
Caste Census | ಪ್ರವರ್ಗ 2-ಎ ಯಿಂದ ಹೊಸ ಪ್ರವರ್ಗ ʼ1-ಬಿʼ ಗೆ ಕುರುಬರು ಶಿಫ್ಟ್; ʼ2-ಎʼ ಯಲ್ಲೇ ಉಳಿದ ಈಡಿಗರು
ಜಾತಿ ಸಮೀಕ್ಷೆಯಲ್ಲಿ ಪ್ರವರ್ಗ 1ಬಿಗೆ ಕುರುಬ ಹಾಗೂ ಅದರ ಉಪಜಾತಿಗಳನ್ನು ಸೇರಿಸಿರುವುದಕ್ಕೆ ತೀವ್ರ ಆಕ್ಷೇಪಗಳೂ ಕೇಳಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕುರುಬ ಸಮುದಾಯವರು ಎನ್ನುವುದು ಉಳಿದ ಸಮುದಾಯಗಳ ಆಕ್ಷೇಪಕ್ಕೆ ಕಾರಣವಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಕುರುಬ, ಮಡಿವಾಳ, ಕುಂಬಾರ ಮತ್ತಿತರ ಪ್ರವರ್ಗ- 2ಎ ದಲ್ಲಿದ್ದ ಜಾತಿಗಳು ಹಾಗೂ ಅವುಗಳ ಉಪಜಾತಿಗಳನ್ನು ʼಅತ್ಯಂತ ಹಿಂದುಳಿದʼ ಪ್ರವರ್ಗದಡಿ ಸೃಜಿಸಿರುವ 1ಬಿ ಗೆ ಸೇರಿಸಿ ವರ್ಗೀಕರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕುರುಬ ಸಮುದಾಯವರು ಎನ್ನುವುದು ಉಳಿದ ಸಮುದಾಯಗಳ ಆಕ್ಷೇಪಕ್ಕೆ ಕಾರಣವಾಗಿದೆ.
ಕೆಲ ವರ್ಷಗಳ ಹಿಂದೆ ಪ್ರಮುಖವಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಗೆ ಸೇರಿಸಬೇಕೆಂಬ ಹೋರಾಟವನ್ನು ನಡೆಸಲಾಗಿತ್ತು. ಈ ಸದ್ದಿಲ್ಲದೆ, ಜಾತಿ ಗಣತಿಯಲ್ಲಿ ಪ್ರವರ್ಗ- 2ಎ ದಲ್ಲಿ ಪ್ರಭುತ್ವ ಸಾಧಿಸಿದ್ದ ಕುರುಬ ಸಮೂದಾಯನ್ನು ಪ್ರವರ್ಗ 1 ಅನ್ನು ವಿಂಗಡಿಸಿ, ಪ್ರವರ್ಗ 1ಬಿಗೆ ಸೇರಿಸಿರುವುದು ಬಹಿರಂಗಗೊಂಡ ಜಾತಿಗಣತಿ ವರದಿಯಲ್ಲಿ ದಾಖಲಾಗಿದೆ. ಪ್ರವರ್ಗ 1ಎ ಯಲ್ಲಿ ಹಿಂದಿನಂತೆ ಅತಿ ಹಿಂದುಳಿದ ಜಾತಿಗಳನ್ನು ಯಥಾ ಪ್ರಕಾರ ಇರಿಸಲಾಗಿದೆ.
ವರ್ಗ- 2ಎ ಮೀಸಲಾತಿ ಸೌಲಭ್ಯಗಳನ್ನು ಪ್ರಮುಖ ಒಬಿಸಿ ಸಮುದಾಯಗಳಾದ ಕುರುಬ ಮತ್ತು ಈಡಿಗ ಸಮುದಾಯಗಳು ಪಡೆಯುತ್ತಿದ್ದವು ಹಾಗೂ ಇತರ ಸಮುದಾಯಗಳಾದ ಮಡಿವಾಳ, ಕುಂಬಾರ, ದೇವಾಡಿಗ ಮತ್ತಿತರ ಜಾತಿಗಳು ಮೀಸಲಾತಿ ಸೌಲಭ್ಯದಿಂದ ವಂಚಿತಗೊಂಡಿದ್ದವು ಎಂಬ ಆರೋಪಗಳಿದ್ದವು. ಈಗ, ಕುರುಬ, ಮಡಿವಾಳ, ಕುಂಬಾರ ಮತ್ತಿತರ ಜಾತಿಗಳನ್ನು ಪ್ರವರ್ಗ- 2ಎ ಯಿಂದ ಬೇರ್ಪಡಿಸಿ, ಪ್ರವರ್ಗ 1ಬಿ ಗೆ ಸೇರಿಸಲಾಗಿದೆ. ಹಾಗೆಯೇ ಕುರುಬರ ಬಳಿಕ ಹೆಚ್ಚು ಜನಸಂಖ್ಯೆ ಹೊಂದಿದ್ದ ಈಡಿಗ ಹಾಗೂ ಅದರ ಉಪ ಜಾತಿಗಳನ್ನು ಪ್ರವರ್ಗ- 2ಎ ಯಲ್ಲಿಯೇ ಇರಿಸಲಾಗಿದೆ. ಈಡಿಗ ಸಮೂದಾಯವೂ ಕೂಡಾ ತನ್ನನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಕ್ಕೆ ಸೇರಿಸಬೇಕೆಂದು ಹೋರಾಟ ನಡೆಸಿತ್ತು.
ಹಾಗಾಗಿ ಪ್ರವರ್ಗ- 2ಎ ಯ ಮೀಸಲಾತಿ ಪ್ರಮಾಣ ಶೇ 15ರಿಂದ ಶೇ 10ಕ್ಕೆ ಇಳಿಸಲಾಗಿದೆ. ಹಾಗೆಯೇ ಪ್ರವರ್ಗ ಪ್ರವರ್ಗ 1ಬಿ ಗೆ ಶೇ 12 ಮೀಸಲಾತಿ ಒದಗಿಸಿ ಶಿಫಾರಸು ಮಾಡಲಾಗಿದೆ. ಇದು ಪ್ರಮುಖ ಜಾತಿಗಳಾದ ಕುರುಬ ಮತ್ತು ಈಡಿಗರಿಗೆ ಇನ್ನೂ ಹೆಚ್ಚಿನ ಲಾಭ ಒದಗಿಸುತ್ತದೆ ಹಾಗೂ ಇತರ ಸಣ್ಣ ಜಾತಿಗಳಿಗೆ ಮೀಸಲಾತಿ ಪ್ರಮಾಣ ಕುಂಠಿತಗೊಳಿಸುತ್ತದೆ ಎಂಬ ಆರೋಪವೂ ಈಗ ಕೇಳಿಬಂದಿದೆ.
ಯಾರ್ಯಾರಿಗೆ ಏನೇನು ಮೀಸಲಾತಿ?
ಪ್ರವರ್ಗ- 2ಎ ಅಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದ ಪ್ರಬಲ ಸಮುದಾಯಗಳನ್ನು ಪ್ರವರ್ಗ 1ಬಿಗೆ ಸೇರಿಸಿದ್ದು, ಜನಸಂಖ್ಯೆ ಆಧರಿಸಿ ಮೀಸಲಾತಿ ಒದಗಿಸುವ ಪ್ರಯತ್ನವನ್ನು ಹಿಂದುಳಿದ ಆಯೋಗದ ವರದಿ ಮಾಡಿದೆ.
ಈ ಮೊದಲು ಪ್ರವರ್ಗ 1ರಲ್ಲಿ 95 ಜಾತಿಗಳು ಹಾಗೂ 387 ಉಪಜಾತಿಗಳಿದ್ದು, ಶೇ 4 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಆದರೆ, ಪ್ರತಿಯೊಂದು ಜಾತಿಗೂ ಜನಸಂಖ್ಯೆ ಆಧರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಸಲುವಾಗಿ ಪ್ರವರ್ಗ 1ನ್ನು ವರ್ಗೀಕರಿಸಲಾಗಿದೆ. ಅದರಂತೆ ಪ್ರವರ್ಗ 1ಎಗೆ ಶೇ 6 ಹಾಗೂ ಪ್ರವರ್ಗ 1ಬಿಗೆ ಶೇ 12 ರಷ್ಟು ಮೀಸಲಾತಿ ಸಹ ನೀಡಲಾಗಿದೆ.
ಪ್ರವರ್ಗ 1ಎ ಗುಂಪಿನಲ್ಲಿ 34,96,638 ಜನಸಂಖ್ಯೆ ಹೊಂದಿದೆ. ಗೊಂದಲಿ ಜಾತಿ 33,737, ಹೆಳವ ಸಮುದಾಯ 48,467, , ಗೊಲ್ಲ ಸಮುದಾಯ 4,42,524, ಕಾಡು ಗೊಲ್ಲರು 3,10,393 ಜನಸಂಖ್ಯೆ ಹೊಂದಿದೆ. ಬೆಸ್ತ ಸಮುದಾಯ 3,99,383 ಜನಸಂಖ್ಯೆ ಹೊಂದಿದ್ದರೆ, ಅಂಬಿಗರು 1,34,230, ಗಂಗಾಮತ 73,627, ಕಬ್ಬೇರ 58,289, ಕಬ್ಬಲಿಗ 3,88, 082, ಮೊಗವೀರ 1,21,478, ಉಪ್ಪಾರ ಸಮುದಾಯ 7,58,605, ಪಿಂಜಾರ 1.11 ಲಕ್ಷ, ಅಗಮುಡಿ 38,257 ಜನಸಂಖ್ಯೆ ಹೊಂದಿವೆ.
ಪ್ರವರ್ಗ 1ಬಿ ಯಲ್ಲಿ 73,92,313 ಜನಸಂಖ್ಯೆ ಇದೆ. ಕುರುಬ ಸಮುದಾಯ 43,72,847; ಮಡಿವಾಳ ಹಾಗೂ ಉಪಜಾತಿಗಳು 6,33,894; ಕುಂಬಾರ ಹಾಗೂ ಅದರ ಉಪಜಾತಿಗಳು (ಕುಲಾಲ, ಮೂಲ್ಯ, ಹಾಂಡ ಸೇರಿದಂತೆ) 4,83,724; ಹಾಲಕ್ಕಿ ಒಕ್ಕಲು 73,977, ಯಾದವ 67,754, ಹಣಬರು 90,708, ಬೋವಿ 64,140, ಆಗಸ 1,14,201, ಧೋಬಿ 40,556; ಭಜಂತ್ರಿ 1,01,728, ಹಡಪದ 94,574, ಮಾಲಿ 83,296 ಜನಸಂಖ್ಯೆ ಹೊಂದಿವೆ.
ಇನ್ನು 2ಎನಲ್ಲಿ ಈಡಿಗ ಹಾಗೂ ಅದರ ಉಪಜಾತಿಗಳಾದ ಪೂಜಾರಿ, ಬಿಲ್ಲವ, ನಾಮಧಾರಿ ಸೇರದಿಂತೆ ಒಟ್ಟು 14,12 ,912, ತಿಗಳ 3,06, 739, ಗೌಂಡರ್ 1,03,125, ವಿಶ್ವಕರ್ಮ 6,86,195, ದೇವಾಡಿಗ 1,04,571, ಆಚಾರಿ 1,53,322, ದೈವಜ್ಞ ಬ್ರಾಹ್ಮಣ 80,155, ಪಾಂಚಾಲ 80,078, ಗಾಣಿಗ 6,86,428, ಹಿಂದೂ ಸಾದರು ಹಾಗೂ ಅದರ ಉಪಜಾತಿಗಳು 1,87553, ಕ್ಷತ್ರೀಯ ಹಾಗೂ ಅದರ ಉಪ ಜಾತಿಗಳು 1,84, 127, ಮರಾಠ 11,27,535, ಕ್ಷತ್ರೀಯ ಮರಾಠ 3,08, 382, ಭಾವಸಾರ ಕ್ಷತ್ರೀಯ 1,08,322, ದೇವಾಂಗ 3,45,268, ನೇಕಾರ 74, 056, ಕುರುಹೀನ ಶೆಟ್ಟಿ 1,53,568, ರಜಪೂತ್ 1,20,322 ಜನಸಂಖ್ಯೆ ಹೊಂದಿವೆ. ಉಳಿದಂತೆ ಸಣ್ಣ ಪುಟ್ಟ ಜಾತಿಗಳು ಸೇರಿ ಒಟ್ಟು 77.28 ಲಕ್ಷ ಜನಸಂಖ್ಯೆ ಇದೆ. ಈ ಹಿಂದೆ ಇದ್ದ ಒಟ್ಟು ಮೀಸಲಾತಿಯನ್ನು ಶೇ 10ಕ್ಕೆ ಇಳಿಸಲಾಗಿದೆ.
ಅತ್ಯಂತ ಹಿಂದುಳಿದ ಪ್ರವರ್ಗ 1ಬಿಗೆ ಕುರುಬ ಹಾಗೂ ಅದರ ಉಪಜಾತಿಗಳನ್ನು ಸೇರಿಸಿರುವುದಕ್ಕೆ ತೀವ್ರ ಆಕ್ಷೇಪಗಳೂ ಕೇಳಬರುತ್ತಿವೆ. ಈ ಹಿಂದಿನಿಂದ 2ಎನಲ್ಲಿ ಮೀಸಲಾತಿಯ ಪ್ರಯೋಜನ ಪಡೆದ ಕುರುಬ ಸಮುದಾಯ 1ಬಿನಲ್ಲೂ ಪ್ರಾಬಲ್ಯ ಸಾಧಿಸಲಿದೆ. ಸಿದ್ದರಾಮಯ್ಯ ಅವರೇ ಹೇಳಿ ಬರೆಸಿದ ಸಮೀಕ್ಷೆ ಇದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮೀಸಲಾತಿ ಹಿಂದೆ ಏನಿತ್ತು?
ಈ ಹಿಂದೆ ಪ್ರವರ್ಗ-1ರಲ್ಲಿ ಶೇ 4, ಪ್ರವರ್ಗ-2ಎಗೆ ಶೇ 15, ಪ್ರವರ್ಗ -2ಬಿಗೆ ಶೇ 4, ಪ್ರವರ್ಗ-3ಎಗೆ ಶೇ 4, ಪ್ರವರ್ಗ-3ಬಿಗೆ ಶೇ 5.
ಪರಿಶಿಷ್ಟ ಜಾತಿಗೆ ಶೇ 15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗ ಪ್ರವರ್ಗವನ್ನು 1ಎ ಹಾಗೂ 1ಬಿ ಎಂದು ವರ್ಗೀಕರಿಸಿದ್ದು, 1ಎಗೆ ಶೇ 6 , 1ಬಿಗೆ ಶೇ 12, 2ಎಗೆ ಶೇ 10, 2ಬಿಗೆ ಶೇ 8, 3ಎಗೆ ಶೇ 7 ಹಾಗೂ 3ಬಿಗೆ ಶೇ 8 ರಷ್ಟು ಮೀಸಲಾತಿ ಹಂಚಿಕೆ ಮಾಡಿ ಶಿಫಾರಸು ಮಾಡಿದೆ.
ಪ್ರವರ್ಗ 1ಬಿಯಲ್ಲಿ ಒಟ್ಟು 387 ಜಾತಿಗಳನ್ನು ಆಯೋಗ ಪಟ್ಟಿ ಮಾಡಿದೆ. 1ಬಿ ಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಸೇರಿ ಹಿಂದುಳಿದ 147 ಜಾತಿಗಳಿವೆ. ಅವುಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
2ಎ ನಲ್ಲಿದ್ದ ಶೇ.15 ರಷ್ಟು ಮೀಸಲಾತಿಯನ್ನು 1ಬಿ ಹಾಗೂ 2ಎಗೆ ಮರು ಹಂಚಿಕೆ ಮಾಡಲಾಗಿದೆ. ಇಲ್ಲದೇ ಹಲವು ಪ್ರವರ್ಗಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ.