Caste Census | ಜಾತಿ ಗಣತಿಗೆ ವಿರೋಧ: ಒಕ್ಕಲಿಗರ ಜತೆ ಲಿಂಗಾಯತರೂ ಹೋರಾಟದಲ್ಲಿ ಭಾಗಿ; ರಾಜ್ಯ ಬಂದ್‌ ಬೆದರಿಕೆ
x

Caste Census | ಜಾತಿ ಗಣತಿಗೆ ವಿರೋಧ: ಒಕ್ಕಲಿಗರ ಜತೆ ಲಿಂಗಾಯತರೂ ಹೋರಾಟದಲ್ಲಿ ಭಾಗಿ; ರಾಜ್ಯ ಬಂದ್‌ ಬೆದರಿಕೆ

ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮಂಡಿಸಿರುವ ಜಾತಿ ಗಣತಿಯನ್ನು ವಿರೋಧಿಸಲು ಒಕ್ಕಲಿಗರು ಮತ್ತು ಲಿಂಗಾಯತರು ಒಗ್ಗಟ್ಟಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ. ಸರ್ಕಾರ, ಈ ವರದಿಯನ್ನು ಹಿಂಪಡೆಯದಿದ್ದರೆ ಸರ್ಕಾರ ಉಳಿಯುವುದಿಲ್ಲ ಎಂದೂ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.


ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮಂಡಿಸಿರುವ ಜಾತಿ ಗಣತಿ (ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ)ಯನ್ನು ವಿರೋಧಿಸಲು ರಾಜ್ಯದ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ಒಗ್ಗಟ್ಟಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ.

ಜತೆಗೆ , ಜಾತಿ ಗಣತಿ ವಿರೋಧಿಸುತ್ತಿರುವ ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣ ಸೇರಿದಂತೆ ಇತರ ಸಮುದಾಯಗಳ ಜತೆ ಸೇರಿ ಕರ್ನಾಟಕ ಬಂದ್‌ ನಡೆಸಲೂ ಉದ್ದೇಶಿಸಲಾಗಿದೆ. ಒಂದು ವೇಳೆ ಸರ್ಕಾರ, ಈ ವರದಿಯನ್ನು ಹಿಂಪಡೆಯದೇ ಇದ್ದಲ್ಲಿ ಈ ಸರ್ಕಾರ ಉಳಿಯುವುದಿಲ್ಲ ಎಂದೂ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.

ಮಂಗಳವಾರ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ತುರ್ತು ಸಭೆ ನಡೆಸಿದ್ದಾರೆ. ಬಳಿಕ ಮಾಧ್ಯಮಕ್ಕೆ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಅವರು , "ರಾಜ್ಯ ಸರ್ಕಾರ ಕಾಂತರಾಜ ಆಯೋಗ ವರದಿ ಜಾರಿಗೆ ಮುಂದಾಗಿದೆ. ಅದರ ವಿರುದ್ಧ ಒಕ್ಕಲಿಗ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಭೆ ಮಾಡಿದ್ದೇವೆ," ಎಂದು ಹೇಳಿದರು.

"ಕಾಂತರಾಜ ಆಯೋಗ ವರದಿ ಆರೋಗ್ಯಕರ ಅಂಶಗಳನ್ನು ಹೊಂದಿಲ್ಲ. ವರದಿ ಸಿದ್ಧಪಡಿಸಿದ 10 ವರ್ಷದ ಬಳಿಕ ವರದಿ ಬಿಡುಗಡೆ ಆಗಿದೆ. ಒಕ್ಕಲಿಗ ಸಮುದಾಯದ ಜನಾಂಗದಲ್ಲಿ 60 ಲಕ್ಷ ಜನರನ್ನ ತೋರಿಸಿದೆ. ಇದು ನಮಗೆ ಮಾಡ್ತಿರೋ ಅನ್ಯಾಯ. ಪ್ರತೀ ತಾಲ್ಲೂಕಿನಲ್ಲಿ ಚುನಾವಣೆ ಸಂಧರ್ಭದಲ್ಲಿ ಸಮೀಕ್ಷೆ ನೋಡಿದ್ದೇವೆ‌. ಜಾತಿವಾರು ಸಮುದಾಯ ಲೆಕ್ಕ ನೋಡಿದಾಗ ನಿಜವಾದ ಲೆಕ್ಕ ಸಿಗಲಿದೆ," ಎಂದು ಅವರು ಅಭಿಪ್ರಾಯಪಟ್ಟರು.

"ರಾಜ್ಯದ 224 ಕ್ಷೇತ್ರದಲ್ಲಿ ಕೇವಲ 61ಲಕ್ಷ ಮಾತ್ರ ಇರಲು ಸಾಧ್ಯವೇ ಇಲ್ಲ . ಇಂತಹ ಒಕ್ಕಲಿಗ ಇಂತ ಸಮುದಾಯವನ್ನು ಆರನೇ ಸ್ಥಾನಕ್ಕೆ ಇಳಿಸಲಾಗಿದೆ. ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗ ವರದಿ ಮಾಡಿದಾಗ ಇದ್ದ ಸಂಖ್ಯೆಯ ಹತ್ತರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯವಿದೆ. ಮೀಸಲಾತಿ ಯಾರಿಗೆ ಹೆಚ್ಚು ಕೊಡಿಸಬೇಕು ಅನ್ನೋ ದೃಷ್ಟಿಯಿಂದ ಸರ್ಕಾರ ಈ ರೀತಿ ಮಾಡಿದೆ," ಎಂದು ಕೆಂಚಪ್ಪ ಗೌಡ ಆರೋಪಿಸಿದರು.

"ನಮ್ಮ ಜನಾಂಗ, ವೀರಶೈವ ಲಿಂಗಾಯತರು, ಇತರೆ ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಹೋರಾಟ ಮಾಡಲಿದ್ದೇವೆ. ಕರ್ನಾಟಕದಾದ್ಯಂತ ಹೋರಾಟ ಮಾಡಿ, ರಾಜ್ಯ ಬಂದ್ ಮಾಡಬೇಕಿದೆ. ಲಿಂಗಾಯತರು, ವೀರಶೈವರು, ಬ್ರಾಹ್ಮಣರು ಎಲ್ಲರೂ ಕೂಡ ಜತೆಯಾಗಿ ಹೋರಾಟ ಮಾಡೋಣ ಎಂದು ನಮ್ಮನ್ನು ಸಂಪರ್ಕಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದು, ಯಾರಿಗೆಲ್ಲಾ ಅನ್ಯಾಯ ಆಗಿದೆ ಅವರ ಸಭೆ ಕರೆದು ಹೋರಾಟಕ್ಕೆ ಕರೆ ಕೊಡ್ತೇವೆ," ಎಂದು ಅವರು ಹೇಳಿದ್ದಾರೆ.

"ಈ ವರದಿಗೆ ನಮ್ಮ ವಿರೋಧ ಇದೆ. ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಹತ್ತು ವರ್ಷಕ್ಕೊಮ್ಮೆ ಸಮೀಕ್ಷೆ ಮಾಡಬೇಕು ಅಂತ ಕಾನೂನು ಇದೆ. ಸಮೀಕ್ಷೆ ಮಾಡುವಾಗ ಕೇಂದ್ರ ಸರ್ಕಾರ ಮಾಡಬೇಕು ಅಂತ‌ ನಿಯಮ ಇದೆ. ಜಾತಿ ಗಣತಿ ಮಾಡಲೇಬೇಕು ಅಂತಿದ್ರೆ ಮಾಡಿ. ನಮ್ಮದು ಯಾವುದೇ ವಿರೋಧ ಇಲ್ಲ. ಆದರೆ, ಆದ್ರೆ ಜಿಯೋ ಟ್ಯಾಗ್ ಮೂಲಕ ಮಾಡಬೇಕು," ಎಂದು ಒತ್ತಾಯಿಸಿದರು.

"ನಮ್ಮ ಸಮುದಾಯದ ಸ್ವಾಮೀಜಿಗಳ ಜೊತೆಯಲ್ಲಿ ಕೂಡ ಸಭೆ ನಡೆಸಲಿದ್ದೇವೆ. ಒಕ್ಕಲಿಗ ಶಾಸಕರು, ಸಚಿವರು ಯಾರೆಲ್ಲಾ ಇದ್ದಾರೆ ಅವರೂ ಹೋರಾಟ ಮಾಡಬೇಕು. ಒಕ್ಕಲಿಗ ಶಾಸಕರು, ಸಚಿವರು ಸಮುದಾಯದಿಂದ ಉಪಯೋಗ ಪಡೆದಿದ್ದಾರೆ. ಹಾಗಾಗಿ ನಮ್ಮ ಹೋರಾಟಕ್ಕೆ ಅವರೂ ಬರಬೇಕು, " ಎಂದು ಹೇಳಿದರು.

"ನಾವು ಸುಮ್ಮನೆ ಕೂರೋದಿಲ್ಲ. ಹೊಸದಾಗಿ ಸಮೀಕ್ಷೆ ಮಾಡಬೇಕು ಅಂತ ಆಗ್ರಹ ಮಾಡ್ತೀವಿ. ರಾಜ್ಯವೇ ಸ್ತಬ್ಧ ಆಗುವ ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ. ವೀರಶೈವ ಲಿಂಗಾಯತ ಸಮುದಾಯವನ್ನೂ ಹೋರಾಟಕ್ಕೆ ಆಹ್ವಾನಿಸುತ್ತೇವೆ. ಅವರೆಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ. ಯಾವಾಗ ಸಭೆ ಕರೆಯಲಾಗುವುದು ಎಂದು ಅವರು ನಮ್ಮಲ್ಲಿ ಮಾತುಕತಡೆ ನೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರತ್ಯೇಕ ಸಮೀಕ್ಷೆ

ಒಕ್ಕಲಿಗ ಸಂಘದ ವತಿಯಿಂದ ನಿಜವಾಗಿ ರಾಜ್ಯದಲ್ಲಿ ಎಷ್ಟು ಒಕ್ಕಲಿಗರಿದ್ದಾರೆಎ ಎಂದು ಪ್ರತ್ಯೇಕ ಸಮೀಕ್ಷೆ ಮಾಡುತ್ತೇವೆ. ಅದಕ್ಕಾಗಿ ಹೊಸ ಸಾಫ್ಟ್‌ವೇರ್‌ ತಯಾರು ಮಾಡುತ್ತೇವೆ. ಎಷ್ವೇ‌ ಖರ್ಚಾದರೂ ನಾವು ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಬು ಇದೇ ಸಂದರ್ಭದಲ್ಲಿ ಹೇಳಿದರು.

ಡಿ.ಕೆ. ಶಿವಕುಮಾರ್‌

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನಮ್ಮ ಸಮಾಜದ ಜತೆ ಸಭೆ ನಡೆಸಿದ್ದಾರೆ ಜಾತಿಗಣತಿಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಅವರು ಒಕ್ಕಲಿಗರ ಸಂಘದ ಜತೆ ಇದ್ದಾರೆ ಎಂದು ಸಂಘದ ಪದಾಧಿಕಾರಿ ಜಯಮುತ್ತು ಅವರು ಎಚ್ಚರಿಕೆ ನೀಡಿದ್ದಾರೆ. "ಯಾವುದೇ ಕಾರಣಕ್ಕೂ ಜಾತಿಗಣತಿ ಜರಿಗೆ ತರಬಾರದು. ಜಾರಿಗೆ ತಂದಿದ್ದೇ ಆದರೆ ಈ ಸರ್ಕಾರ ಉಳಿಯುವುದಿಲ್ಲ, " ಎಂದೂ ಅವರು ಹೇಳಿದ್ದಾರೆ.

Read More
Next Story