
The Federal Interview | ಕೇಂದ್ರದಿಂದ ಜಾತಿ ಜನಗಣತಿ; ರಾಜ್ಯದ ವರದಿ ಜಾರಿಯ ಹಾದಿ ಸುಗಮವೇ? ಛಲವಾದಿ ನಾರಾಯಣಸ್ವಾಮಿ ಹೇಳುವುದೇನು?
ಕೇಂದ್ರ ಸರ್ಕಾರವೇ ಜಾತಿವಾರು ಜನಗಣತಿ ಸಮೀಕ್ಷೆ ನಡೆಸುವುದರಿಂದ ಈಗಾಗಲೇ ರಾಜ್ಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಿರುವ ಜಾತಿಗಣತಿ ವರದಿಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಗರಿಗೆದರಿದೆ. ಪ್ರತಿಪಕ್ಷ ಬಿಜೆಪಿ ಕೂಡ ವರದಿ ಜಾರಿ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದೆ.
ಜಾತಿ ಜನಗಣತಿಗೆ ಕೇಂದ್ರ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಕೇಂದ್ರ ಸರ್ಕಾರವೇ ಜಾತಿವಾರು ಜನಗಣತಿ ಸಮೀಕ್ಷೆ ನಡೆಸುವುದರಿಂದ ಈಗಾಗಲೇ ರಾಜ್ಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಿರುವ ಜಾತಿಗಣತಿ ವರದಿಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಗರಿಗೆದರಿದೆ. ಸಮೀಕ್ಷೆ ವರದಿ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಸ್ವಪಕ್ಷೀಯರು ಹಾಗೂ ಪ್ರತಿಪಕ್ಷಗಳಲ್ಲಿ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗುರುವಾರ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ ಜಾರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
"ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ರಾಜ್ಯಗಳಿಗೆ ಜಾತಿ ಜನಗಣತಿ ಸಮೀಕ್ಷೆ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಜನಗಣತಿ ಸಮೀಕ್ಷೆ ಮಾಡುವ ಅಧಿಕಾರ ಇದೆ. ಈಗ ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿದ್ದು 6 ತಿಂಗಳಲ್ಲಿ ಮುಗಿಯಲಿದೆ. ಹಾಗಾಗಿ ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಜಾತಿ ಜನಗಣತಿ ವರದಿ ಅನುಷ್ಠಾನಗೊಳಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರ ಜಾತಿ ಜನಗಣತಿಯಲ್ಲಿ ಅಂಕಿ ಅಂಶಗಳು ವ್ಯತ್ಯಾಸ ಬಂದರೆ ಆಗ ರಾಜ್ಯ ಸರ್ಕಾರ ಏನು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ವರದಿ ಜಾರಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ಲಾಭದ ಹುನ್ನಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲಾಭ ಪಡೆಯುವ ಸಲುವಾಗಿಯೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದಾರೆ. ಈಗ ರಾಜಕೀಯ ಲಾಭ ಪಡೆಯಲು ವರದಿ ಜಾರಿ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಮತ್ತೆ ಕೆಲ ಮಾಹಿತಿಗಳ ಪ್ರಕಾರ ಕೇಂದ್ರವೇ ಸಮೀಕ್ಷೆ ನಡೆಸಿ ವರದಿ ನೀಡಲಿ. ರಾಜ್ಯದಲ್ಲಿ ವರದಿ ಜಾರಿ ಮಾಡಿ ಸಂಕಷ್ಟಕ್ಕೆ ಗುರಿಯಾಗುವುದು ಬೇಡ ಎಂತಲೂ ಯೋಚನೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಿಸಿದ್ದಾರೆ.
65ವರ್ಷದಲ್ಲಿ ಗಣತಿ ನಡೆಸಿಲ್ಲ ಏಕೆ?
ಭಾರತ ಸ್ವಾತಂತ್ರ್ಯ ಪಡೆದ ಬಳಿಕ 65 ವರ್ಷ ಕಾಂಗ್ರೆಸ್ ಆಳ್ವಿಕೆ ನಡೆಸಿದೆ. 1981ರಿಂದ 1931ರವರೆಗೆ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜಾತಿ ಜನಗಣತಿ ನಡೆದಿದೆ. ಆದರೆ, ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವೇ 65ವರ್ಷ ಆಡಳಿತ ನಡೆಸಿದೆ. ಯಾಕೆ ಜಾತಿ ಜನಗಣತಿ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ತಪ್ಪುಗಳನ್ನು ತಿದ್ದುವ ಕೆಲಸ ನಡೆಯುತ್ತಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮೂಲಕ ಜಾತಿಗಳನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ, ಇದಕ್ಕೆ ಅವಕಾಶ ನೀಡುವುದಿಲ್ಲ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾತಿ ಜನಗಣತಿ ನಡೆಸಲು ಮುಂದಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮೇಲೆ ಸರ್ಜಿಕಲ್ ಸ್ಟ್ರೈಕ್
ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿಗಳ ಮಧ್ಯೆ ಒಡಕು ಮೂಡಿಸಲು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಮಾಡಿಸಿದೆ. ಇದು ಸಂಪೂರ್ಣ ರಾಜಕೀಯ ಗಣತಿ ಎಂತಿದೆ. ಆದರೆ, ಕೇಂದ್ರ ಸರ್ಕಾರ ಈ ಹಿಂದಿನಿಂದಲೂ ನಡೆದು ಬಂದಿರುವಂತೆ ಜಾತಿ ಜನಗಣತಿ ಮಾತ್ರ ನಡೆಸುತ್ತದೆ. ಕಾಂಗ್ರೆಸ್ಸಿನ ಮೇಲೆ ನಮ್ಮದು ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿದ್ದಾರೆ.
ಗಣತಿಗೆ ಖರ್ಚಾದ ಹಣದ ಲೆಕ್ಕ ಕೊಡಿ
ರಾಜ್ಯದ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಸುಮಾರು 200ಕೋಟಿ ರೂ. ಖರ್ಚು ಮಾಡಿದೆ. ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಆಯೋಗಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ಅವೈಜ್ಞಾನಿಕ ವರದಿ ಸಿದ್ದಪಡಿಸಿದ್ದಾರೆ. ಹಾಗಾಗಿ ಸಮೀಕ್ಷೆಗೆ ಖರ್ಚಾದ ಹಣದ ಬಗ್ಗೆಯೇ ನಮಗೆ ಅನುಮಾನವಿದೆ. ಕೂಡಲೇ ರಾಜ್ಯ ಸರ್ಕಾರ ಹಣದ ಲೆಕ್ಕ ಕೊಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂದರ್ಶನದ ಪೂರ್ಣಪಾಠ ಇಲ್ಲಿದೆ.