
Caste Census | ನಾಳೆ ಸಚಿವ ಸಂಪುಟ ಸಭೆ; ಜಾತಿಗಣತಿ ವರದಿ ಕುರಿತು ಮಹತ್ವದ ತೀರ್ಮಾನ ಸಾಧ್ಯತೆ
ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಳೆ ಸಚಿವ ಸಂಪುಟದ ಸಭೆ ನಡೆಯಲಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಶಿಫಾರಸ್ಸುಗಳ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ, ಮಹತ್ವದ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ನಾಳೆ(ಶುಕ್ರವಾರ) ಸಚಿವ ಸಂಪುಟದ ಮುಂದೆ ಬರಲಿದೆ.
ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಸಮೀಕ್ಷಾ ವರದಿಯನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತು ಮಹತ್ವ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಏ.17 ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತು ಸಚಿವರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ವರದಿ ಕುರಿತು ಇನ್ನಷ್ಟು ವಿಸ್ತೃತ ಸಮಾಲೋಚನೆ ಅಗತ್ಯವಿದೆ ಎಂಬುದನ್ನು ಮನಗಂಡ ಸಂಪುಟ ಸಭೆ ಮೇ 2 ರಂದು ಮತ್ತೊಂದು ವಿಶೇಷ ಸಚಿವ ಸಂಪುಟ ಸಭೆಗೆ ಚರ್ಚೆ ಮುಂದೂಡಿತ್ತು. ಆದರೆ, ಕೊನೆಕ್ಷಣದಲ್ಲಿ ವರದಿಯ ಚರ್ಚೆಯನ್ನು ಮುಂದೂಡಲಾಯಿತು. ಈಗ ಮೇ 9 ರಂದು ಸಾಮಾನ್ಯ ವಿಷಯಗಳೊಂದಿಗೆ ವರದಿಯ ಚರ್ಚೆ ಕೈಗೆತ್ತಿಕೊಳ್ಳುತ್ತಿದ್ದು, ಕುತೂಹಲ ಮೂಡಿಸಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಚಿವ ಸಂಪುಟದ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024ರಲ್ಲಿ ಮಾಡಿರುವ ಶಿಫಾರಸ್ಸುಗಳ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಿದೆ.
ಕೇಂದ್ರದ ಜಾತಿ ಜನಗಣತಿಗೆ ತಯಾರಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ಹೆಚ್ಚು ವಿಳಂಬ ಮಾಡದಂತೆ ಅಂಗೀಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಸಮೀಕ್ಷೆಯ ಮೂಲ ಅಂಕಿ ಅಂಶಗಳನ್ನು ಮಂಡಿಸಲಿದ್ದು, ವರದಿ ಅವೈಜ್ಞಾನಿಕವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ.
ವರದಿಯನ್ನು ಅಂಗೀಕರಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎನ್ನಲಾಗಿದೆ.