
Caste Census -2025 | ಗೊಂದಲದ ಗೂಡಾದ ಜಾತಿಗಣತಿ ; ಪ್ರತಿಶತ ಸಮೀಕ್ಷೆಯೇ ಅನುಮಾನ?
ಪ್ರತಿಯೊಂದು ಮನೆಯೂ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ಜಾತಿಗಣತಿಗೆ ಆರ್.ಆರ್.ಸಂಖ್ಯೆ ಬಳಸಲಾಗುತ್ತಿದೆ. ಗಣತಿದಾರರಿಗೆ ಅನುಕೂಲ ಕಲ್ಪಿಸಲು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ನೀಡುವ ವೇಳೆ ಮನೆ ಮನೆಗೂ ತೆರಳಿ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಆದರೆ, ಬಹುತೇಕ ಕಡೆಗಳಲ್ಲಿಈವರೆಗೂ ಸ್ಟಿಕ್ಕರ್ ಅಂಟಿಸಿಲ್ಲ.
ಕರ್ನಾಟಕದ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗ ಅಳವಡಿಸಿಕೊಂಡಿರುವ ಸಮೀಕ್ಷಾ ಕಾರ್ಯವಿಧಾನ ಹಲವು ಗೊಂದಲಗಳಿಗೆ ಆಸ್ಪದ ನೀಡುತ್ತಿದೆ.
ಪ್ರತಿಯೊಂದು ಮನೆಯೂ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ಜಾತಿಗಣತಿಗೆ ಆರ್.ಆರ್.ಸಂಖ್ಯೆ ಬಳಸಲಾಗುತ್ತಿದೆ. ಗಣತಿದಾರರಿಗೆ ಅನುಕೂಲ ಕಲ್ಪಿಸಲು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ನೀಡುವ ವೇಳೆ ಮನೆ ಮನೆಗೂ ತೆರಳಿ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಆದರೆ, ಬಹುತೇಕ ಕಡೆಗಳಲ್ಲಿಈವರೆಗೂ ಸ್ಟಿಕ್ಕರ್ ಅಂಟಿಸಿಲ್ಲ.
ಸಾಮಾನ್ಯವಾಗಿ ಬೆಸ್ಕಾಂ ವತಿಯಿಂದ ಪ್ರತಿ ತಿಂಗಳ 11ರಂದು ವಿದ್ಯುತ್ ಬಿಲ್ ನೀಡಲಾಗುತ್ತದೆ. ಆದರೆ, ಜಾತಿಗಣತಿ ಸೆ.22 ರಿಂದಲೇ ಆರಂಭವಾಗುತ್ತಿರುವ ಕಾರಣ ಎಲ್ಲ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದು ಸಾಧ್ಯವಾಗಿಲ್ಲ. ಇದು ಕೂಡ ಗಣತಿದಾರರಲ್ಲಿ ಗೊಂದಲ ಸೃಷ್ಟಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಿಕ್ಷಕರ ಮೇಲೆ ಕಾರ್ಯದೊತ್ತಡ
ಚುನಾವಣೆ, ಯೋಜನೆಗಳ ಸಮೀಕ್ಷೆ ಸೇರಿದಂತೆ ಇನ್ನಿತರ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶಿಕ್ಷಕರನ್ನು ಬಳಸುವ ಪರಿಪಾಠ ಈ ಹಿಂದಿನಿಂದಲೂ ನಡೆದು ಬಂದಿದೆ.
ಇತ್ತೀಚೆಗಷ್ಟೇ ಒಳ ಮೀಸಲಾತಿ ಸಮೀಕ್ಷೆ ಮುಗಿಸಿದ್ದ ಶಿಕ್ಷಕರು ಇದೀಗ ಹೊಸ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಅಣಿಯಾಗುತ್ತಿದ್ದಾರೆ. ರಾಜ್ಯದಲ್ಲಿರುವ ಒಟ್ಟು 1.77 ಲಕ್ಷ ಪ್ರಾಥಮಿಕ ಶಾಲೆ ಶಿಕ್ಷಕರಲ್ಲಿ ಸಮೀಕ್ಷೆಗೆ 1.50 ಲಕ್ಷ ಶಿಕ್ಷಕರನ್ನು ಬಳಸಲಾಗುತ್ತಿದೆ.
ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮ, ಬೋಧನಾ ಅವಧಿ, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯ ಹಾಗೂ ಚುನಾವಣಾ ಕಾರ್ಯದ ಭಾರವೂ ಅವರ ಮೇಲಿದೆ. ಈ ಮಧ್ಯೆ ಎರಡು ತಿಂಗಳ ಅಂತರದಲ್ಲೇ ಮತ್ತೊಂದು ಸಮೀಕ್ಷೆ ಶಿಕ್ಷಕರನ್ನು ಬಳಸುತ್ತಿರುವುದು ಕಾರ್ಯದೊತ್ತಡ ಹೆಚ್ಚಿಸಿದೆ. ಪ್ರಸ್ತುತ, ಶಾಲೆಗಳಿಗೆ ಸೆ.20 ರಿಂದ ಅ.7 ರವರೆಗೆ ದಸರಾ ರಜೆ ನೀಡಲಾಗಿದೆ. ಈ ಅವಧಿಯಲ್ಲೂ ವಿಶ್ರಾಂತಿ ಇಲ್ಲದೇ ಸಮೀಕ್ಷೆಯಲ್ಲಿ ಭಾಗಿಯಾಗಬೇಕಿರುವ ಕಾರಣ ಪ್ರಾಮಾಣಿಕವಾದ ಸಮೀಕ್ಷೆ ಕಷ್ಟ ಸಾಧ್ಯವಾಗಬಹುದು ಎನ್ನಲಾಗಿದೆ.
ಅಸಮರ್ಪಕ ತರಬೇತಿ, ಕಾಲಮಿತಿ ಗೊಂದಲ
ಸಾಮಾಜಿಕ ಸಮೀಕ್ಷೆಯು 60 ಪ್ರಶ್ನೆಗಳನ್ನು ಒಳಗೊಂಡಿದೆ. ನಾಗರಿಕರ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ವಿವರಗಳನ್ನು ಸಂಗ್ರಹಿಸಬೇಕಾಗಿರುವುದರಿಂದ ಒಂದು ಮನೆಯ ಸಮೀಕ್ಷೆ ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಅಂದಾಜಿಸಿಲ್ಲ. ಹಿಂದುಳಿದ ಆಯೋಗದ ಅಧಿಕಾರಿಗಳ ಪ್ರಕಾರ, ಇಬ್ಬರಿಂದ ಮೂವರು ಸದಸ್ಯರಿರುವ ಪ್ರತಿ ಮನೆಗೆ 15-16 ನಿಮಿಷ , ಐವರು ಹಾಗೂ ಅದಕ್ಕಿಂತ ಮೇಲ್ಪಟ್ಟು ಸದಸ್ಯರಿರುವ ಮನೆಗೆ 20 ನಿಮಿಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಶಿಕ್ಷಕರು, ಆಶಾ ಕಾರ್ಯಕರ್ತರು ಸೇರಿದಂತೆ 1.70 ಲಕ್ಷ ಗಣತಿದಾರರು ಪ್ರತಿ ದಿನ ತಲಾ 20 ಮನೆಗಳನ್ನು ಸಮೀಕ್ಷೆ ನಡೆಸಿದರೂ 15 ದಿನಗಳ ಅಂತರದಲ್ಲಿ ಕೇವಲ 5.10 ಕೋಟಿ ಜನರನ್ನು ತಲುಪಬಹುದು. ಈ ಹಿಂದೆ ಕಾಂತರಾಜು ಸಮೀಕ್ಷೆಯಲ್ಲಿ 1.35 ಕೋಟಿ ಮನೆಗಳಿದ್ದವು. ಒಟ್ಟು 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಜನಸಂಖ್ಯೆ ಏಳು ಕೋಟಿ ದಾಟಿದೆ. ಹಾಗಾಗಿ ಅವಧಿಯಲ್ಲಿ ಗಣತಿ ಸವಾಲಿನ ಕೆಲಸವಾಗಿದೆ.
ಸಮೀಕ್ಷೆಗೆ ಒಳಗೊಳ್ಳುವುದೇ ಕಷ್ಟ
ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಸಂದರ್ಭಗಳಲ್ಲಿ ಕೆಲವು ಕಡೆ ಕುಟುಂಬದ ಸದಸ್ಯರು ಲಭ್ಯವಾಗದೇ ಇರಬಹುದು. ಗಣತಿದಾರರು ಬೆಳಿಗ್ಗೆಯಿಂದ ಸಂಜೆಯೊಳಗೆ ಮನೆಗಳಿಗೆ ಭೇಟಿ ನೀಡಿದಾಗ ಕೆಲಸ ಕಾರ್ಯಗಳಿಗೆ ಹೋಗಿರುತ್ತಾರೆ. ಆಗ ಯಾರಿಂದ ಮಾಹಿತಿ ಸಂಗ್ರಹಿಸಬೇಕು ಅಥವಾ ಮರುಭೇಟಿ ನೀಡಬಹುದೇ ಎಂಬುದು ಖಚಿತ ಹಾಗೂ ನಿಖರವಾಗಿಲ್ಲ.
ಇನ್ನು ಅಂತರ್ಜಾತಿ ಅಥವಾ ಅಂತ ಧರ್ಮೀಯ ಕುಟುಂಬಗಳಲ್ಲಿ ಪ್ರತಿ ಸದಸ್ಯರ ವರ್ಗ, ಧರ್ಮವನ್ನು ಪ್ರತ್ಯೇಕವಾಗಿ ದಾಖಲಿಸುವುದು ಸಂಕೀರ್ಣತೆಯಿಂದ ಕೂಡಿರಲಿದೆ. ಸ್ಪಷ್ಟ ಮಾರ್ಗದರ್ಶನ ಇಲ್ಲದೇ ಸಮೀಕ್ಷೆಗೆ ಇಳಿದರೆ ಫಲಿತಾಂಶ ಅಸಮರ್ಪಕವಾಗಬಹುದು ಎಂಬ ಆತಂಕವಿದೆ.
ಯೋಜನೆ, ಉದ್ದೇಶದ ಅರಿವಿಲ್ಲದಿದ್ದರೆ ಹಿನ್ನಡೆ
ಜಾತಿಗಣತಿಗೆ ಸೂಕ್ತ ತರಬೇತಿ, ಯೋಜನೆ ಮತ್ತು ಸ್ಪಷ್ಟತೆ ಇಲ್ಲದಿದ್ದರೆ ಸಮೀಕ್ಷೆಯ ಉದ್ದೇಶವೇ ಹಾಳಾಗಬಹುದು. 185 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ ಎಚ್.ಕಾಂತರಾಜು ಸಮೀಕ್ಷೆಯ ವರದಿ ಮೂಲೆಗುಂಪಾಗಿದ್ದೇ ಇದಕ್ಕೆ ಉತ್ತಮ ನಿದರ್ಶನ, ಈ ಮಧ್ಯೆ, 100 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಕೈಗೊಂಡರೂ ಶಿಫಾರಸಿನಂತೆ ವರದಿ ಅನುಷ್ಠಾನವಾಗಿಲ್ಲ. ಈಗ 425ಕೋಟಿ ವೆಚ್ಚದಲ್ಲಿ ಹೊಸ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯನ್ನಾದರೂ ಯಾವುದೇ ಲೋಪಗಳಿಲ್ಲದಂತೆ ನಡೆಸಿದರೆ ಸಾರ್ಥಕವಾಗಲಿದೆ. ಇಲ್ಲವಾದಲ್ಲಿ ಬೊಕ್ಕಸಕ್ಕೆ ಸಮೀಕ್ಷೆಗಳಿಂದಲೇ ದೊಡ್ಡ ನಷ್ಟ ಸಂಭವಿಸುತ್ತಿದೆ, ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂಬುದು ಅರ್ಥವಾಗಲಿದೆ ಎಂದು ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಹನುಮಂತರಾಯಪ್ಪ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಸರ್ಕಾರ ನಿಯೋಜಿತ ಗಣತಿದಾರರಿಗೆ ಸೂಕ್ತ ತರಬೇತಿ ನೀಡಿಲ್ಲ, ಸಮೀಕ್ಷೆ ಕಾರ್ಯವಿಧಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡಿಲ್ಲ ಎಂದು ದೂರಿದರು.
ಸಂಶಯಗಳಿಗೆ ಕಾರಣವಾದ ಗಣತಿ
1948 ರ ಜಾತಿಗಣತಿ ಕಾಯ್ದೆಯಡಿ ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಆದರೆ, ಜಾತಿ, ಜನಗಣತಿಯನ್ನೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದಿನ ಸಮೀಕ್ಷೆಗಳಲ್ಲಿ ಜಾತಿವಾರು ಜನಸಂಖ್ಯೆಯ ಬಗ್ಗೆ ಪ್ರಲ ಸಮುದಾಯಗಳ ಆಕ್ಷೇಪ ವ್ಯಕ್ತಪಡಿಸಿದ್ದವು. ಹೊಸ ವರದಿಯಲ್ಲಿ ಅಂಕಿ ಸಂಖ್ಯೆಗಳು ವ್ಯತ್ಯಾಸವಾದರೆ ಮತ್ತೆ ಅಪಸ್ವರಗಳು ಕೇಳಿ ಬರುವ ಆತಂಕ ಎದುರಾಗಿದೆ. ಕಾಂತರಾಜ್ ಸಮೀಕ್ಷೆಯ ಮೂಲ ವರದಿ ಕಳೆದು ಹೋದ ಘಟನೆ ಸಮೀಕ್ಷೆಯನ್ನೇ ಅನುಮಾನದಿಂದ ನೋಡುವಂತಾಗಿತ್ತು. ಅಂತಹ ಘಟನೆಗಳು ಮರುಳುಹಿಸಿದರೆ ಸಮೀಕ್ಷೆಯು ಪಾರದರ್ಶಕತೆ ಕಳೆದುಕೊಳ್ಳಲಿದೆ.
ಜಾತಿ ಲೆಕ್ಕಾಚಾರ, ಮೀಸಲಾತಿ, ಹೊಸ ಜಾತಿಗಳ ಸೇರ್ಪಡೆಯೇ ವಿವಾದಗಳಾಗಿ ಬೆಳೆಯುವ ಆತಂಕವಿದೆ. ಇದು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿ ವರದಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 2015-18ರ ಅವಧಿಯಲ್ಲಿ ನಡೆದ ಕಾಂತರಾಜು ಆಯೋಗದ ಸಮೀಕ್ಷೆಯ ವರದಿ ಬಿಡುಗಡೆಗೆ ಹತ್ತು ವರ್ಷ ತೆಗೆದುಕೊಂಡು ಕೊನೆಗೆ ವರದಿಯನ್ನೇ ಮೂಲೆಗುಂಪು ಮಾಡಲಾಯಿತು. ಸಾಮಾಜಿಕ ಉದ್ವಿಗ್ನತೆ, ರಾಜಕೀಯ ಧ್ರುವೀಕರಣಕ್ಕೂ ಸಮೀಕ್ಷೆ ಕಾರಣವಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದ್ದು, ಇಡೀ ಸಮೀಕ್ಷೆ ಪ್ರಕ್ರಿಯೆಯೇ ಗೊಜಲಾಗಿದೆ.
ಗೊಂದಲಗಳಿಗೆ ಆಯೋಗದ ಸಮರ್ಥನೆ ಏನು?
ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿರುವುದನ್ನು ಖಾತ್ರಿಪಡಿಸಿಕೊಳ್ಳಲು ಜಿಯೋ ಟ್ಯಾಗ್ ಬಳಸಲಾಗುತ್ತಿದೆ. ಇದರಿಂದ ಸಿಬ್ಬಂದಿ ಯಾವ ಮನೆಗೆ ಹೋಗಿದ್ದಾರೆ, ಯಾವ ಊರು ಎಂಬ ಮಾಹಿತಿ ತಿಳಿಯಲಿದೆ.
ಸಮೀಕ್ಷೆಗೆ ಬಳಸುವ ಮೊಬೈಲ್ ಆಯಪ್ನಲ್ಲಿ ಈ ಹಿಂದಿನ ಸಮೀಕ್ಷೆಯ ವಿವರಗಳು ಕೂಡ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಸಮೀಕ್ಷೆ ಮುಗಿದ ಬಳಿಕ ಕುಟುಂಬದ ಸದಸ್ಯರಿಗೆ ಯೂನಿಕ್ ಕೋಡ್ ನೀಡಲಾಗುತ್ತದೆ. ಆಗ ಯಾರೂ ಕೂಡ ಸಮೀಕ್ಷೆಯ ಬಗ್ಗೆ ದೂರಲಾಗದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಯೂನಿಕ್ ಕೋಡ್ನಲ್ಲಿ ಆಧಾರ್ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಅಗತ್ಯವಿದ್ದಲ್ಲಿ ಮಾಹಿತಿ ಪರಿಷ್ಕರಿಸಬಹುದು. ಯಾರು ಮಾಹಿತಿ ಪರಿಷ್ಕರಿಸಿದ್ದಾರೆ ಎಂಬುದು ಆಯೋಗಕ್ಕೆ ತಿಳಿಯಲಿದೆ. ಸಮೀಕ್ಷೆ ಮುಗಿದ ಬಳಿಕ ಅಂಕಿ ಅಂಶಗಳ ಸಂಗ್ರಹಣೆ ವೇಳೆ ಕೃತಕ ಬುದ್ಧಿಮತ್ತೆ(ಎಐ) ಬಳಸಲಾಗುವುದು ಎಂದು ತಿಳಿಸಿದರು.
ಗಣತಿದಾರರಿಗೆ ಹೆಚ್ಚಿನ ಭತ್ಯೆ
ದಸರಾ ರಜೆಯ ಅವಧಿಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಸಿ ಗ್ರೂಪ್ ಸಿಬ್ಬಂದಿಗೆ ಹೆಚ್ಚು ಭತ್ಯೆ ನೀಡಲಾಗುವುದು. ಶಿಕ್ಷಕರಿಗೆ ಸಾಂದರ್ಭಿಕ ರಜೆ ಅಥವಾ ರಜೆ ನಗರೀಕರಣ ವ್ಯವಸ್ಥೆಯೂ ಇರಲಿದೆ.
ಸಮೀಕ್ಷೆಯಲ್ಲಿ 100-150 ಮನೆಗಳ ಬ್ಲಾಕ್ ಮಾಡಲಾಗಿದ್ದು, ಶಿಕ್ಷಕರಿಗೆ 20 ಸಾವಿರ ರೂ. ಪಾವತಿಸಲಾಗುವುದು, ಆಶಾ ಕಾರ್ಯಕರ್ತೆಯರಿಗೆ 2000 ಸಾವಿರ ರೂ. ಪಾವತಿಸಲು ನಿರ್ಧರಿಸಲಾಗಿದೆ. ಇದು ತಾರತಮ್ಯದಿಂದ ಕೂಡಿರುವ ಕಾರಣ ಆಶಾ ಕಾರ್ಯಕರ್ತೆಯರು ಸಮೀಕ್ಷೆಯಿಂದ ಹೊರಗುಳಿಯುವ ಮಾತನ್ನಾಡುತ್ತಿರುವುದು ಹಿನ್ನಡೆ ತಂದಿದೆ.
ಸಿ ಗ್ರೂಪ್ ಸಿಬ್ಬಂದಿ ಬಳಕೆ
ಜಾತಿಗಣತಿಗೆ 1.70 ಲಕ್ಷ ಸಿಬ್ಬಂದಿ ಸಾಕಾಗದ ಕಾರಣ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಸಿ ದರ್ಜೆ ಸಿಬ್ಬಂದಿ, ನಿಗಮ ಹಾಗೂ ಮಂಡಳಿಗಳ ಡಿ ದರ್ಜೆ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಲು ನಿರ್ಧರಿಸಲಾಗಿದೆ. ಹಾಗಾಗಿ ಒಟ್ಟು ಗಣತಿದಾರರ ಸಂಖ್ಯೆ ಹೆಚ್ಚುವುದರಿಂದ ನಿಗದಿ ಕಾಲಾವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬಹುದು ಎಂಬುದು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯ (ಇಡಿಸಿಎಸ್ ) ತಂತ್ರಜ್ಞರ ಸಮಿತಿಯ ಮೇಲ್ವಿಚಾರಕರೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಜಿಲ್ಲಾವಾರು ಗ್ರೂಪ್ ಸಿ ಸಿಬ್ಬಂದಿ ಅಲಭ್ಯ ಅಥವಾ ಕೊರತೆ ಇರುವ ಕಡೆಗಳಲ್ಲಿ ಮಾತ್ರ ಆಶಾ ಕಾರ್ಯಕರ್ತೆಯರನ್ನು ಬಳಸಲಾಗುವುದು. ಮೇಲ್ವಿಚಾರಕರಿಗೆ ಪ್ರಥಮ ಹಾಗೂ ದ್ವಿತೀಯ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಆಧಾರ್ ಹಾಗೂ ರೇಷನ್ ಕಾರ್ಡ್ ಲಿಂಕ್ ಆಗಿರುವುದರಿಂದ ಸಾಕಷ್ಟು ಮಾಹಿತಿ ಲಭ್ಯವಾಗಲಿದೆ. ಹಾಗಾಗಿ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಬಹುದು. ಈ ಸಂಬಂಧ ಸಾಕಷ್ಟು ತರಬೇತಿಯನ್ನೂ ನೀಡಲಾಗಿದೆ ಎಂದು ಹೇಳಿದರು.
ಮೂರು ಹಂತಗಳಲ್ಲಿ ಸಮೀಕ್ಷೆ
ಕಳೆದ 10 ದಿನಗಳಿಂದ ಆಯಪ್ ಬಳಕೆ ಕುರಿತಂತೆ ತರಬೇತಿ ನೀಡಲಾಗಿದೆ. ಶೇ 99 ರಷ್ಟು ಲೋಪಗಳನ್ನು ಸರಿಪಡಿಸಲಾಗಿದೆ. ಭಾನುವಾರ ಆಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಮನೆ ಮನೆ ಭೇಟಿಯಲ್ಲಿ ತಪ್ಪಿಹೋದವರು ಗ್ರಾಮ ಪಂಚಾಯ್ತಿವಾರು ವಿಶೇಷ ಶಿಬಿರಗಳಲ್ಲಿ ಮಾಹಿತಿ ನೀಡಬಹುದು. ದೂರದ ಊರುಗಳಲ್ಲಿ ಇರುವವರು, ಗಣತಿದಾರರಿಗೆ ಸಿಗಲು ಆಗದವರು ಅಥವಾ ಜಾತಿ ಹೇಳಿಕೊಳ್ಳಲು ಹಿಂಜರಿಯುವವರು ಆನ್ಲೈನ್ ಮೂಲಕ ಸಮೀಕ್ಷೆಗೆ ಮಾಹಿತಿ ನೀಡಬಹುದು.
ಕಾಂತರಾಜು ಸಮೀಕ್ಷೆಯಲ್ಲಿ 2 ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ನಾಗಮೋಹನ್ ದಾಸ್ ಸಮೀಕ್ಷೆಯಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಸಮೀಕ್ಷೆ ಉತ್ತಮವಾಗಿದೆ. ಹೆಚ್ಚು ಹೊಸ ಜಾತಿಗಣತಿಗೆ ಹೆಚ್ಚು ಜಾಗೃತಿ ಮೂಡಿಸಿರುವುದರಿಂದ ಎಲ್ಲ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡರೆ ಉತ್ತಮವಾದ ಜಾತಿಗಣತಿ ವರದಿ ನೀಡಬಹುದು ಎಂದು ಹಿಂದುಳಿದ ವರ್ಗಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.