
ಸಾಂದರ್ಭಿಕ ಚಿತ್ರ
ಜಾತಿಗಣತಿ | ಸಮೀಕ್ಷೆಯ ತಂತ್ರಾಂಶದಿಂದ ಹಿಂದೂ ಹೆಸರಿನ ಕ್ರಿಶ್ಚಿಯನ್ ಜಾತಿಗಳು ನಿಷ್ಕ್ರಿಯ
ಸಮೀಕ್ಷೆಗೆ ಬಳಸುತ್ತಿರುವ ಮೊಬೈಲ್ ಆ್ಯಪ್‌ನಲ್ಲಿ 33 ಮತಾಂತರ ಜಾತಿ ಹೆಸರುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಮತಾಂತರ ಕ್ರಿಶ್ಚಿಯನ್ ಜಾತಿಗಳನ್ನು ಸಮೀಕ್ಷೆಯಿಂದ ಕೈ ಬಿಡುವಂತೆ ವಿವಿಧ ಜಾತಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ಹಿಂದುಳಿದ ವರ್ಗಗಳ ಆಯೋಗ ಹಿಂದೂ ಜಾತಿಯ ಮುಂದೆ ಕ್ರಿಶ್ಚಿಯನ್ ಹೆಸರಿರುವ 33 ಜಾತಿಗಳನ್ನು ತಂತ್ರಾಂಶದಿಂದ ನಿಷ್ಕ್ರಿಯಗೊಳಿಸಿದೆ.
ಹಿಂದೂ ಜಾತಿಗಳ ಹೆಸರಿನ ಜೊತೆ ಕ್ರಿಶ್ಚಿಯನ್ ಪದ ಸೇರಿಸಿರುವುದಕ್ಕೆ ವಿವಿಧ ಸಮುದಾಯಗಳು ಮತ್ತು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು.
ಈ ಕುರಿತಂತೆ ಭಾನುವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗೆ ಬಳಸುತ್ತಿರುವ ಮೊಬೈಲ್ ಆ್ಯಪ್‌ನಲ್ಲಿದ್ದ 33 ಮತಾಂತರ ಜಾತಿ ಹೆಸರುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದ ತಿಳಿಸಿದೆ.
ಆಯೋಗದ ಅಧ್ಯಕ್ಷ ಮಧುಸೂದನ ಆರ್. ನಾಯ್ಕ ಮಾತನಾಡಿ, “ಆಕ್ಷೇಪಾರ್ಹ ಎನಿಸಿದ 33 ಜಾತಿಗಳ ಹೆಸರುಗಳು ಆ್ಯಪ್‌ನಲ್ಲಿ ಕಾಣುವುದಿಲ್ಲ. ಆದರೆ, ಜನರು ತಮ್ಮ ಜಾತಿ–ಧರ್ಮವನ್ನು ಸ್ವಯಂಪ್ರೇರಿತವಾಗಿ ಹೇಳಲು ಮುಕ್ತರಾಗಿದ್ದಾರೆ. ಜನರು ಬಯಸಿದರೆ ಆ ಹೆಸರುಗಳನ್ನು ಗಣತಿದಾರರು ದಾಖಲಿಸಲಿದ್ದಾರೆ ಎಂದು ತಿಳಿಸಿದರು.
2015ರಲ್ಲಿ ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಈ ಹೆಸರಿನ ಜಾತಿಗಳ ಉಲ್ಲೇಖವಿದೆ.
ಯಾವುದೇ ಹೊಸ ಜಾತಿಯನ್ನು ಆಯೋಗ ಸೃಷ್ಟಿಸಿಲ್ಲ, ಅಲ್ಲದೇ ಈಗಿರುವ ಜಾತಿಪಟ್ಟಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಸಮೀಕ್ಷೆಯ ಅನುಕೂಲಕ್ಕಾಗಿ ಮಾತ್ರ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ತಾಂತ್ರಿಕ ಬದಲಾವಣೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಪ್ರಗತಿಯಲ್ಲಿ ಇರುವುದರಿಂದ ಸಮೀಕ್ಷೆ ಎರಡು ದಿನ ತಡವಾಗಿ ಆರಂಭವಾಗಲಿದೆ.
ಹೀಗಾಗಿ ಸಮೀಕ್ಷೆ ಮುಕ್ತಾಯದ ದಿನಾಂಕದಿಂದ ಎರಡು ದಿನ ವಿಸ್ತರಣೆ ಆಗಲಿದೆ.
ವಿವಾದಕ್ಕೆ ಕಾರಣವಾಗಿರುವ ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬಾರಿಕಾರ್ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್, ಗೊಂಡ ಲಾಲಗೊಂಡ ಕ್ರಿಶ್ಚಿಯನ್, ಗೌಡಿ ಕ್ರಿಶ್ಚಿಯನ್, ಜಲಗಾರ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕಮ್ಮ ನಾಯ್ಡು ಕ್ರಿಶ್ಚಿಯನ್, ಕಂಸಾಳಿ/ಕಂಸಾಳೆ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಮಾಂಗ ಕ್ರಿಶ್ಚಿಯನ್, ಮೊದಲಿಯಾರ್ ಕ್ರಿಶ್ಚಿಯನ್, ನಾಡಾರ್ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಪಡಯಾಚಿ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಸೆಟ್ಟಿ ಬಲಿಜ ಕ್ರಿಶ್ಚಿಯನ್, ಸುದ್ರಿ ಕ್ರಿಶ್ಚಿಯನ್, ತಿಗಳ/ಥಿಗಳ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್, ವೈಶ್ಯ/ಶೆಟ್ರು ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್ ಜಾತಿಗಳ ಹೆಸರನ್ನು ಕೈ ಬಿಡಲಾಗಿದೆ.
148 ಹೊಸ ಜಾತಿ ಸೇರ್ಪಡೆ
ಈ ಹಿಂದಿನ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದ ಹೆಸರುಗಳನ್ನು ಸೇರಿಸಲು ಅವಕಾಶ ನೀಡಲಾಗಿತ್ತು. ಅದರಂತೆ 148 ಹೊಸ ಜಾತಿ ಹೆಸರುಗಳನ್ನು ಸೇರಿಸಿ ಒಟ್ಟು 1,561 ಜಾತಿಗಳನ್ನು ಆ್ಯಪ್‌ನಲ್ಲಿ ದಾಖಲಿಸಲಾಗಿದೆ.
ಧರ್ಮದ ಕಾಲಂ ಕುರಿತಂತೆ ಪ್ರತಿಕ್ರಿಯಿಸಿದ ಮಧುಸೂದನ್ ನಾಯ್ಕ್ ಅವರು, “ಜನರು ಸ್ವಇಚ್ಛೆಯಿಂದ ತಮ್ಮ ಧರ್ಮವನ್ನು ಏನು ಬೇಕಾದರೂ ನಮೂದಿಸಬಹುದು. ಆಯೋಗ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದರು.