ಜಾತಿ ಗಣತಿ-2025| ವೀರಶೈವ -ಲಿಂಗಾಯತರಿಗೆ ʼಧರ್ಮʼ ಕಂಟಕ... ಬಿಜೆಪಿಗೆ ಉಭಯ ಸಂಕಟ
x

ಜಾತಿ ಗಣತಿ-2025| ವೀರಶೈವ -ಲಿಂಗಾಯತರಿಗೆ ʼಧರ್ಮʼ ಕಂಟಕ... ಬಿಜೆಪಿಗೆ ಉಭಯ ಸಂಕಟ

ಧರ್ಮದ ಕಾಲಂನಲ್ಲಿ ಧರ್ಮದ ಹೆಸರು ನಮೂದಿಸುವ ವಿಚಾರ ವೀರಶೈವ ಲಿಂಗಾಯತ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸಿದೆ. ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ, ಪಂಚಮಸಾಲಿನ ವಿಭಿನ್ನ ದೃಷ್ಟಿಕೋನಗಳಿಂದ ಸಮಸ್ಯೆ ಕಗ್ಗಂಟಾಗಿದೆ.


ಲಿಂಗಾಯತರ ʼಪ್ರತ್ಯೇಕ ಧರ್ಮʼದ ಹೋರಾಟವು ಇದೀಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ʼಧರ್ಮ ಸಂಕಟʼ ತಂದೊಡ್ಡಿದೆ. ರಾಜ್ಯಾದ್ಯಂತ ಸೆ.22 ರಿಂದ ಆರಂಭವಾಗುವ ಸಮೀಕ್ಷೆಯಲ್ಲಿ ಧರ್ಮ ನಮೂದಿಸುವ ವಿಚಾರವು ವೀರಶೈವ ಹಾಗೂ ಲಿಂಗಾಯತ ಸಮುದಾಯಗಳಲ್ಲಿ ದೊಡ್ಡ ಕಂದಕ ಸೃಷ್ಟಿಸುವ ಭೀತಿ ಮೂಡಿಸಿದೆ.

2018 ರಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವನ್ನು ಕಾಂಗ್ರೆಸ್, ರಾಜಕೀಯ ದಾಳವಾಗಿ ಬಳಸಿಕೊಂಡಿತ್ತು. ಲಿಂಗಾಯತರ ಹೋರಾಟ ಬೆಂಬಲಿಸಿ ತರಾತುರಿಯಲ್ಲಿ ನ್ಯಾ.ನಾಗಮೋಹನ ದಾಸ್ ಆಯೋಗ ನೇಮಕ ಮಾಡಿದ್ದಲ್ಲದೇ ವರದಿಯನ್ನು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿತು. ಆದರೆ, ವರದಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಲಿಲ್ಲ. ಇದರಿಂದ ಕಾಂಗ್ರೆಸ್‌ ಪಕ್ಷ ಹಿನ್ನಡೆ ಅನುಭವಿಸಬೇಕಾಯಿತು. ಆದರೆ, ಸಮುದಾಯದಲ್ಲಿ ಬಿಕ್ಕಟ್ಟು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ವೀರಶೈವ ಹಾಗೂ ಲಿಂಗಾಯತರಲ್ಲಿ ಅಂತರ ಹೆಚ್ಚಿತು.

ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಿಜೆಪಿ ನಾಯಕರು ಪ್ರತ್ಯೇಕ ಧರ್ಮದ ಹೋರಾಟ ವಿರೋಧಿಸಿ ಕಾಂಗ್ರೆಸ್‌ ವಿರುದ್ಧ ಚಳವಳಿ ರೂಪಿಸಲಾಯಿತು. ಪರಿಣಾಮ ಕಾಂಗ್ರೆಸ್‌ ಸರ್ಕಾರ 2018 ರ ಚುನಾವಣೆಯಲ್ಲಿ ಸೋಲು ಅನುಭವಿಸಿತು.

ಹಳಿಗೆ ಬಾರದ ಪ್ರತ್ಯೇಕ ಧರ್ಮದ ಹೋರಾಟ

ಬಿಜೆಪಿ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭವಾಯಿತು. ಅಲ್ಲಿಯವರೆಗೆ ಮುಂಚೂಣಿಯಲ್ಲಿದ್ದ ಪ್ರತ್ಯೇಕ ಧರ್ಮದ ಹೋರಾಟ ನಿಧಾನವಾಗಿ ಹಿನ್ನೆಲೆಗೆ ಜಾರಿತು. ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವ ಪ್ರಯತ್ನಕ್ಕೆ ʼಜಾಗತಿಕ ಲಿಂಗಾಯತ ಮಹಾಸಭಾʼ ಎಸ್‌.ಎಂ. ಜಾಮದಾರ್ ನೇತೃತ್ವದಲ್ಲಿ ಮರುಸಂಘಟನೆಗೆ ಪ್ರಯತ್ನಿಸಿದರೂ ಫಲ ನೀಡಲಿಲ್ಲ.

2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರ ಬಂದಿತು. ವೀರಶೈವ ಲಿಂಗಾಯತರನ್ನು ಒಟ್ಟಿಗೆ ಕರೆದೊಯ್ಯಲು ಸಮುದಾಯದ ನಾಯಕರು ಪ್ರಯತ್ನಿಸಿದರೂ ಪಂಚಮಸಾಲಿ ಹೋರಾಟ ಮತ್ತೆ ಒಗ್ಗಟ್ಟು ಮುರಿಯುವಂತೆ ಮಾಡಿತು. ಬಸವಣ್ಣನ ಅನುಯಾಯಿಗಳಾದ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡುವ ವಿಚಾರವನ್ನು ಶೈವ ಪರಂಪರೆ ವೀರಶೈವರು ಒಪ್ಪಲಿಲ್ಲ. ಪಂಚಪೀಠಗಳ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸ್ವತಃ ಸಿದ್ದರಾಮಯ್ಯ ಅವರೇ ಬಾಳೇ ಹೊನ್ನೂರು ಪೀಠಕ್ಕೆ ತೆರಳಿ ಪ್ರತ್ಯೇಕ ಧರ್ಮ ಸ್ಥಾಪನೆಗೆ ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮ

ಸಮೀಕ್ಷೆಯಲ್ಲಿ ಮತ್ತೆ ʼಧರ್ಮʼ ಸಂಕಟ

ಕಾಂಗ್ರೆಸ್‌ ಸರ್ಕಾರ ಇದೀಗ ತೆರೆಮರೆಯಲ್ಲಿ ವೀರಶೈವ ಲಿಂಗಾಯತರ ಒಗ್ಗಟ್ಟು ಮುರಿಯುವ ಪ್ರಯತ್ನಗಳನ್ನು ಸಾಮಾಜಿಕ ಸಮೀಕ್ಷೆಯ ಮೂಲಕ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ʼವೀರಶೈವ-ಲಿಂಗಾಯತʼ ಎಂದು ಬರೆಸುವಂತೆ ಅಖಿಲ ಭಾರತ ಲಿಂಗಾಯತ ಮಹಾಸಭಾ ಹೇಳುತ್ತಿದೆ. ಆದರೆ, ಮಠಾಧೀಶರನ್ನು ಒಳಗೊಂಡ ಜಾಗತಿಕ ಲಿಂಗಾಯತರ ವೇದಿಕೆಯು ಧರ್ಮದ ಕಾಲಂನಲ್ಲಿ ಬರೀ ಲಿಂಗಾಯತ ಎಂದು ಬರೆಸಲು ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತಿದೆ. ಮತ್ತೊಂದೆಡೆ ಪಂಚಮಸಾಲಿ ಸಮುದಾಯದವರು ಹಿಂದೂ ಧರ್ಮದಲ್ಲಿಯೇ ಮುಂದುವರಿಯಲು ಇಚ್ಛಿಸಿರುವುದು ಬಿಕ್ಕಟ್ಟು ಸೃಷ್ಟಿಸಿದೆ.

2015 ರ ಎಚ್‌. ಕಾಂತರಾಜ್‌ ವರದಿಯಲ್ಲೂ ಲಿಂಗಾಯತರನ್ನು ವಿಭಜಿಸಲಾಗಿತ್ತು. ವರದಿಯ ಪ್ರಕಾರ ರಾಜ್ಯದಲ್ಲಿ ಲಿಂಗಾಯತರು 30,14,696, ವೀರಶೈವ-ಲಿಂಗಾಯತರು 17,88,279 , ಪಂಚಮಸಾಲಿ ಲಿಂಗಾಯತರು 10,71,302 ಹಾಗೂ ಇತರ ಉಪ ಸಮುದಾಯಗಳು ಸೇರಿ ಒಟ್ಟು 65-70 ಲಕ್ಷ ಜನಸಂಖ್ಯೆ ತೋರಿಸಲಾಗಿತ್ತು.

ಸಮೀಕ್ಷೆಯ ವರದಿಯಲ್ಲಿ ಲಿಂಗಾಯತರು ಮೂರನೇ ಸ್ಥಾನದಲ್ಲಿರುವುದು ಬಹಿರಂಗವಾಗಿತ್ತು. ಇದರಿಂದ ಅಸಮಾಧಾನಗೊಂಡ ಲಿಂಗಾಯತರು ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿ, ವರದಿ ತಿರಸ್ಕರಿಸಲು ಒತ್ತಾಯಿಸಿದ್ದವು. ರಾಜ್ಯದಲ್ಲಿ ಲಿಂಗಾಯತ ಸಮುದಾಯ 1 ರಿಂದ 2 ಕೋಟಿ ಜನಸಂಖ್ಯೆ ಹೊಂದಿದೆ. ಹಾಗಾಗಿ ಕಾಂತರಾಜು ವರದಿ ವೈಜ್ಞಾನಿಕವಾಗಿಲ್ಲ. ಹೊಸ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದವು. ಅದರಂತೆ ಹೊಸ ಸಮೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಜೊತೆಗೆ ಧರ್ಮದ ಗೊಂದಲವೂ ಮುನ್ನೆಲೆಗೆ ಬಂದಿದ್ದು, ಮತ್ತದೇ ಬಿಕ್ಕಟ್ಟು ಮುಂದುವರಿಯುವ ಲಕ್ಷಣಗಳು ದಟ್ಟವಾಗಿವೆ.

ಪ್ರತ್ಯೇಕ ಧರ್ಮದ ಹೋರಾಟಕ್ಕೆ ಅಸ್ತ್ರ

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿರುವ ವೀರಶೈವ ಲಿಂಗಾಯತ ಮಹಾಸಭಾವು ಸಮೀಕ್ಷೆಯಲ್ಲಿ ಕೊಟ್ಟಿರುವ ಧರ್ಮದ ಕಾಲಂನ ಇತರೆ ವಿಭಾಗದಲ್ಲಿ ʼವೀರಶೈವ ಲಿಂಗಾಯತʼ ಎಂದು ನಮೂದಿಸಲು ಸೂಚಿಸಿದೆ.

ಕಳೆದ ಹಲವು ದಶಕಗಳಿಂದ ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಲಿಂಗಾಯತ ಮಹಾಸಭಾ ಹೋರಾಟ ಮಾಡುತ್ತಿದೆ. ಆದರೆ, ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಸಮುದಾಯದೊಳಗಿನ ಒಳ ಜಗಳ, ಪ್ರತ್ಯೇಕತೆಯ ಕೂಗಿನಿಂದಾಗಿ ಹೋರಾಟ ಫಲಪ್ರದ ಆಗಿರಲಿಲ್ಲ.

ಈಗ ಜಾತಿಗಣತಿ ಸಮೀಕ್ಷೆಯಲ್ಲಿ ಇಡೀ ಸಮುದಾಯವು ಒಮ್ಮತದಿಂದ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಿದರೆ ಪ್ರತ್ಯೇಕ ಧರ್ಮದ ಹೋರಾಟಕ್ಕೆ ದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ. ಭವಿಷ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲಿದೆ ಎಂಬುದು ಮಹಾಸಭಾದ ಲೆಕ್ಕಾಚಾರವಾಗಿದೆ.

"ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಲು ಲಿಂಗಾಯತ ಮಹಾಸಭಾದಿಂದ ಮನವಿ ಮಾಡಲಾಗಿದೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ವಿಸ್ತರಿಸುವ ಸಲುವಾಗಿ ಈ ಪ್ರಯತ್ನ ಆರಂಭಿಸಿದ್ದೇವೆ. ಆದರೆ, ಈ ವಿಚಾರದಲ್ಲಿ ಏಕಮತವಿಲ್ಲ. ಪಂಚಮಸಾಲಿಗಳು ಜಾತಿಯಲ್ಲಿ ಜೊತೆಯಾಗಿಯೇ ಇದ್ದರೂ ಧರ್ಮದ ವಿಚಾರದಲ್ಲಿ ಪ್ರತ್ಯೇಕವಾಗಿದ್ದಾರೆ. ಪಂಚಮಸಾಲಿ ಲಿಂಗಾಯತ ಹಾಗೂ ವೀರಶೈವ ಪಂಚಮಸಾಲಿಗಳು ತಾವು ಹಿಂದೂ ಧರ್ಮದಲ್ಲೇ ಮುಂದುವರಿಯಲು ನಿರ್ಧರಿಸಿವೆ. ಆದಾಗ್ಯೂ, ನಮ್ಮ ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ವಕ್ತಾರ ಎಚ್‌.ಎಂ. ರೇಣುಕಾ ಪ್ರಸನ್ನ 'ದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

ವೀರಶೈವ ಲಿಂಗಾಯತ ಹಿಂದೂ?

ಪಂಚಮಸಾಲಿ ಲಿಂಗಾಯತರು ಹಿಂದೂ ಧರ್ಮದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಪಂಚಮಸಾಲಿ ಸಮುದಾಯ ಸಮೀಕ್ಷೆ ವಿಚಾರದಲ್ಲಿ ಗಟ್ಟಿ ನಿರ್ಧಾರ ತಳೆದಿದೆ.
ಈ ಮಧ್ಯೆ, ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಧರ್ಮದ ಹೆಸರಲ್ಲಿ ʼವೀರಶೈವ ಲಿಂಗಾಯತ ಹಿಂದೂʼ ಎಂದು ಬರೆಸಲು ಕರೆ ನೀಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
"ನಾವು ರಾಜ್ಯದಾದ್ಯಂತ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಜನರ ಈ ಅಭಿಪ್ರಾಯವನ್ನು ಲಿಖಿತ ಹಾಗೂ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ‌. ಅದರಂತೆ ಶೇ 80 ರಷ್ಟು ಪಂಚಮಸಾಲಿ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಅವರು
ʼದ ಫೆಡರಲ್‌ ಕರ್ನಾಟಕʼ
ಕ್ಕೆ ತಿಳಿಸಿದರು.

ಸಮುದಾಯದವರು ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಪಂಚಮಸಾಲಿ ಎಂದು ಬರೆಸಬೇಕು. ಉಪ ಜಾತಿಯ ಮುಂದೆ ಜಾತಿ ಕೋಡ್‌ ಬರೆಯಬೇಕು. ನಮ್ಮ ಜಾತಿಯ ಪ್ರಮಾಣ ಪತ್ರದಲ್ಲಿ ಹಿಂದೂ ಲಿಂಗಾಯತ ಎಂದಿದೆ. ಹಾಗಾಗಿ ನಾವೂ ಹಿಂದೂಗಳಾಗಿಯೇ ಮುಂದುವರಿಯುತ್ತೇವೆ ಎಂದು ಖಡಕ್ಕಾಗಿ ಹೇಳಿದರು.

ಸೆ.19 ರಂದು ಹುಬ್ಬಳ್ಳಿ ಸಮಾವೇಶ

ಸೆ.19ರಂದು ಹುಬ್ಬಳ್ಳಿಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ʼಏಕತಾ ಸಮಾವೇಶʼ ಹಮ್ಮಿಕೊಳ್ಳಲಾಗಿದೆ. ಬುಧವಾರ ಮಹಾಸಭಾದ ಹಿರಿಯ ಉಪಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಸಮುದಾಯದ ಹಿರಿಯ ನಾಯಕರಾದ ಪ್ರಭಾಕರ ಕೋರೆ, ಎಂ.ಪಿ. ರೇಣುಕಾಚಾರ್ಯ, ವೀರಣ್ಣ ಚರಂತಿ ಮಠ ಅವರೊಂದಿಗೆ ಸಭೆ ನಡೆಸಿದ್ದಾರೆ.

ರಾಜ್ಯ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿದೆ. ಜಾತಿ ಒಡೆಯುವ ಕೆಲಸವನ್ನು ಸರ್ಕಾರ ಮಾಡಿಲ್ಲ, ಮಾಡುವುದೂ ಇಲ್ಲ. ಸಮೀಕ್ಷೆಯಲ್ಲಿ ಎಲ್ಲರೂ ಲಿಂಗಾಯತ-ವೀರಶೈವ ಎಂದೇ ಬರೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸೆ.19 ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಸಿ, ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಮುದಾಯದವರು ಮೊದಲೇ ಗೊಂದಲದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯಾರೂ ಕೂಡ ರಾಜಕೀಯ ಲಾಭಕ್ಕಾಗಿ ಇನ್ನಷ್ಟು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಲಿಂಗಾಯತ ಎಂದು ಬರೆಸಲು ನಿರ್ಣಯ

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಹಿಂದೂ ಬದಲಿಗೆ ಲಿಂಗಾಯತ ಎಂದು ಬರೆಸಲು ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ನಿರ್ಣಯಿಸಿದೆ.

ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ 2ಕೋಟಿಯಷ್ಟಿದೆ. ಆದರೆ, ಕೆಲ ವರದಿಗಳು ಕೇವಲ 70-72ಲಕ್ಷ ಜನಸಂಖ್ಯೆ ಇರುವುದಾಗಿ ತೋರಿಸುತ್ತಿವೆ. ವಿವಿಧ ಪಂಗಡಗಳನ್ನು ಲಿಂಗಾಯತರಿಂದ ಬೇರ್ಪಡಿಸುವ ಷಡ್ಯಂತ್ರ ನಡೆದಿದೆ. ಹಾಗಾಗಿ ಮುಂಬರುವ ಸಮೀಕ್ಷೆಯಲ್ಲಿ ಎಲ್ಲರೂ ಲಿಂಗಾಯತ ಧರ್ಮ ಎಂದು ಬರೆಸಬೇಕು ಎಂದು ಬೀದರ್‌ನ ಬಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು ಮನವಿ ಮಾಡಿದ್ದಾರೆ.

ʼಲಿಂಗಾಯತ ಧರ್ಮʼ ಉಲ್ಲೇಖಕ್ಕೆ ಅಭಿಯಾನ

ಧರ್ಮ ಕಾಲಂನಲ್ಲಿ ಲಿಂಗಾಯತ ಧರ್ಮದ ಹೆಸರಿಲ್ಲ. ಆದ್ದರಿಂದ 11ನೇ ವಿಭಾಗದಲ್ಲಿರುವ ‘ಇತರೆ’ ಕಾಲಂ ಮುಂದೆ ಲಿಂಗಾಯತ ಎಂದು ಬರೆಸಬೇಕು. ವೀರಶೈವ ಲಿಂಗಾಯತ, ಲಿಂಗಾಯತ ವೀರಶೈವ, ಹಿಂದೂ ಎಂದು ಬರೆಸಬೇಕು ಎಂದು ಹಲವರು ಪುಕಾರು ಎಬ್ಬಿಸುತ್ತಿದ್ದಾರೆ. ಇದರಿಂದ ಲಿಂಗಾಯತರಿಗೆ ನಷ್ಟವಾಗಲಿದೆ. ಮೀಸಲಾತಿಗೂ, ಸಮೀಕ್ಷೆಗೂ ಸಂಬಂಧವಿಲ್ಲ. ಹಾಗಾಗಿ ಗಣತಿದಾರರಿಗೆ ಧರ್ಮದ ಕುರಿತು ಸ್ಪಷ್ಟ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.

ಆ ಮೂಲಕ ʼಧರ್ಮʼ ಕಾಲಂನಲ್ಲಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್‌, ಜೈನ, ಬೌದ್ಧ ಇತ್ಯಾದಿ ಧರ್ಮಗಳ ವಿವರಗಳಿದ್ದು, ಕ್ರಮ ಪ್ರಕಾರ ಲಿಂಗಾಯತ ವೀರಶೈವ ಪಂಗಡದವರೂ ʼಧರ್ಮ -ಹಿಂದುʼ ಎಂದು ಉಲ್ಲೇಖಿಸಬೇಕಾಗುತ್ತದೆ. ಹಾಗೂ ಉಪ ವಿಭಾಗಗಳ ಜಾತಿ - ಕಾಲಂನಲ್ಲಿ ʼಲಿಂಗಾಯತʼ ಅಥವಾ ಲಿಂಗಾಯತ ವೀರಶೈವ ಎನ್ನುವುದನ್ನುಉಲ್ಲೇಖಿಸಬೇಕಾಗುತ್ತದೆ.

ಆದರೆ, ಲಿಂಗಾಯತ ಉಪ ಜಾತಿಗಳಾದ ಬಣಜಿಗ, ನೊಣಬ, ಪಂಚಮಸಾಲಿ, ಗಾಣಿಗ ಇತ್ಯಾದಿಗಳನ್ನು ಉಲ್ಲೇಖಿಸಲು ಕಾಲಂಗಳಿವೆ. ಆದರೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಲಿಂಗಾಯತ ವೀರಶೈವರು ಹಿಂದೂ ಕಾಲಂನಲ್ಲೇ ತಮ್ಮನ್ನು ಗುರುತಿಸಿಕೊಳ್ಳಬೇಕೆಂದು ತಮ್ಮ ಸಂಘಟನೆಗಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಇನ್ನೊಂದೆಡೆ, ಸಮಾಜ ಸುಧಾರಕ ಬಸವಣ್ಣನ ಅನುಯಾಯಿಗಳಾಗಿರುವವರು ತಮ್ಮನ್ನು ತಾವು ಲಿಂಗಾಯತರೆಂಬ ಹೊಸ ಧರ್ಮದಲ್ಲಿ ಗುರುತಿಸಬೇಕೆಂಬ ಬೇಡಿಕೆಯನ್ನು ಹಲವಾರು ವರ್ಷಗಳಿಂದ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಮ್ಮೆ ಕೇಂದ್ರಕ್ಕೂ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಆಗಬೇಕೆಂದು ಪತ್ರ ಬರೆದಿದ್ದರು. ಬಳಿಕ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿ, ಆ ಬಗ್ಗೆ ಸಿದ್ಧವಾದ ನಾಗಮೋಹನ್‌ ದಾಸ್‌ ಆಯೋಗದ ವರದಿಗೂ ಕಾರಣವಾಗಿದ್ದರು. ಆದರೆ, ರಾಜಕೀಯವಾಗಿ ಬಿಜೆಪಿಗೆ ಬೆಂಬಲಿಸಿದ್ದ ಲಿಂಗಾಯತರನ್ನು ಕಾಂಗ್ರೆಸ್‌ನತ್ತ ಎಳೆಯುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಯಶಕಾಣಲಿಲ್ಲ.

ಈಗ ಮತ್ತೆ ʼಲಿಂಗಾಯತ ಧರ್ಮʼ ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿಗೆ ಮುನ್ನವೇ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ಹೆಣೆದ ಪರೋಕ್ಷ ತಂತ್ರಕ್ಕೆ ಬಿಜೆಪಿ ಒಳಗೊಳಗೇ ತಳಮಳ ಅನುಭವಿಸುತ್ತಿದೆ. ‌ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಬಿಜೆಪಿ ಮುಖಂಡ ಅರವಿಂದ ಬೆಲ್ಲದ ಅವರ "ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಹಿಂದೂ ಎಂದು ಬರೆಸಿ," ಎಂದು ತಮ್ಮ ಸಮುದಾಯಕ್ಕೆ ಕರೆ ನೀಡಿರುವುದು ಬಿಜೆಪಿಯ ಹಿಂದುತ್ವ ನಿಲುವಿಗೆ ಉದಾಹರಣೆಯಾಗಿದೆ. ಲಿಂಗಾಯತ ಉಪ ಪಂಗಡ ಹಾಗೂ ಲಿಂಗಾಯತರಲ್ಲೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯದ ಮಠಾಧೀಶರು "ವೀರಶೈವ ಲಿಂಗಾಯತʼ ಬದಲಿಗೆ ಹಿಂದೂ ಕಾಲಂನಡಿಯಲ್ಲೇ ತಮ್ಮನ್ನು ತಾವು ಗುರುತಿಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಆದರೆ, ಕಾಂಗ್ರೆಸ್‌ ಬೆಂಬಲ ಇದೆ ಎನ್ನಲಾದ ಜಾಗತಿಕ ಲಿಂಗಾಯತ ವೇದಿಕೆ ಮುಖಂಡರು ಹಿಂದೂ ಬದಲಿಗೆ ʼಇತರʼ ವಿಭಾಗದಲ್ಲಿ ಪ್ರತ್ಯೇಕವಾಗಿ "ಲಿಂಗಾಯತ ಧರ್ಮ" ಎಂದೂ ತಮ್ಮ ಜಾತಿ ವಿಭಾಗದಲ್ಲಿ ತಮ್ಮ ಉಪಜಾತಿಗಳನ್ನು ನಮೂದಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಮೂರೂ ಬೆಳವಣಿಗೆಗಳು ಲಿಂಗಾಯತರ ಒಗ್ಗಟ್ಟಿಗೆ ಬ್ರಹ್ಮಾಸ್ತ್ರವಾಗಿ ಪರಿಣಮಿಸಿದ್ದು, ಪ್ರಮುಖವಾಗಿ ಲಿಂಗಾಯತ ವೀರಶೈವರ ಬೆಂಬಲ ಹೊಂದಿರುವ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.


Read More
Next Story