Caste Census | ಜಾತಿಗಣತಿ ವರದಿ ದತ್ತಾಂಶ ಸೋರಿಕೆ; ತನಿಖೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹ
x

Caste Census | ಜಾತಿಗಣತಿ ವರದಿ ದತ್ತಾಂಶ ಸೋರಿಕೆ; ತನಿಖೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹ

ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು?, ಅದರ ಹಿಂದಿರುವ ಕಳ್ಳ ಕೈ ಯಾವುದು?, ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ? ಎಂದು ವ್ಯಂಗ್ಯವಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಈ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ.


ಜಾತಿ ಜನಗಣತಿ ವರದಿಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತಾನು ಮಾಡಿದ್ದು ಜಾತಿಗಣತಿಯಲ್ಲ.ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಪೀಪಿ ಊದುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಜಬಣ್ಣ ಬಯಲಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ʼಎಕ್ಸ್‌ʼನಲ್ಲಿ ಈ ಕುರಿತು ಟ್ವೀಟ್‌ ಮಾಡಿರುವ ಅವರು, ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂಬಿದ್ದು ಹೊರಳಾಡುತ್ತಿರುವ ಅಂಕಿ ಸಂಖ್ಯೆಗಳು ಏನು?, ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ? ಅಥವಾ ಅಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು?, ಅದರ ಹಿಂದಿರುವ ಕಳ್ಳ ಕೈ ಯಾವುದು?, ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ? ಎಂದು ವ್ಯಂಗ್ಯವಾಡಿದ್ದಾರೆ.

ವರದಿ ಸೋರಿಕೆ ಬಗ್ಗೆ ತಪ್ಪದೇ ತನಿಖೆ ನಡೆಸಬೇಕು. ಅದು ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ʼಕೈʼ ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ್ಮ ಗ್ಯಾಂಗ್ ಕೈ ಚಳಕವಾ ಎಂಬುದನ್ನು ಸ್ಪಷ್ಟಪಡಿಸಬೇಕು. ತನಿಖೆ ನಡೆಸುವ ಬಗ್ಗೆ ಸಂಪುಟದಲ್ಲೇ ತೀರ್ಮಾನ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವರದಿ ಸೋರಿಕೆಗೆ ರಾಜ್ಯ ಸರ್ಕಾರವೇ ಹೊಣೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯತೆ ಹಾಳು ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಚ್ಚಿದ್ದೀರಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Read More
Next Story