿ ಗಣತಿ ವರದಿ ಎಂದು ಸಾಮಾನ್ಯವಾಗಿ ಕರೆಯಲಾಗುತ್ತಿದೆಯಾದರೂ, ವಾಸ್ತವವಾಗಿ ಇದು ಜಾತಿ ಜನಗಣತಿಯಲ್ಲ. ಬದಲಾಗಿ ಇದು ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಅಂಕಿಅಂಶ- ಮಾಹಿತಿ ಸಹಿತ ಸಮಗ್ರ ವರದಿ. ಆ ಕಾರಣಕ್ಕಾಗಿಯೇ ಇದನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದೇ ಅಧಿಕೃತವಾಗಿ ಹೆಸರಿಸಲಾಗಿದೆ.

ವರದಿಯಲ್ಲಿ ಏನಿದೆ? ಯಾಕೆ ಅದು ವಿಶೇಷ?

ಹಲವು ಸಂಪುಟಗಳ ಒಟ್ಟು 13 ಪ್ರತಿಗಳನ್ನು ಒಳಗೊಂಡಿರುವ ಜಾತಿ ಗಣತಿ ವರದಿಯಲ್ಲಿ ಪ್ರಮುಖವಾಗಿ ರಾಜ್ಯದ ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ಮಾಹಿತಿ ಮತ್ತು ಅಂಕಿಅಂಶಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿ, ಜಾತಿವಾರು ಜನಸಂಖ್ಯಾವಿವರ, ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿ, ಪಂಗಡ ಹೊರತುಪಡಿಸಿ), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿಗಳು), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಪಂಗಡಗಳು), ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶ ಅಧ್ಯಯನ ವರದಿ ಮತ್ತಿತರ ಅಂಶಗಳನ್ನು ವರದಿ ಒಳಗೊಂಡಿದೆ.

ವಿಶೇಷವಾಗಿ ಜಾತಿ ಸಮುದಾಯಗಳ ಜನಸಂಖ್ಯೆ ವಿವರಗಳ ಜೊತೆಗೆ ಸಮುದಾಯಗಳ ರಾಜಕೀಯ ಸ್ಥಾನಮಾನ, ಅವಕಾಶ, ಉದ್ಯೋಗ ಸ್ಥಿತಿಗತಿ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ಮಾಹಿತಿಯನ್ನು ಕೂಡ ಈ ವರದಿ ಒಳಗೊಂಡಿದೆ.

ಸಮೀಕ್ಷೆ ನಡೆದಿದ್ದು ಹೇಗೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಳಗೊಂಡಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾ ಕಾರ್ಯಕ್ಕಾಗಿ 1,26,928 ಗಣತಿ ಬ್ಲಾಕ್ಗಳನ್ನು ಮಾಡಲಾಗಿತ್ತು. ಆ ಬ್ಲಾಕ್ಗಳಲ್ಲಿ ಸಮೀಕ್ಷೆಗಾಗಿ 2588 ಮಾಸ್ಟರ್ ಟ್ರೈನರ್ಗಳು, 22,190 ಮೇಲ್ವಿಚಾರಕರು, ಹಾಗೂ 1,33,140 ಗಣತಿಕಾರರನ್ನು ನೇಮಿಸಲಾಗಿತ್ತು. ಒಟ್ಟು 1,75,288 ಅಧಿಕಾರಿ ಮತ್ತು ಸಿಬ್ಬಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 55 ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಮನೆ ಮನೆ ಸಮೀಕ್ಷೆ ಮೂಲಕ ಗಣತಿ ಕಾರ್ಯ ಮಾಡಲಾಗಿತ್ತು.

ಈ ವರದಿಯ ಅಗತ್ಯವೇನಿತ್ತು? ಉದ್ದೇಶವೇನು?

ರಾಜ್ಯದ ವಿವಿಧ ಸಮುದಾಯಗಳಿಗೆ, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳಲ್ಲಿ ಆಯಾ ಸಮುದಾಯಗಳ ಜನಸಂಖ್ಯೆ ಮತ್ತು ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಅವರಿಗೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು. ಅದರಲ್ಲೂ ರಾಜಕೀಯ ಮೀಸಲಾತಿ ಮತ್ತು ಶೈಕ್ಷಣಿಕ ಮೀಸಲಾತಿಯ ವಿಷಯದಲ್ಲಿ ಸಣ್ಣಪುಟ್ಟ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಆಯಾ ಪ್ರವರ್ಗದಲ್ಲಿರುವ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯ ಸಮುದಾಯಗಳೇ ಹೆಚ್ಚಿನ ಅವಕಾಶಗಳನ್ನು ಕಬಳಿಸುತ್ತಿವೆ. ಹಾಗಾಗಿ ಎಲ್ಲಾ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅದಕ್ಕೆ ತಕ್ಕಂತೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯ ಮತ್ತು ಅವಕಾಶಗಳ ಹಂಚಿಕೆಯಾಗಬೇಕು ಎಂಬ ಕೂಗಿಗೆ ಸ್ಪಂದಿಸಿ ಸರ್ಕಾರ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ವರದಿ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿತ್ತು.

ಸದ್ಯ ಯಾವ ಮಾನದಂಡದ ಮೇಲೆ ಮೀಸಲಾತಿ- ಸೌಲಭ್ಯ ನೀಡಲಾಗುತ್ತಿದೆ?

ಸದ್ಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ- ರಾಜಕೀಯ ಮೀಸಲಾತಿ ಮತ್ತು ಸರ್ಕಾರದ ಉದ್ಯೋಗ ಹಾಗೂ ಸೌಲಭ್ಯಗಳನ್ನು ನೀಡಲು ಅವಲಂಬಿಸಿರುವುದು 1931ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ನಡೆಸಿದ ಜಾತಿ ಜನಗಣತಿಯ ವರದಿಯನ್ನೇ. ಸುಮಾರು ನೂರು ವರ್ಷಗಳ ಹಿಂದಿನ ವರದಿಯ ಜಾತಿವಾರು ಜನಸಂಖ್ಯೆಯನ್ನು ಪ್ರೊಜೆಕ್ಟೆಡ್ ಪಾಪ್ಯುಲೇಷನ್ ಮಾದರಿಯಲ್ಲಿ ಅಂದಾಜಿಸಿ ಅದರ ಆಧಾರದ ಮೇಲೆ ಜಾತಿವಾರು ಉದ್ಯೋಗ, ಶೈಕ್ಷಣಿಕ ಮತ್ತು ರಾಜಕೀಯ ಮೀಸಲಾತಿ, ಅನುದಾನ ಹಂಚಿಕೆ, ನೀತಿ- ಯೋಜನೆ ರೂಪಿಸಲಾಗುತ್ತಿದೆ.

ಆದರೆ, ಇದು ತೀರಾ ಅವೈಜ್ಞಾನಿಕ ಮತ್ತು ಅನ್ಯಾಯದ ಕ್ರಮ. ಹಾಗಾಗಿಯೇ ವೈಜ್ಞಾನಿಕ ಸಮೀಕ್ಷೆ ಮತ್ತು ನಿಖರ ಅಂಕಿಅಂಶಗಳ ಆಧಾರದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಗತ್ಯವಿದೆ ಎಂದು ವಿವಿಧ ಹಿಂದುಳಿದ ಸಮುದಾಯಗಳು ಒತ್ತಾಯಿಸಿದ್ದವು.

Read More
Next Story